ವರುಣಾದಲ್ಲಿ ಯಾರೇ ಬಂದರೂ ಸ್ವಾಗತಿಸುತ್ತೇವೆ, ಯಾರು ನಿಂತರೂ ಅವರನ್ನು ಎದುರಿಸಲು ಸಿದ್ದ: ಸಿದ್ದರಾಮಯ್ಯ
ಬೆಂಗಳೂರು: ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಯಾರೇ ಬಂದರೂ ಸ್ವಾಗತಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಬಿ ಎಸ್ ಯಡಿಯೂರಪ್ಪ, ವರುಣಾದಿಂದ ತಮ್ಮ ಪುತ್ರ ವಿಜಯೇಂದ್ರರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದರು.
ಇದಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಯಾರೇ ಬಂದರೂ ಅವರನ್ನು ಎದುರಿಸಲು ಸಿದ್ದನಿದ್ದೇನೆ, ಎದುರಾಳಿಗಳು ಯಾರು ಎಂದು ನಾನು ಯೋಚನೆಯೇ ಮಾಡಿಲ್ಲ, ಜನರು ಆಶೀರ್ವಾದ ಮಾಡುತ್ತಾರೆ ಎಂದರು.
ವಿಜಯೇಂದ್ರ ಅವರು ನಿಲ್ಲುತ್ತಾರೆಯೇ, ಬೇಕಿದ್ದರೆ ಯಡಿಯೂರಪ್ಪನವರೇ ಬಂದು ನಿಲ್ಲಲಿ. ಯಾರೇ ಬಂದರೂ ಅವರನ್ನು ಎದುರಿಸಲು ಸಿದ್ಧನಿದ್ದೇನೆ.
ಬಿಜೆಪಿ 60 ಸೀಟುಗಳಿಗಿಂತ ಹೆಚ್ಚು ಗೆಲ್ಲುವುದಿಲ್ಲ: ಬಿಜೆಪಿ 150 ಸ್ಥಾನ ಗೆಲ್ಲಲಿದೆ ಎಂಬ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬಿಜೆಪಿ 60 ಸೀಟು ದಾಟುವುದಿಲ್ಲ, ಯಾವುದೇ ರಾಜಕೀಯ ಪಕ್ಷದಿಂದ ನಮಗೆ ಯಾವುದೇ ಬೆದರಿಕೆ ಇಲ್ಲ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಮೈತ್ರಿ ಕುರಿತು ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾವು ಅವರನ್ನು ಕರೆದಿಲ್ಲ, ನಮ್ಮೊಂದಿಗೆ ಬರುವಂತೆ ಹೇಳಿಲ್ಲ, ಕರ್ನಾಟಕದ ಜನತೆ ಕಾಂಗ್ರೆಸ್‌ಗೆ ಮತ ಹಾಕಲು ನಿರ್ಧರಿಸಿದ್ದು, ನಮ್ಮ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ರಚನೆಯಾಗಲಿದೆ ಎಂದರು.
ಭಾರತ ಚುನಾವಣಾ ಆಯೋಗವು ನಿನ್ನೆ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದ ಬೆನ್ನಲ್ಲೇ, ಆಡಳಿತಾರೂಢ ಬಿಜೆಪಿ ಚುನಾವಣಾ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದೆ ಮತ್ತು ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುತ್ತದೆ ಎಂದು ಆಶಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು.
"ಬಿಜೆಪಿ ಚುನಾವಣಾ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದೆ. "ಆಪರೇಷನ್ ಕಮಲ" ಆರಂಭಿಸಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆಯನ್ನು ನಡೆಸಬೇಕು ಎಂದು ಸಿದ್ದರಾಮಯ್ಯ ನಿನ್ನೆ ಹೇಳಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