ತಂದೆಯವರನ್ನು ವರುಣಾದಲ್ಲಿ ಸೋಲಿಸಲು ಬಿಜೆಪಿ, ಜೆಡಿಎಸ್ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದೆ: ಡಾ ಯತೀಂದ್ರ ಆರೋಪ
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಳೆದು ತೂಗಿ ಕೊನೆ ಕ್ಷಣದಲ್ಲಿ ತಮಗೆ ಮುಖ್ಯಮಂತ್ರಿ ಭಾಗ್ಯ ಕಲ್ಪಿಸಿದ ತವರು ಜಿಲ್ಲೆ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣಕ್ಕಿಳಿದಿದ್ದಾರೆ.ಕಳೆದ ಬಾರಿ ಅವರ ಪುತ್ರ ಡಾ ಯತೀಂದ್ರ ಇಲ್ಲಿ ಚುನಾವಣೆಗೆ ನಿಂತು ಶಾಸಕರಾಗಿ ಆಯ್ಕೆಯಾಗಿ ಬಂದರು.
Published: 04th April 2023 08:27 AM | Last Updated: 04th April 2023 05:29 PM | A+A A-

ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಡಾ ಯತೀಂದ್ರ ಸಿದ್ದರಾಮಯ್ಯ
ಮೈಸೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಳೆದು ತೂಗಿ ಕೊನೆ ಕ್ಷಣದಲ್ಲಿ ತಮಗೆ ಮುಖ್ಯಮಂತ್ರಿ ಭಾಗ್ಯ ಕಲ್ಪಿಸಿದ ತವರು ಜಿಲ್ಲೆ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣಕ್ಕಿಳಿದಿದ್ದಾರೆ.ಕಳೆದ ಬಾರಿ ಅವರ ಪುತ್ರ ಡಾ ಯತೀಂದ್ರ ಇಲ್ಲಿ ಚುನಾವಣೆಗೆ ನಿಂತು ಶಾಸಕರಾಗಿ ಆಯ್ಕೆಯಾಗಿ ಬಂದರು.
ಈ ಬಾರಿ ತಂದೆಗಾಗಿ ಮಗ ಕ್ಷೇತ್ರ ತ್ಯಾಗ ಮಾಡಿ ಇದು ತಂದೆಯವರ ಕೊನೆ ಚುನಾವಣೆ, ಅವರು ಗೆದ್ದು ಬಂದು ಗೌರವಯುತವಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಬೇಕೆಂಬುದು ನನ್ನ ಆಸೆ ಎಂದು ಪುತ್ರ ಯತೀಂದ್ರ ತಂದೆಯ ಗೆಲುವಿಗೆ ಟೊಂಕಕಟ್ಟಿ ನಿಂತು ದುಡಿಯುತ್ತಿದ್ದಾರೆ.
ಈ ಸಂದರ್ಭದಲ್ಲಿ ನಿನ್ನೆ ವರುಣಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಯತೀಂದ್ರ, ತಂದೆಯವರನ್ನು ಸೋಲಿಸಲು ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದಾರೆ. ತಂದೆಯವರು ಎಲ್ಲಿ ನಿಂತರೂ ಸೋಲಿಸುವ ಪ್ರಯತ್ನ ಕೆಲವರಿಂದ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯಗೆ ವರುಣಾ ಕ್ಷೇತ್ರದಲ್ಲಿಯೇ ಖೆಡ್ಡಾ ತೋಡಲು ಎದುರಾಳಿಗಳು ರೆಡಿ ಆಗಿದ್ದಾರೆ. ಸಿದ್ದರಾಮಯ್ಯ ಎಲ್ಲೇ ಹೋಗಲಿ, ಯಾವ ಕದನ ಕಣದಲ್ಲೇ ನಿಲ್ಲಲಿ, ಅವರನ್ನು ಹಣಿಯಲೇ ಬೇಕು ಎಂದು ಬಿಜೆಪಿ ಜಿದ್ದಿಗೆ ಬಿದ್ದವರಂತೆ ಕಾದು ಕುಳಿತಿದೆ. ನಮ್ಮನ್ನು ಕುಟುಕುವ ಸಿದ್ದರಾಮಯ್ಯರನ್ನು ರಾಜಕೀಯವಾಗಿಯೇ ಚಿವುಟಿ ಹಾಕಲೇಬೇಕು ಎಂದು ಕೇಸರಿ ಪಡೆ ಪಣ ತೊಟ್ಟು ಓಡಾಡುತ್ತಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಆತಂಕ ಹೊರಹಾಕಿದ್ದಾರೆ. ಬಹಳ ಎಚ್ಚರಿಕೆಯಿಂದ ಚುನಾವಣೆ ನಡೆಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ: ಈ ಬಾರಿ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ; ಅಪ್ಪ ಮುಖ್ಯಮಂತ್ರಿಯಾದರೆ ನನಗೆ ಸಂತೋಷ: ಯತೀಂದ್ರ ಸಿದ್ದರಾಮಯ್ಯ
ವರುಣ ವಿಧಾನಸಭಾ ಕ್ಷೇತ್ರದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ಮಾತನಾಡಿರುವ ಯತೀಂದ್ರ, ಸಿದ್ದರಾಮಯ್ಯ ಎಲ್ಲೇ ನಿಂತರು ಸೋಲಿಸಲು ಎಲ್ಲರೂ ಒಂದಾಗುತ್ತಾರೆ. ಸಿದ್ದರಾಮಯ್ಯ ಸೋಲಿಸಲು ಬಿಜೆಪಿ, ಜೆಡಿಎಸ್ನವರು ಒಂದಾಗುತ್ತಾರೆ. ಒಟ್ಟಾಗಿ ಸೇರಿ ಷಡ್ಯಂತ್ರ ರೂಪಿಸುತ್ತಾರೆ, ಹಣದ ಹೊಳೆ ಹರಿಸುತ್ತಾರೆ. ತಂದೆಗೆ 76 ವರ್ಷ ಆಗಿದೆ. ಇದು ಅವರಿಗೆ ಕೊನೆಯ ಚುನಾವಣೆ. ತಂದೆಯವರು ಗೆದ್ದು ಗೌರವಯುತವಾಗಿ ನಿವೃತ್ತಿ ಪಡೆಯಬೇಕು. ಹಾಗಾಗಿ ಬಹಳ ಎಚ್ಚರಿಕೆಯಿಂದ ಚುನಾವಣೆ ನಡೆಸುವಂತೆ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ಸಿದ್ದರಾಮಯ್ಯ, ನನ್ನನ್ನು ವರುಣಾದಲ್ಲಿ ಸೋಲಿಸಲು ಬಿಜೆಪಿ-ಜೆಡಿಎಸ್ ಒಟ್ಟಾದರೂ ಅಚ್ಚರಿಯಿಲ್ಲ ಎಂದು ಹೇಳಿಕೊಂಡಿದ್ದರು.