ನಾನು ರಾಜ್ಯಸಭೆಗೆ ಹೋಗಲ್ಲ, ಕಾಂಗ್ರೆಸ್ ಸಿದ್ಧಾಂತಕ್ಕೆ ಹೊಂದಿಕೊಳ್ಳುತ್ತೇನೆ, ಆದರೆ...: ಜಗದೀಶ್ ಶೆಟ್ಟರ್ (ಸಂದರ್ಶನ)

ಆರ್ ಎಸ್ ಎಸ್ ಜೊತೆಗಿನ ಪ್ರಬಲ ಒಡನಾಟದ ಹೊರತಾಗಿಯೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಎಪ್ರಿಲ್ 16 ರಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಸುದೀರ್ಘ ಮೂರು ದಶಕಗಳ ಕಾಲ ಪಕ್ಷದ ಜೊತೆಗಿದ್ದ ಬಾಂಧವ್ಯವನ್ನು ಕಳಚಿಕೊಂಡಿದ್ದಾರೆ.
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಬೆಂಗಳೂರು: ಆರ್ ಎಸ್ ಎಸ್ ಜೊತೆಗಿನ ಪ್ರಬಲ ಒಡನಾಟದ ಹೊರತಾಗಿಯೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಎಪ್ರಿಲ್ 16 ರಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಸುದೀರ್ಘ ಮೂರು ದಶಕಗಳ ಕಾಲ ಪಕ್ಷದ ಜೊತೆಗಿದ್ದ ಬಾಂಧವ್ಯವನ್ನು ಕಳಚಿಕೊಂಡಿದ್ದಾರೆ.

 ಈಗ ಕಾಂಗ್ರೆಸ್ ಜೊತೆಗಿರುವ ಶೆಟ್ಟರ್ ತಮ್ಮ ಜಾತ್ಯತೀತ ಚಿತ್ರಣ ಮತ್ತು ಆಲೋಚನೆಗಳು ಕಾಂಗ್ರೆಸ್ ಪಕ್ಷದ ಸಿದ್ಧಾಂತದೊಂದಿಗೆ ಹೊಂದಿಕೊಳ್ಳಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು,ಆರ್ ಎಸ್ ಎಸ್ ಕಾರ್ಯಕ್ರಮಗಳಿಗೆ ಹಾಜರಾಗದಿದ್ದರೂ, ಸಂಘದ ನಾಯಕರುಗಳ ಜೊತೆಗೆ ಸಂಬಂಧ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಪ್ರ: ನೀವು ಬಿಜೆಪಿ ತೊರೆಯಲು ಬಲವಾದ ಕಾರಣವೇನು?

ಕಳೆದ ಹಲವು ತಿಂಗಳುಗಳಿಂದ ಪಕ್ಷದಲ್ಲಿ ನನ್ನನ್ನು ಕಡೆಗಣಿಸುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ. ಪ್ರತಿ ತ್ರೈಮಾಸಿಕದಲ್ಲಿ ನಡೆಯುವ ರಾಜ್ಯ ಕಾರ್ಯಕಾರಿಣಿ ಸಭೆಗಳಲ್ಲೂ ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ಕೋರ್ ಕಮಿಟಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲು ಬಯಸಿದ್ದೆ, ಆದರೆ ನಿಯಮಿತವಾಗಿ ನಡೆಯುತ್ತಿಲ್ಲ. (ಕೇಂದ್ರ ಗೃಹ ಸಚಿವ) ಅಮಿತ್ ಶಾ ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ ಪ್ರತಿ ತಿಂಗಳು ಕೋರ್ ಕಮಿಟಿ ಸಭೆ ನಡೆಸುವಂತೆ ಹೇಳುತ್ತಿದ್ದರು, ಆದರೆ ಈಗ ಮೂರು-ನಾಲ್ಕು ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತಿದೆ. ಹಾಗಾಗಿ ನನ್ನ ಅಸಮಾಧಾನವನ್ನು ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ. ಪಕ್ಷ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಜ್ವಲಂತ ವಿಷಯಗಳನ್ನು ಪ್ರಸ್ತಾಪಿಸಿದಾಗಲೆಲ್ಲ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ನನ್ನ ಅನುಭವವನ್ನು ಸದುಪಯೋಗ ಮಾಡಿಕೊಳ್ಳಲು ರಾಜ್ಯ ನಾಯಕರು ಆಸಕ್ತಿ ಹೊಂದಿಲ್ಲ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡ ನನ್ನೊಂದಿಗೆ ಪಕ್ಷದ ವ್ಯವಹಾರಗಳ ಬಗ್ಗೆ ಚರ್ಚಿಸಲಿಲ್ಲ. ಹಾಗಾಗಿ ನನಗೆ ಉಸಿರುಗಟ್ಟುವ ಅನುಭವವಾಗತೊಡಗಿತು. ಈ ನಡುವೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಸ್ಪರ್ಧಿಸಿರುವ, ಬಿಜೆಪಿಯ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಅವರ  ಆಪ್ತ ಮಹೇಶ ಟೆಂಗಿನಕಾಯಿ ನನ್ನ ವಿರುದ್ಧ ಗುಸುಗುಸು ಪ್ರಚಾರ ಆರಂಭಿಸಿದ್ದರು. ಈ ವಿಷಯವನ್ನು ಪಕ್ಷದ ಮುಖಂಡರ ಗಮನಕ್ಕೂ ತಂದರೂ ಅವರು ಸ್ಪಂದಿಸುತ್ತಿಲ್ಲ. ನಂತರ, ಎಲ್ಲರೂ ನನ್ನನ್ನು ಲಘುವಾಗಿ ಪರಿಗಣಿಸಿದ್ದರಿಂದ ನಾನು ತಾಳ್ಮೆ ಕಳೆದುಕೊಂಡೆ.

