ಸ್ಟಾಲಿನ್‌ ಪರ ಪ್ರಚಾರ ಮಾಡಿದ್ದ ಸಿದ್ದರಾಮಯ್ಯಗೆ ಹೈಕಮಾಂಡ್ ತಮ್ಮ ಬುಡ ಅಲುಗಾಡಿಸಬಹುದೆಂಬ ಭಯವಿದೆ: ಬಿಜೆಪಿ

ಸ್ಟಾಲಿನ್ ಗುಲಾಮರಂತೆ‌ ಇರುವ ಕಾಂಗ್ರೆಸ್ ನಾಯಕರು ಅವರ ಬಳಿ ಮಾತಾಡುವುದಕ್ಕೂ ಹೆದರಿ ಹೇಡಿಗಳಂತಿರಲು ಹಲವು ಕಾರಣಗಳಿವೆ ಎಂದು ಬಿಜೆಪಿ ಶನಿವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸ್ಟಾಲಿನ್ ಗುಲಾಮರಂತೆ‌ ಇರುವ ಕಾಂಗ್ರೆಸ್ ನಾಯಕರು ಅವರ ಬಳಿ ಮಾತಾಡುವುದಕ್ಕೂ ಹೆದರಿ ಹೇಡಿಗಳಂತಿರಲು ಹಲವು ಕಾರಣಗಳಿವೆ ಎಂದು ಬಿಜೆಪಿ ಶನಿವಾರ ಹೇಳಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರನ್ನು ಸ್ಟಾಲಿನ್ ಗುಲಾಮರು ಎಂದು ವಾಗ್ದಾಳಿ ನಡೆಸಿದೆ.

ಸ್ಟಾಲಿನ್‌ ಪರ ಪ್ರಚಾರ ಮಾಡಿದ್ದ ಸಿದ್ದರಾಮಯ್ಯರವರಿಗೆ ಹೈಕಮಾಂಡ್ ತಮ್ಮ ಬುಡ ಅಲುಗಾಡಿಸಬಹುದೆಂಬ ಭಯವಿದೆ ಎಂದು ಹೇಳಿದೆ.

ತಮಿಳುನಾಡಿನಲ್ಲಿ ಡಿಎಂಕೆ ಪರ ಪ್ರಚಾರ ಮಾಡಿದ್ದ ಡಿ.ಕೆ. ಶಿವಕುಮಾರ್ ತಮ್ಮ ಸ್ವಾರ್ಥ ಮಹತ್ವಾಕಾಂಕ್ಷೆಗಾಗಿ ಹೈಕಮಾಂಡ್‌ಗೆ ನಿಯತ್ತು ತೋರಿಸಲೇಬೇಕಿದೆ, ರಾಹುಲ್ ಗಾಂಧಿ ಸ್ನೇಹಿತ ಸ್ಟಾಲಿನ್‌ ಎದುರು ನಿಂತರೆ ಸಂಪುಟದಲ್ಲಿ ತಮ್ಮ ತಮ್ಮ ಕುರ್ಚಿಗಳು ಉಳಿಯವುದಿಲ್ಲವೆಂದು ನಮ್ಮ ಸಚಿವರುಗಳಿಗೆ ಭಯ, I.N.D.I.A ಮೈತ್ರಿಕೂಟದಲ್ಲಿ ಬಿರುಕು ಬಂದರೆ ತಮಿಳುನಾಡಿನಲ್ಲಿ ಎಂಪಿ ಸೀಟು ಸಿಗುವುದಿಲ್ಲವೆಂಬ ಆತಂಕವಿದೆ.

ಕರ್ನಾಟಕದ ಚುನಾವಣೆಗೆ ಕಾಂಗ್ರೆಸ್ ಸ್ಟಾಲಿನ್‌ ಸರ್ಕಾರದಿಂದ ದೊಡ್ಡ ಮಟ್ಟದ ಸಹಾಯಹಸ್ತ‌ ಪಡೆದಿರುವುದು, ಸ್ಟಾಲಿನ್‌ರಿಗೆ ನೀರು ಬಿಡದಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಒಂದೇ ಒಂದು ಎಂಪಿ ಸ್ಥಾನ ಗೆಲ್ಲುವುದಿಲ್ಲವೆಂಬ ಗ್ಯಾರಂಟಿ. ಅಧಿಕಾರ ಸಿಕ್ಕಿದೆ ನಮ್ಮನ್ನು ಯಾವ ಕನ್ನಡಿಗರು, ಕರ್ನಾಟಕ ಇನ್ನೈದು ವರ್ಷ ಏನು ಮಾಡಿಕೊಳ್ಳಲು ಸಾಧ್ಯವಿಲ್ಲವೆಂಬ ಅಹಂ, ಭ್ರಮೆ ಎಂದು ತಿಳಿಸಿದೆ.

