ಈ ಬಾರಿ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ; ಅಪ್ಪ ಮುಖ್ಯಮಂತ್ರಿಯಾದರೆ ನನಗೆ ಸಂತೋಷ: ಯತೀಂದ್ರ ಸಿದ್ದರಾಮಯ್ಯ

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ವರುಣಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಮತ್ತು ಯತೀಂದ್ರ ಸಿದ್ದರಾಮಯ್ಯ
ಸಿದ್ದರಾಮಯ್ಯ ಮತ್ತು ಯತೀಂದ್ರ ಸಿದ್ದರಾಮಯ್ಯ

ಮಂಡ್ಯ: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ವರುಣಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ತಮ್ಮ ತಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟ ಮೇಲೆ, ಯತೀಂದ್ರ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆ ಉದ್ಭವವಾಗಿತ್ತು. ಆದರೆ ಈಗ ಚುನಾವಣಾ ಅಖಾಡದಿಂದಲೇ ಹಿಂದೆ ಸರಿದು ವರುಣಾ ಕ್ಷೇತ್ರದಲ್ಲಿ ತಂದೆಯ ಗೆಲುವಿಗೆ ಟೊಂಕಕಟ್ಟಿ ಕೆಲಸ ಮಾಡುತ್ತಿದ್ದಾರೆ. 

ಇಂದು ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ವರುಣಾ ಕ್ಷೇತ್ರ ಅಥವಾ ಬೇರೆ ಯಾವ ಕ್ಷೇತ್ರದಿಂದಲೂ ನಾನು ಸ್ಪರ್ಧೆ ಮಾಡಲ್ಲ. ತಂದೆಯವರ ಪರವಾಗಿ ಜನವರಿಯಿಂದಲೇ ನಾನು ಪ್ರಚಾರ ಶುರು ಮಾಡಿದ್ದೇನೆ. ವರುಣಾ ಕ್ಷೇತ್ರ ಯಾವೊಬ್ಬ ವ್ಯಕ್ತಿಗೆ ಸೇರಿದ್ದಲ್ಲ. ತಂದೆಗಾಗಿ ನಾನು ಕ್ಷೇತ್ರ ತ್ಯಾಗ ಮಾಡಿಲ್ಲ. ವರುಣಾ ಕ್ಷೇತ್ರ ಸೇರಿದ್ದು ಆ ಕ್ಷೇತ್ರದ ಮತದಾರರಿಗೆ. ತಂದೆಯವರ ಕೊನೆ ಚುನಾವಣೆ ಹೀಗಾಗಿ ವರುಣಾದಲ್ಲಿ ನಿಲ್ಲಬೇಕೆಂಬುದು ಜನರ ಅಭಿಪ್ರಾಯವಾಗಿತ್ತು ಎಂದರು. 

ವರುಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ.ವೈ.ವಿಜಯೇಂದ್ರ ಸ್ಪರ್ಧಿಸುವ ವಿಚಾರವಾಗಿ ಕೇಳಿದಾಗ, ವಿಜಯೇಂದ್ರ ಸೇರಿ ಯಾರೇ ಸ್ಪರ್ಧಿಸಿದರೂ ನಾವು ಸರಿಯಾದ ಕಠಿಣ ಸ್ಪರ್ಧೆ ನೀಡಲು ಸಿದ್ಧರಿದ್ದೇವೆ. ವರುಣಾ ಕ್ಷೇತ್ರದಲ್ಲಿ ನಾವು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ವರುಣಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ, ಹಾಗಾಗಿ ಗೆಲ್ಲುವ ವಿಶ್ವಾಸವಿದೆ ಎಂದರು.

ಎಲ್ಲರಂತೆ ನನಗೂ ನನ್ನ ತಂದೆ ಸಿಎಂ ಆದರೆ ಸಂತೋಷವಾಗುತ್ತದೆ. ಯಾವ ಮಗನಿಗೆ ತಂದೆ ಸಿಎಂ ಆದರೆ ಖುಷಿಯಾಗುವುದಿಲ್ಲ ಹೇಳಿ, ತಂದೆಯವರು 5 ವರ್ಷ ಸಿಎಂ ಆಗಿದ್ದಾಗ ನೀಡಿದ್ದ ಉತ್ತಮ ಆಡಳಿತದಿಂದ ಮತ್ತೆ ರಾಜ್ಯದ ಜನತೆ ತಂದೆ ಮತ್ತು ಕಾಂಗ್ರೆಸ್ ಗೆ ಆಶೀರ್ವಾದ ನೀಡುತ್ತಾರೆ ಎಂಬ ನಂಬಿಕೆಯಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com