ಪ್ರ: ನಿಮ್ಮ ವಿರುದ್ಧದ ಅಪಪ್ರಚಾರದ ಬಗ್ಗೆ ಪಕ್ಷದ ಉನ್ನತ ನಾಯಕರ ಗಮನಕ್ಕೆ ಏಕೆ ತಂದಿಲ್ಲ?

ಈ ವಿಷಯವನ್ನು  ಪಕ್ಷದ ವೇದಿಕೆಯಲ್ಲಿ ಹೇಳಬೇಕೆಂದಿದ್ದೆ. ನಾನು ನೇರವಾಗಿ ಅವರ ಬಳಿ ಹೋಗಿದ್ದರೆ ಶೆಟ್ಟರ್ ಯಾವಾಗಲೂ ದೂರುಗಳೊಂದಿಗೆ ಬರುತ್ತಾರೆ ಎಂಬ ಪೂರ್ವಾಗ್ರಹ ಪೀಡಿತ ಮಾತುಗಳು ಕೇಳಿ ಬರುತ್ತಿದ್ದವು, ಆದರೂ  ಒಮ್ಮೆ ನಾನು ಅದರ ಬಗ್ಗೆ ಅಮಿತ್ ಶಾಗೆ ತಿಳಿಸಲು ಪ್ರಯತ್ನಿಸಿದೆ. ನಾನು ಅವರನ್ನು ಭೇಟಿ ಮಾಡಲು ಅಪಾಯಿಂಟ್‌ಮೆಂಟ್ ಕೂಡ ಪಡೆದುಕೊಂಡಿದ್ದೆ. ಕರ್ನಾಟಕದಲ್ಲಿ ಪಕ್ಷದ ಸ್ಥಿತಿ ಚೆನ್ನಾಗಿಲ್ಲ ಮತ್ತು ಸರ್ಕಾರದಲ್ಲಿ ಕೆಲವು ಸಮಸ್ಯೆಗಳಿವೆ ಎಂದು ತಿಳಿಸಿದ್ದೇನೆ. ಆದರೆ ಬೇರೆ ಕೆಲವು ನಾಯಕರು ಅಲ್ಲಿದ್ದ ಕಾರಣ ಎಲ್ಲವನ್ನೂ ಮಾತನಾಡಲು ಸಾಧ್ಯವಾಗಲಿಲ್ಲ. ನಾನು ಮತ್ತೊಮ್ಮೆ ಶಾ ಅವರನ್ನು ವೈಯಕ್ತಿಕ ಭೇಟಿಗಾಗಿ ವಿನಂತಿಸಿದೆ, ಅದಕ್ಕೆ ಅವರು  ಒಪ್ಪಿಕೊಂಡರು, ಆದರೆ ಆ ದಿನ ಬರಲಿಲ್ಲ.

