
ಕುಮಾರಸ್ವಾಮಿ-ದೇವೇಗೌಡ
ಹಾಸನ: ಹಾಸನದ ಜೆಡಿಎಸ್ ಟಿಕೆಟ್ ವಿವಾದ ಬೆಂಗಳೂರಿನಲ್ಲಿರುವ ಹೆಚ್ ಡಿ ದೇವೇಗೌಡ ಅವರ ನಿವಾಸಕ್ಕೆ ವರ್ಗಾವಣೆಯಾಗಿದೆ.
ರಾತ್ರಿಯ ಭೋಜನದ ಬಳಿಕ ಹೆಚ್ ಡಿ ದೇವೇಗೌಡ ಹೆಚ್ ಡಿ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ, ಭವಾನಿ ರೇವಣ್ಣ ಅವರೊಂದಿಗೆ ಚರ್ಚೆ ಮಾಡಿದ್ದು, ತಮ್ಮ ನಿಲುವನ್ನು ಶೀಘ್ರವೇ ಪ್ರಕಟಿಸಲಿದ್ದಾರೆ.
ದೇವೇಗೌಡರ ಆಪ್ತ ವಲಯದ ಪ್ರಕಾರ, ಸ್ವರೂಪ್ ಗೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯ ಹೊಂದಿರುವ ಹೆಚ್ ಡಿ ಕುಮಾರಸ್ವಾಮಿ ಅವರ ಮನವೊಲಿಕೆ ಮಾಡಲಿರುವ ದೇವೇಗೌಡ, ಭವಾನಿ ರೇವಣ್ಣ ಅವರಿಗೆ ಟಿಕೆಟ್ ಘೋಷಿಸುವ ಸಾಧ್ಯತೆ ಇದೆ.
ಹಾಸನದಲ್ಲಿ ಕಾರ್ಯಕರ್ತರಿಗೇ ಟಿಕೆಟ್ ನೀಡಬೇಕೆಂಬ ಉದ್ದೇಶ ಹೊಂದಿದ್ದ ಹೆಚ್ ಡಿ ಕುಮಾರಸ್ವಾಮಿ ಏಕಾಏಕಿ ಹೆಚ್ ಡಿ ದೇವೇಗೌಡ ಅವರ ನಿರ್ಧಾರಕ್ಕೆ ತಾವು ಬದ್ಧವಾಗಿರುವುದಾಗಿ ಹೇಳಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ತನ್ನ ಪರಿಸ್ಥಿತಿ ಸರಿಮಾಡಿಕೊಳ್ಳಲಿ, ಕರ್ನಾಟಕ ಚುನಾವಣೆ 2024 ಲೋಕಸಭೆ ಚುನಾವಣೆಗೆ ದಿಕ್ಸೂಚಿ: ಹೆಚ್ ಡಿ ದೇವೇಗೌಡ
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದೇವೇಗೌಡ, ಕುಮಾರಸ್ವಾಮಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ, ಪಕ್ಷದ ಹಾಗೂ ಕಾರ್ಯಕರ್ತರ ಹಿತದೃಷ್ಟಿಯಿಂದ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಘೋಷಿಸುವ ಸಾಧ್ಯತೆ ಇದೆ. ಏಕೆಂದರೆ ಪಕ್ಷ ಹೆಚ್ ಪಿ ಸ್ವರೂಪ್ ಗೆ ಟಿಕೆಟ್ ಘೋಷಿಸಿದರೆ, ಭವಾನಿ ರೇವಣ್ಣ ಅವರನ್ನು ಜೆಡಿಎಸ್ ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಎಚ್ಚರಿಕೆ ನೀಡಿದ್ದರು.
ಹಾಸನ ಕ್ಷೇತ್ರವನ್ನು ರೇವಣ್ಣ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಈ ಹಿಂದೆ ಹಾಲಿ ಶಾಸಕ ಪ್ರೀತಂ ಗೌಡ ತಮ್ಮ ವಿರುದ್ಧ 50 ಸಾವಿರ ಮತಗಳ ಅಂತರದಿಂದ ತಮ್ಮ ವಿರುದ್ಧ ಗೆಲುವು ಸಾಧಿಸುವಂತೆ ಸವಾಲು ಹಾಕಿದ್ದರು.