ಬಿಜೆಪಿಯೊಂದಿಗಿನ ಮೈತ್ರಿ ತಂದ ಸಂಕಷ್ಟ; ಭಿನ್ನಮತ ಶಮನಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರಯತ್ನ, ಅತೃಪ್ತ ಶಾಸಕರ ಮನವೊಲಿಕೆ

ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪಕ್ಷದ ಗುರುಮಿಠಕಲ್ ಶಾಸಕ ಶರಣಗೌಡ ಪಾಟೀಲ್ ಕಂದಕೂರ ಅವರ ಮನವೊಲಿಸುವಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ
Updated on

ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ. ಈ ಬೆನ್ನಲ್ಲೇ, ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪಕ್ಷದ ಗುರುಮಿಠಕಲ್ ಶಾಸಕ ಶರಣಗೌಡ ಪಾಟೀಲ್ ಕಂದಕೂರ ಅವರ ಮನವೊಲಿಸುವಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ನಿಖಿಲ್ ಗುರುವಾರ ಬೆಂಗಳೂರಿನಲ್ಲಿ ಶಾಸಕರನ್ನು ಭೇಟಿ ಮಾಡಿ ಬಿಜೆಪಿಯೊಂದಿಗಿನ ಮೈತ್ರಿಯ ಅಗತ್ಯವನ್ನು ವಿವರಿಸಿದರು. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್, 'ಅವರು ಕೆಲವು ವಿಷಯಗಳ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅದನ್ನು ಪಕ್ಷದ ಹಿರಿಯ ನಾಯಕರ ಗಮನಕ್ಕೆ ತಂದಿದ್ದೇನೆ' ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಶರಣಗೌಡ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು.

'ಕುಮಾರಸ್ವಾಮಿ ಅವರು ಕೂಡ ಶರಣಗೌಡ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಚರ್ಚಿಸಿದ್ದಾರೆ. ಇದೀಗ ಪರಿಸ್ಥಿತಿ ತಿಳಿಯಾಗಿದೆ. ಈ ಹಂತದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಏಕೆ ಮುಖ್ಯ ಎಂದು ನಾವು ಅವರಿಗೆ ಅರ್ಥಮಾಡಿಸಿದ್ದೇವೆ ಮತ್ತು ಅವರು ಸಹ ಒಪ್ಪಿಕೊಂಡಿದ್ದಾರೆ' ಎಂದು ನಿಖಿಲ್ ಹೇಳಿದರು.

ಬಿಜೆಪಿಯೊಂದಿಗಿನ ಜೆಡಿಎಸ್ ಮೈತ್ರಿ ಕುರಿತು ಮನವರಿಕೆಯಾಗಿದ್ದಕ್ಕಿಂತ ಹೆಚ್ಚಾಗಿ ತಾವು ಪಕ್ಷದ ಹಿರಿಯ ನಾಯಕರ ಮಾತಿಗೆ ಮಣಿದಿದ್ದೇನೆ ಎಂದು ಶರಣಗೌಡ ಸಭೆಯ ಬಳಿಕ ಹೇಳಿದರು.

'ನಾವು ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಪಕ್ಷದ ಹಿರಿಯ ನಾಯಕರು ನನ್ನ ಅಭಿಪ್ರಾಯವನ್ನು ಗೌರವಿಸಿ ಯುವ ಘಟಕದ ಅಧ್ಯಕ್ಷರನ್ನು ಕಳುಹಿಸಿದ್ದಾರೆ. ನನ್ನ ಕಳವಳವನ್ನು ಅವರೊಂದಿಗೆ ಹಂಚಿಕೊಂಡಿದ್ದೇನೆ' ಎಂದೂ ಅವರು ಹೇಳಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಬಹಿರಂಗವಾದ ಬೆನ್ನಲ್ಲೇ, ಶರಣಗೌಡ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕರು ನಿಖಿಲ್‌ಗೆ ಶಾಸಕರ ಮನವೊಲಿಸುವ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com