ಆರು ತಿಂಗಳ ಹಿಂದೆಯೇ ಆರ್‌ಎಸ್‌ಎಸ್‌ನ ಹಿರಿಯ ಮುಖಂಡರೊಬ್ಬರು ಈ ಬಗ್ಗೆ ಸೂಚನೆ ನೀಡಿದ್ದರು ಎನ್ನಲಾಗಿದೆ, ಅದು ನಿಜವೆ?

ಇದು ಇನ್ನೊಂದು ರೀತಿಯ ಗುಸುಗುಸು. ಸಂಘವು ಯಾವತ್ತೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ಟಿಕೆಟ್‌ ಆಕಾಂಕ್ಷಿಗಳು ಕೆಲ ಆರ್‌ಎಸ್‌ಎಸ್‌ ಮುಖಂಡರ ಆಶೀರ್ವಾದ ಪಡೆಯಲು ತೆರಳಿದ್ದಾರೆ ಎಂದು ತಿಳಿದು ಬಂದಿದ್ದು, ಶೆಟ್ಟರ್‌ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಬಿಜೆಪಿ ತೊರೆಯುವ ಮನಸ್ಸು ಮಾಡಿದ್ದು ಯಾವಾಗ?

ಈ ಬಾರಿ ಚುನಾವಣೆಯಲ್ಲಿ ನನಗೆ ಟಿಕೆಟ್ ಇಲ್ಲಎಂದು ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ನನಗೆ ದೂರವಾಣಿ ಕರೆ ಮಾಡಿದಾಗ ನನಗೆ ಆಘಾತವಾಯಿತು. ಮೂರು ದಶಕಗಳಿಂದ ಪಕ್ಷವನ್ನು ಕಟ್ಟಿದ ಮತ್ತು ಸೇವೆ ಸಲ್ಲಿಸಿದವರನ್ನು ನಡೆಸಿಕೊಳ್ಳುವ ರೀತಿ ಇದೇನಾ? ನಾನು ಪಕ್ಷದ ನಿರ್ಧಾರವನ್ನು ಧಿಕ್ಕರಿಸಿದೆ, ‘ನೀವು ಏನು ಬೇಕಾದರೂ ಮಾಡಿ, ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದು ಹೇಳಿದೆ. ನಂತರ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಂತರ, ಪಕ್ಷವು ಮಾತುಕತೆಗಳನ್ನು ಪ್ರಾರಂಭಿಸಿತು.  ನನ್ನ ಕುಟುಂಬದಿಂದ ಯಾರಿಗಾದರೂ ಟಿಕೆಟ್ ಕೊಡುವ ಭರವಸೆ ನೀಡಿದರು. ನನ್ನನ್ನು ರಾಜ್ಯಸಭಾ ಸದಸ್ಯನನ್ನಾಗಿ ಮಾಡುವ ಭರವಸೆ ನೀಡಿದರು. ನನ್ನ ಕುಟುಂಬದ ಸದಸ್ಯರನ್ನು ರಾಜಕೀಯಕ್ಕೆ ತರಲು ನಾನು ಬಯಸುವುದಿಲ್ಲ, ಸಂಸದನಾಗುವ ಆಸಕ್ತಿ ನನಗೂ ಇಲ್ಲ ಎಂದು ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ.

ಮಾತುಕತೆ ನಡೆಯುತ್ತಿರುವಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಏಪ್ರಿಲ್ 14ರವರೆಗೆ ಕಾದು ನಂತರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದೆ. ಗೌರವಾನ್ವಿತ ನಿರ್ಗಮನದ ಬಗ್ಗೆ ನಾನು ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ, ಆರು ತಿಂಗಳ ಕಾಲ ಶಾಸಕನಾಗಿ ಉಳಿಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಪಕ್ಷದಿಂದ ಪ್ರತಿಕ್ರಿಯೆ ಬಾರದಿದ್ದ ಕಾರಣ ಬಿಜೆಪಿ ತೊರೆಯುವ ಬಗ್ಗೆ ಸ್ಪಷ್ಟ ನಿಲುವು ತಳೆದಿದ್ದೇನೆ. ಕೇಂದ್ರ ನಾಯಕತ್ವವು ಒಂದು ವಾರ ಅಥವಾ ಹತ್ತು ದಿನಗಳ ಹಿಂದೆ ನನ್ನನ್ನು ಆಹ್ವಾನಿಸಿ ತನ್ನ ನಿರ್ಧಾರವನ್ನು ತಿಳಿಸಿದ್ದರೆ, ನಾನು ನನ್ನ ಮನಸ್ಸು ಬದಲಾಯಿಸುತ್ತಿದ್ದೆ. ಈ ಹಠಾತ್ ನಿರ್ಧಾರವು ನನಗೆ ನೋವುಂಟು ಮಾಡಿತು. ಪರಿಣಾಮ ಏನೇ ಆಗಲಿ ಎಂದು ನಿರ್ಧರಿಸಿದ ನಾನು ಪಕ್ಷ ವಿರುದ್ಧ ಬಂಡಾಯವೆದ್ದೆ.

