ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

ವಿಪಕ್ಷಗಳ ಒಕ್ಕೂಟ ದೋಸ್ತಿಯನ್ನು ರಾಜ್ಯದ ಹಿತಕ್ಕಾಗಿ ಬಳಸಿ: ಸಿಎಂ ಸಿದ್ದರಾಮಯ್ಯಗೆ ತೇಜಸ್ವಿ ಸೂರ್ಯ ಸಲಹೆ

ಕಾಂಗ್ರೆಸ್‌ ಹಾಗೂ ಡಿಎಂಕೆ ವಿಪಕ್ಷಗಳ ಒಕ್ಕೂಟದ ಭಾಗವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ದೋಸ್ತಿಯನ್ನು ರಾಜ್ಯದ ಹಿತಕ್ಕಾಗಿ ಬಳಸಿಕೊಳ್ಳಬೇಕೆಂದು ಸಂಸದ ತೇಜಸ್ವಿ ಸೂರ್ಯ ಅವರು ಆಗ್ರಹಿಸಿದ್ದಾರೆ.
Published on

ಬೆಂಗಳೂರು: ಕಾಂಗ್ರೆಸ್‌ ಹಾಗೂ ಡಿಎಂಕೆ ವಿಪಕ್ಷಗಳ ಒಕ್ಕೂಟದ ಭಾಗವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ದೋಸ್ತಿಯನ್ನು ರಾಜ್ಯದ ಹಿತಕ್ಕಾಗಿ ಬಳಸಿಕೊಳ್ಳಬೇಕೆಂದು ಸಂಸದ ತೇಜಸ್ವಿ ಸೂರ್ಯ ಅವರು ಆಗ್ರಹಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನ ಜೀವನದಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದು, ಬಿಜೆಪಿಯೂ ಕೂಡ ಬೆಂಬಲ ನೀಡುತ್ತಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಕಾವೇರಿ ನದಿ ನಿರಿನ ವಸ್ತುಸ್ಥಿತಿಯ ಬಗ್ಗೆ ತಿಳಿಸಿಕೊಡುವಲ್ಲಿ ವಿಫಲವಾಗಿದೆ. ರಾಜ್ಯ ಸರ್ಕಾರ ಕಾವೇರಿ ಪ್ರಾಧಿಕಾರ ಹಾಗೂ ನಿಯಂತ್ರಣ ಸಮಿತಿಯ ಮುಂದೆ ವಾದ ಮಂಡನೆ ಮಾಡದೇ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ. ನಾಡು, ನುಡಿ ಹಾಗೂ ಜಲ ಸಂರಕ್ಷಣೆಯಲ್ಲಿ ರಾಜಕೀಯ ಮಾಡಬಾರದು ಎಂಬುದನ್ನು ತಿಳಿದುಕೊಳ್ಳದೇ ಆಡಳಿತ ಕಾಂಗ್ರೆಸ್‌ ಸರ್ಕಾರ ರಾಜಕೀಯವನ್ನು ಬೆರೆಸಿ ತಮ್ಮ ವಿಫಲತೆಗಳನ್ನು ಮುಚ್ಚಿಟ್ಟು ಇನ್ನೊಬ್ಬರ ಮೇಲೆ ಗೂಬೆ ಕೂರಿಸಲು ಹೊರಟಿದೆ ಎಂದು ಹೇಳಿದರು.

