ಯಾರು ಬೇಕಾದ್ರೂ ಬನ್ನಿ, ಹೋರಾಡಲು ನಾನು ಸಿದ್ಧ; ಶಿಗ್ಗಾಂವಿಯಲ್ಲಿ ಕಾಂಗ್ರೆಸ್'ಗೆ ಸಿಎಂ ಬೊಮ್ಮಾಯಿ ಸವಾಲ್
ಯಾರು ಬೇಕಾದರೂ ಬನ್ನಿ, ಶಿಗ್ಗಾಂವಿಯಲ್ಲಿ ಹೋರಾಡಲು ಸಿದ್ಧ ಎಂದು ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ಸವಾಲು ಹಾಕಿದ್ದಾರೆ.
Published: 08th April 2023 08:17 AM | Last Updated: 08th April 2023 02:41 PM | A+A A-

ಬಿಜೆಪಿಗೆ ಬಂದ ಕೈ ಮುಖಂಡರನ್ನು ಸ್ವಾಗತಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಹುಬ್ಬಳ್ಳಿ: ಯಾರು ಬೇಕಾದರೂ ಬನ್ನಿ, ಶಿಗ್ಗಾಂವಿಯಲ್ಲಿ ಹೋರಾಡಲು ಸಿದ್ಧ ಎಂದು ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ಸವಾಲು ಹಾಕಿದ್ದಾರೆ.
ವಿನಯ್ ಕುಲಕರ್ಣಿ ಹೆಸರು ಧಾರವಾಡ ಗ್ರಾಮೀಣಕ್ಕೆ ಘೋಷಣೆಯಾಗುತ್ತಿದ್ದಂತೆ ಶುಕ್ರವಾರ ಶಿಗ್ಗಾಂವಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೈ ನಾಯಕರಿಗೆ ಸವಾಲು ಹಾಕಿದರು.
ಶಿಗ್ಗಾವಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ, ಸ್ಥಳೀಯ ಕೈ ಮುಖಂಡರನ್ನು ಬಿಜೆಪಿಗೆ ಸೆಳೆಯುವ ಮೂಲಕ ಕೈ ಪಡೆಗೆ ಬೊಮ್ಮಾಯಿಯವರು ಬಿಗ್ ಶಾಕ್ ನೀಡಿದ್ದಾರೆ.
ಇದೆ ವೇಳೆ ಮಾತನಾಡಿದ ಬೊಮ್ಮಾಯಿ ಕಾಂಗ್ರೆಸ್ ವಿರುದ್ದ ಅಬ್ಬರಿಸಿ ಬೊಬ್ಬಿರಿದರು. ʻʻಕೆಲವರು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ನಾನು ಶಿಗ್ಗಾಂವಿಯಿಂದಲೇ ಸ್ಪರ್ದೆ ಮಾಡುತ್ತೇನೆಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಶಿಗ್ಗಾಂವಿಯ ಕುಸ್ತಿ ಅಖಾಡಕ್ಕೆ ಯಾರು ಬೇಕಾದರೂ ಬನ್ನಿ, ನಾನು ಸಿದ್ದನಿದ್ದೇನೆ, ಅವಿರೋಧ ಆಯ್ಕೆ ನನಗಿಷ್ಟವಿಲ್ಲ, ನನಗೆ ಕುಸ್ತಿ ಬೇಕು, ಸೆಡ್ಡು ಹೊಡೆದಾಗಲೇ ಯಾರ ಶಕ್ತಿ ಎಷ್ಟು ಎನ್ನುವುದು ಗೊತ್ತಾಗಲಿದೆ. ಕುಸ್ತಿಗೆ ಬರುವಾಗ ಹೊಸ ಪಟ್ಟುಗಳನ್ನು ಪ್ರಾಕ್ಟೀಸ್ ಮಾಡಿಕೊಂಡು ಬನ್ನಿ ಎಂದು ಸವಾಲ್ ಹಾಕಿದರು.
ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಮನವಿಗಳು ಬರುತ್ತಿವೆ. ಅಪಪ್ರಚಾರಗಳ ನಡುವೆಯೂ ಶಿಗ್ಗಾಂವಿ ಜನತೆ ಸದಾ ಒಳ್ಳೆಯದನ್ನು ಗುರುತಿಸಿ ನನ್ನ ಬೆನ್ನಿಗೆ ನಿಂತಿದ್ದಾರೆ, ಬೆಂಗಳೂರು ಮತ್ತು ದೆಹಲಿ ಕುಳಿತಿರುವ ಕೆಲ ಜನರು ನನ್ನನ್ನು ಸೋಲಿಸಲು ಯೋಜನೆ ರೂಪಿಸುತ್ತಿದ್ದಾರೆ, ಆದರೆ ಕ್ಷೇತ್ರದ ಮತದಾರರ ಮೇಲೆ ನನಗೆ ವಿಶ್ವಾಸವಿದೆ. ಹೀಗಾಗಿ ನಾನು ಶಿಗ್ಗಾಂವಿಯಲ್ಲಿ ಮಾತ್ರವೇ ಸ್ಪರ್ಧಿಸುತ್ತೇನೆಂದು ಸ್ಪಷ್ಟಪಡಿಸಿದರು.