ನೀವು ಕಾಂಗ್ರೆಸ್  ಪಕ್ಷವನ್ನೇ ಏಕೆಆಯ್ಕೆ ಮಾಡಿಕೊಂಡಿರಿ?

ನಾನು  ಬೇರೆ ಪಕ್ಷಗಳ ಸೇರುವ  ಬಗ್ಗೆ ಯೋಚಿಸುತ್ತಿದ್ದಂತೆ, ಕಾಂಗ್ರೆಸ್ ಪಕ್ಷವು ಮಾತುಕತೆಗೆ  ನಾಯಕರುಗಳನ್ನು ಕಳುಹಿಸಿತ್ತು. ಆರಂಭದಲ್ಲಿ ನಾನು ಸ್ವತಂತ್ರವಾಗಿ ಸ್ಪರ್ಧಿಸಲು ಯೋಚಿಸಿದ್ದೆ, ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಅವರು ನನ್ನನ್ನು, ನನ್ನ ಅನುಯಾಯಿಗಳು ಮತ್ತು ಕಾರ್ಯಕರ್ತರನ್ನು ತುಳಿಯಬಹುದು ಎಂದು ಅರಿತುಕೊಂಡೆ. ಬಿಜೆಪಿಯ ವಿರುದ್ಧ ಹೋರಾಡಲು ನಾನು ಕಾಂಗ್ರೆಸ್ ಆಯ್ಕೆ ಮಾಡಿದ್ದೇನೆ. ಅಲ್ಲದೆ, ಜನಾರ್ದನರೆಡ್ಡಿ ಅಥವಾ ಯಡಿಯೂರಪ್ಪ ಅವರಂತೆ ಪಕ್ಷ ಆರಂಭಿಸಲು ನನ್ನ ಬಳಿ ಹಣವಿಲ್ಲ.

ನೀವು ಸಂಘ ಮತ್ತು ಹಿಂದುತ್ವದ ಹಿನ್ನೆಲೆಯಿಂದ ಬಂದಿರುವ ನಿಮಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುವುದಿಲ್ಲವೇ?

ನನ್ನ ಜಾತ್ಯತೀತ ಚಿತ್ರಣ ಮತ್ತು ಆಲೋಚನೆಗಳು ನನಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತದೊಂದಿಗೆ ಹೊಂದಿಕೊಳ್ಳಲು ಸುಲಭಗೊಳಿಸುತ್ತದೆ, ನನ್ನ ಆಲೋಚನೆಯು ಸಮುದಾಯಗಳ ನಡುವೆ ಸಾಮರಸ್ಯವನ್ನು ಕಾಪಾಡುವುದು ಎಲ್ಲರಿಗೂ ಒಳ್ಳೆಯದನ್ನು ಮಾಡುವುದಾಗಿದೆ.  ನಾನು ಪ್ರತಿಪಕ್ಷ ನಾಯಕ ಮತ್ತು ಸಚಿವನಾಗಿದ್ದಾಗ ಎಲ್ಲ ಪಕ್ಷಗಳ ನಾಯಕರ ಜತೆ ಕೆಲಸ ಮಾಡಿದ್ದೆ, ಆಗ ಯಾರೂ ನನ್ನ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿರಲಿಲ್ಲ. ಹಾಗಾಗಿ ಯಾವುದೇ ವ್ಯವಸ್ಥೆಗೆ ಹೊಂದಿಕೊಂಡು ಹೋಗುತ್ತೇನೆ.