ಕಳೆದ 15 ದಿನಗಳ ಹಿಂದೆ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಭೇಟಿ ಮಾಡಿದ್ದೇವೆ. ಮತ್ತೊಮ್ಮೆ ಜಲಶಕ್ತಿ ಸಚಿವರನ್ನೂ ಭೇಟಿ ಮಾಡಿದ್ದೇವೆ. ಜೊತೆಗೆ, ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಸಂಸದರೊಂದಿಗೆ ಜಂಟಿ ಸಭೆಯನ್ನು ಕರೆದು ಕೇಂದ್ರ ಸಚಿವರನ್ನೂ ಭೇಟಿ ಮಾಡಿದ ನಂತರ ಪುನಃ ಮಾಧ್ಯಮಗಳ ಮುಂದೆ ಬಂದು ಬಿಜೆಪಿಯ 25 ಸಂಸದರು ಏನೂ ಮಾಡುತ್ತಿದ್ದ ಎಂದು ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಇದು ರಾಜಕಾರಣವಲ್ಲದೇ ಬೇರೇನು ಹೇಳಿ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಕರ್ನಾಟಕ ಮಾಡಿದ ವಾದದ ಬಗ್ಗೆ ಸಂಸದರು ಮಾತನಾಡಿದ್ದಾರೆ. ರಾಜ್ಯದಲ್ಲಿ ನೀರು ಕಡಿಮೆಯಾಗಿದ್ದರ ಬಗ್ಗೆ ಧ್ವನಿ ಎತ್ತಿದ್ದಾರೆ. ಕೇಂದ್ರ ಸರ್ಕಾರದ ಅಧಿಕಾರಿಗಳು ಸಿಡಬ್ಲ್ಯೂಎಂಎ ಮುಂದೆ ಚರ್ಚೆ ಮಾಡಿದ್ದಾರೆ. ಈ ವಿಚಾರವನ್ನು ಸಿಎಂ ಹಾಗೂ ಡಿಸಿಎಂ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಹಾಗೂ ಡಿಎಂಕೆ ವಿಪಕ್ಷಗಳ ಒಕ್ಕೂಟದಲ್ಲಿವೆ. 2024 ಲೋಕಸಭಾ ಚುನಾವಣೆಯ ನಿಟ್ಟಿನಲ್ಲಿ ಒಗ್ಗಟ್ಟಾಗಿದ್ದಾರೆ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಜೊತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ನೇರವಾಗಿ ಮಾತನಾಡಿ ರಾಜ್ಯದ ಹಿತಕ್ಕಾಗಿ ದೋಸ್ತಿಯನ್ನು ಬಳಕೆ ಮಾಡಿಕೊಳ್ಳಬೇಕು. ಇನ್ನು ಮೇಕೆದಾಟು ಯೋಜನೆಯ ಬಗ್ಗೆ ತಮಿಳುನಾಡು ಕ್ಯಾತೆ ತೆಗೆಯದಂತೆ ಎನ್‌ಒಸಿ ಪಡೆದು ಜಲಾಶಯ ನಿರ್ಮಾಣ ಮಾಡಬೇಕು. ಕಾವೇರಿ ನದಿ ನೀರಿನ ವಿಚಾರವಾಗಿ ನಾವೆಲ್ಲರೂ ನಿಮ್ಮ ಜೊತೆಗೆ ಪಕ್ಷಾತೀತವಾಗಿ ಬೆಂಬಲ ನೀಡುತ್ತೇವೆ ಎಂದರು.

ನಿನ್ನೆ ಲೆಹರ್‌ ಸಿಂಗ್‌ ಅವರು ತಮಿಳುನಾಡು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾತನಾಡಲು ಹೋದಾಗ ಅವರು ಬಿಜೆಪಿಯವರು ಎನ್ನುವ ಕಾರಣಕ್ಕೆ 2 ದಿನಗಳು ಕಾಯುತ್ತಾ ಕುಳಿತರೂ ಭೇಟಿಗೆ ಅವಕಾಶ ಕೊಡಲಿಲ್ಲ. ಆದರೆ, ನೀವು ಹೋದರೆ ನಿಮಗೆ ತಕ್ಷಣವೇ ಭೇಟಿ ಮಾಡಲು ಅವಕಾಶ ಮಾಡಿಕೊಡುತ್ತಾರೆ. ಇನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಎಸಿ ಕಚೇರಿಯಲ್ಲಿ ಕುಳಿತುಕೊಂಡು ನೀರು ಬಿಡಿ ಎಂದು ಆದೇಶ ಕೊಡುವುದು ಸರಿಯಲ್ಲ.

ಜಲಾಶಯಗಳನ್ನು ನೇರವಾಗಿ ಭೇಟಿ ಮಾಡಿ ಪರಿಶೀಲಿಸಿ ನೀರು ಬಿಡುವುದಕ್ಕೆ ಆದೇಶ ಕೊಡಬೇಕು. ರಿಯಾಲಿಟಿ ಪರೀಕ್ಷೆ ಮಾಡದೇ ನೀರು ಬಿಡಿ ಎಂದು ಹೇಳುವುದು ಬಿಟ್ಟು ಫೀಲ್ಡ್‌ ವಿಸಿಟ್‌ ಮಾಡಿ ಆದೇಶ ಕೊಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಅರ್ಜಿಯನ್ನು ಹಾಕಬೇಕು. ಇದಕ್ಕೆ ರಾಜ್ಯದ ಎಲ್ಲ ಸಂಸದರು ರಾಜ್ಯಕ್ಕೆ ಬೆಂಬಲ ಕೊಡುತ್ತಾರೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com