ಹೊಸಕೋಟೆ: ಎಂಟಿಬಿ ನಾಗರಾಜ್-ಶರತ್ ಬಚ್ಚೇಗೌಡ ಜಟಾಪಟಿ; ಅಭಿವೃದ್ಧಿ ಕಾರ್ಯಗಳ ಕ್ರೆಡಿಟ್ ಪಡೆಯಲು ಪೈಪೋಟಿ!
'ಸಂಸದ ಬಚ್ಚೇಗೌಡರು ತಾವರೆಕೆರೆಗೆ ಏನು ಅಭಿವೃದ್ಧಿ ಮಾಡಿದ್ದಾರೆ. ನಾನು ತಾವರೆಕೆರೆಯಲ್ಲಿ 5 ಕೋಟಿ ರೂ.ಗೂ ಹೆಚ್ಚು ಅಭಿವೃದ್ಧಿ ಮಾಡಿದ್ದೇನೆ ಎಂದರು.
Published: 18th April 2023 09:40 AM | Last Updated: 18th April 2023 05:22 PM | A+A A-

ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ
ಬೆಂಗಳೂರು: ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸಚಿವ ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.
ತಾವರೆಕೆರೆಯಲ್ಲಿ ಸೋಮವಾರ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್ ಶರತ್ ಬಚ್ಚೇಗೌಡ ವಿರುದ್ಧ ಹರಿಹಾಯ್ದಿದ್ದಾರೆ. 'ಸಂಸದ ಬಚ್ಚೇಗೌಡರು ತಾವರೆಕೆರೆಗೆ ಏನು ಅಭಿವೃದ್ಧಿ ಮಾಡಿದ್ದಾರೆ. ನಾನು ತಾವರೆಕೆರೆಯಲ್ಲಿ 5 ಕೋಟಿ ರೂ.ಗೂ ಹೆಚ್ಚು ಅಭಿವೃದ್ಧಿ ಮಾಡಿದ್ದೇನೆ ಎಂದರು.
ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಶರತ್ ಬಚ್ಚೇಗೌಡ, ಸಚಿವ ಎಂಟಿಬಿ ನಾಗರಾಜ್ ಅವರು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಇತಿಹಾಸವನ್ನು ಅಧ್ಯಯನ ಮಾಡಬೇಕು. ಹೊಸಕೋಟೆಗೆ ಡಿಗ್ರಿ ಕಾಲೇಜು ತಂದವರು ಬಿ.ಎನ್.ಬಚ್ಚೇಗೌಡರು. ಹೊಸಕೋಟೆಯ ಜನರಿಗೆ ಹಲವಾರು ಉದ್ಯೋಗಗಳನ್ನು ಸೃಷ್ಟಿಸಿದ ವೋಲ್ವೋ ಮತ್ತು ಡೈರಿ ಯೋಜನೆಯನ್ನು ಪಡೆಯುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್ ಮಾಡಿದ್ದನ್ನು ಗೌರವಿಸದ ಪ್ರಧಾನಿ ನರೇಂದ್ರ ಮೋದಿಯಂತೆಯೇ ನಾಗರಾಜ್ ಅವರು ಕೂಡ ಬಚ್ಚೇಗೌಡರು ಮಾಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: ಮಂಡ್ಯದಲ್ಲಿ ಎಚ್‌ಡಿ ಕುಮಾರಸ್ವಾಮಿ ಸ್ಪರ್ಧಿಸಿದರೆ ಅವರ ವಿರುದ್ಧ ಕಣಕ್ಕಿಳಿಯಲು ಸಿದ್ಧ: ಸುಮಲತಾ ಅಂಬರೀಶ್
ಬಿ.ಎನ್.ಬಚ್ಚೇಗೌಡರು ಹೊಸಕೋಟೆಗೆ ಪಶು ಆಸ್ಪತ್ರೆ ತಂದರು. ರಾಜ್ಯದ ಸರಾಸರಿ ಪ್ರಕಾರ ಹೊಸಕೋಟೆಯಲ್ಲಿ ಏಳು ಪಿಎಚ್‌ಸಿಗಳು ಮಾತ್ರ ಇರಬೇಕು. ಆದರೆ ಬಚ್ಚೇಗೌಡರ ಕೃಪೆಯಿಂದ ಹೊಸಕೋಟೆಯಲ್ಲಿ 13 ಪಿಎಚ್‌ಸಿಗಳಿವೆ. ನಾಗರಾಜ್ ಮಾಡಿದ್ದನ್ನು ಯಾವ ಕಾರ್ಪೋರೇಟರ್ ಬೇಕಾದರೂ ಮಾಡಬಹುದು. ಶಾಶ್ವತ ಕುಡಿಯುವ ನೀರಿನ ಸೌಲಭ್ಯಗಳು ಮತ್ತು ಕಸ ಸುರಿಯುವಿಕೆಯ ಸಮಸ್ಯೆ ಇನ್ನೂ ಬಗೆಹರರಿದಿಲ್ಲ ಎಂದು ಶರತ್ ಬಚ್ಚೇಗೌಡ ಆರೋಪಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಎಂಟಿಬಿ ನಾಗರಾಜ್, ಗ್ಯಾರಂಟಿ ಕಾರ್ಡ್‌ಗಳನ್ನು ನೀಡುತ್ತಿರುವ ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬರುವ ಯಾವುದೇ ಭರವಸೆ ಇಲ್ಲ, ಕಾವೇರಿ ಕುಡಿಯುವ ನೀರು, ಮೆಟ್ರೊ ರೈಲು ಸಂಪರ್ಕ ಕಲ್ಪಿಸಲು ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವಂತೆ ಸರ್ಕಾರಕ್ಕೆ ನಾನು ಒತ್ತಡ ಹೇರುತ್ತಿದ್ದೇನೆ ಎಂದು ಹೇಳಿದರು.