ಕಾಂಗ್ರೆಸ್ ಪಕ್ಷವು ಮೂಲತಃ ಆರೆಸ್ಸೆಸ್ ವಿರೋಧಿ ಮತ್ತು ಹಿಂದೂತ್ವ ಸಿದ್ಧಾಂತ ವಿರೋಧಿಯಾಗಿದೆ. ಒಂದು ವೇಳೆ ಪಕ್ಷದ ಮುಖಂಡರು ಸಂಘ ಮತ್ತು ಅದರ ಅಂಗ ಸಂಸ್ಥೆಗಳನ್ನು ಟೀಕಿಸಿದರೆ, ನಿಮಗೆ ಮುಜುಗರವಾಗುವುದಿಲ್ಲವೇ?

ಸಾರ್ವಜನಿಕರ ಒಳಿತಿಗಾಗಿ ಶ್ರಮಿಸುವುದು ನನ್ನ ಉದ್ದೇಶ. ಪಕ್ಷದ ಇತರ ನಾಯಕರು ಏನು ಹೇಳುತ್ತಾರೋ ಅಥವಾ ಟೀಕಿಸುತ್ತಾರೋ ಅದಕ್ಕೆ ನಾನು ಕಿವಿಗೊಡುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದರೆ ಆರೆಸ್ಸೆಸ್ ಅನ್ನು ದಿನ ಬಿಟ್ಟು ದಿನ ಟೀಕಿಸುವ ಅಗತ್ಯವಿಲ್ಲ. ಅಂತಹ ಸಮಸ್ಯೆಯಿದ್ದರೆ ನಾನು ಮಾತನಾಡುತ್ತೇನೆ. ಬೇಡದ ವಿಷಯಗಳ ಬಗ್ಗೆ ಮಾತನಾಡುವ ಮೂಲಕ ವಿವಾದಗಳನ್ನು ಸೃಷ್ಟಿಸಲು ನಾನು ಬಯಸುವುದಿಲ್ಲ.

ಆರ್‌ಎಸ್‌ಎಸ್‌ನೊಂದಿಗೆ ನಿಮ್ಮ ಒಡನಾಟ ಮುಂದುವರಿಯುತ್ತದೆಯೇ?

ನಾನು ಸಂಘದ ಕಾರ್ಯಕ್ರಮಗಳಿಗೆ ಹಾಜರಾಗದಿರಬಹುದು, ಆದರೆ ಅದರ ನಾಯಕರೊಂದಿಗೆ ನನ್ನ ವೈಯಕ್ತಿಕ ಸಂಬಂಧ ಮುಂದುವರಿಯುತ್ತದೆ. ಆದರೆ ಸಂಬಂಧ ಮುಂದುವರಿಯುತ್ತದೆಯೇ ಅಥವಾ ಇಲ್ಲವೇ ಎಂದು ನಾನು ಹೇಳಲಾರೆ. ನನ್ನ ರಾಜಕೀಯಕ್ಕೆ ಆರೆಸ್ಸೆಸ್  ಎಳೆದು ತರಲು ನಾನು ಬಯಸುವುದಿಲ್ಲ.

ರಾಜ್ಯ ಬಿಜೆಪಿ ಕೆಲವು ಸದಸ್ಯರ ಕಪಿಮುಷ್ಠಿಯಲ್ಲಿದೆ ಎಂದು ನೀವು ಆರೋಪಿಸಿದ್ದೀರಿ. ಆದರೆ ಇತರ ಪಕ್ಷಗಳು ಹೇಳುವ ಪ್ರಕಾರ, ಕೇಂದ್ರ ಬಿಜೆಪಿ ಕೂಡ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹಿಡಿತದಲ್ಲಿದೆ?

ರಾಷ್ಟ್ರೀಯ ಬಿಜೆಪಿಯ ರಾಷ್ಟ್ರೀಯ ನಾಯಕರು ಮತ್ತು ಅವರ ವ್ಯವಹಾರಗಳ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಮೋದಿ ಮತ್ತು  ಪಕ್ಷ ಕಟ್ಟಿದ್ದಾರೆ. ಅವರ ಬಗ್ಗೆ ನಾನೇಕೆ ಮಾತನಾಡಬೇಕು? ಕರ್ನಾಟಕದ ಮಟ್ಟಿಗೆ ಇಲ್ಲಿ (ಬಿಜೆಪಿ) ನಾಯಕರು ಮೋದಿಯ ಲಾಭ ಪಡೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com