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಉಪಕಾರ ಮಾಡಿದ ಕೇಂದ್ರ ಸರ್ಕಾರವನ್ನೇ ದೂಷಿಸುವ ಸಿದ್ದರಾಮಯ್ಯ  ಅವರು ಮೇಕೆದಾಟು ಯೋಜನೆಗೆ ತಮ್ಮ ಆಪ್ತರಾದ ಸ್ಟಾಲಿನ್ ಜತೆ ಮಾತನಾಡಿ ಅವರಿಂದ ಅನುಮತಿ ಪಡೆಯುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರ ಹಿಡನ್ ಅಜೆಂಡಾ ಬಯಲಾಗಿದೆ.

ಇದೇ ವೇಳೆ 3 ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಕುರಿತು ಟ್ವೀಟ್ ಮಾಡಿ, ಸಿದ್ದರಾಮಯ್ಯ ಅವರ ಬಣದ ಮೂರು ಡಿಸಿಎಂ ಸ್ಥಾನದ ಅಸ್ತ್ರ ಡಿಸಿಎಂ ಡಿಕೆ.ಶಿವಕುಮಾರ್ ಅವರ ಬಣವನ್ನು ತಾತ್ಕಾಲಿಕವಾಗಿ 'ಸೈಲೆಂಟ್ ಮೋಡ್'ನಲ್ಲಿಟ್ಟಿತ್ತಾದರೂ, ಇದೀಗ ಮತ್ತೆ ಬಿ.ಕೆ. ಹರಿಪ್ರಸಾದ್ ಅವರ ರೀ ಎಂಟ್ರಿಯಿಂದ ಕಾಂಗ್ರೆಸ್ ನಲ್ಲಿ ಬಣಗಳ ಕಿತ್ತಾಟಕ್ಕೆ ಅಡೆತಡೆಯೇ ಇಲ್ಲದಂತಾಗಿದೆ. ಕಾವೇರಿ ವಿಚಾರವನ್ನು ನಿಭಾಯಿಸಲು ವಿಫಲವಾಗಿರುವ ಅಸಮರ್ಥ ಮುಖ್ಯಮಂತ್ರಿಯ ವಿರುದ್ಧ‌ ಕಾಂಗ್ರೆಸ್ಸಿಗರಲ್ಲೇ ಈಗಾಗಲೆ ಒಡಕು ಮೂಡಿದೆ.  ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎಂಬಂತೆ, ಕಾಂಗ್ರೆಸ್ಸಿಗರ ಕಿತ್ತಾಟ ಮರದ ಹನಿ‌ ನಿಂತರೂ ಬಣ ಜಗಳ ನಿಲ್ಲುವುದಿಲ್ಲ ಎಂದು ಹೇಳಿದೆ.

ಗ್ಯಾರಂಟಿ ಯೋಜನೆಗಳ ಕುರಿತು ಟ್ವೀಟ್ ಮಾಡಿ, ಚುನಾವಣೆಯನ್ನೇ ಗುರಿಯಾಗಿಟ್ಟುಕೊಂಡು ಕಾಂಗ್ರೆಸ್  ಗ್ಯಾರಂಟಿಗಳನ್ನು ಘೋಷಿಸಿದ್ದರ ಹಿಂದೆ ಇರುವುದು ಕೇವಲ ಜನರ ಕಣ್ಣಿಗೆ ಮಣ್ಣೆರಚುವ ಉದ್ದೇಶ. ಹತ್ತು ಕೆಜಿ ಅಕ್ಕಿ ಕೊಡುತ್ತೇವೆಂದು ಹೇಳಿ, ಕೊನೆಗೆ ಐದಕ್ಕೆ ಇಳಿಸಿ, ಅದನ್ನೂ ಕೊಡದೆ ಹಣ ಕೊಡುವುದಾಗಿ ಹೇಳಿದ್ದು ಮತ್ತು ಈಗ ಅದಕ್ಕೂ ಕೈ ಎತ್ತಿರುವುದು ಸಿದ್ದರಾಮಯ್ಯ ಅವರ ಸರ್ಕಾರ ಜನತೆಗೆ ಮಾಡುತ್ತಿರುವ ಮೋಸಕ್ಕೆ ಪ್ರತ್ಯಕ್ಷ ಸಾಕ್ಷಿ.

ತನ್ನ ಅವಾಸ್ತವಿಕ ಗ್ಯಾರಂಟಿಗಳಿಂದ ಅತ್ತ ಖಜಾನೆಯನ್ನೂ ಬರಿದು ಮಾಡಿ, ಇತ್ತ ಯೋಜನೆಗಳನ್ನೂ ಸರಿಯಾಗಿ ಅನುಷ್ಠಾನ ಮಾಡದೆ ಮೋಸ ಮಾಡುತ್ತಿರುವ ಈ ಎಟಿಎಂ ಸರ್ಕಾರವು ಕರ್ನಾಟಕ ರಾಜ್ಯ ಕಂಡ ಅತಿ ದೊಡ್ಡ ವಂಚಕ ಸರ್ಕಾರ ಎಂದು ವಾಗ್ದಾಳಿ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com