ಕನಕಪುರ ಕ್ಷೇತ್ರದಿಂದ 'ಬಂಡೆ' ಸ್ಪರ್ಧೆಗೆ ಅಡ್ಡಿ ಸಾಧ್ಯತೆ; ಡಿಕೆ ಶಿವಕುಮಾರ್‌ಗೆ ನಾಮಪತ್ರ ತಿರಸ್ಕೃತವಾಗುವ ಭೀತಿ

ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಶುಕ್ರವಾರ ನಾಮಪತ್ರ ಪರಿಶೀಲನೆಗೆ ರಾಜ್ಯ ಚುನಾವಣಾ ಆಯೋಗ ಮುಂದಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕನಕಪುರ ಕ್ಷೇತ್ರದಿಂದ ಸಲ್ಲಿಸಿರುವ ತಮ್ಮ ಉಮೇದುವಾರಿಕೆ ತಿರಸ್ಕೃತವಾಗುವ ಭೀತಿಯಲ್ಲಿದ್ದಾರೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಶುಕ್ರವಾರ ನಾಮಪತ್ರ ಪರಿಶೀಲನೆಗೆ ರಾಜ್ಯ ಚುನಾವಣಾ ಆಯೋಗ ಮುಂದಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕನಕಪುರ ಕ್ಷೇತ್ರದಿಂದ ಸಲ್ಲಿಸಿರುವ ತಮ್ಮ ಉಮೇದುವಾರಿಕೆ ತಿರಸ್ಕೃತವಾಗುವ ಭೀತಿಯಲ್ಲಿದ್ದಾರೆ.

ನಾಮಪತ್ರ ಸಲ್ಲಿಕೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ ಅವರ ಉಮೇದುವಾರಿಕೆ ತಿರಸ್ಕಾರಕ್ಕೆ ಕಾರಣವಾಗುತ್ತದೆ. ಇದೇ ಭೀತಿಯಿಂದಾಗಿ ಡಿಕೆ ಶಿವಕುಮಾರ್ ಅವರು ತಮ್ಮ ಸಹೋದರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿಕೆ ಸುರೇಶ್ ಅವರಿಂದಲೂ ಕನಕಪುರ ಕ್ಷೇತ್ರದಿಂದ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಮೂಲಗಳ ಪ್ರಕಾರ, ಆದಾಯ ತೆರಿಗೆ (ಐಟಿ) ಅಧಿಕಾರಿಗಳು ನಾಲ್ಕು ದಿನಗಳ ಹಿಂದೆ ಶಿವಕುಮಾರ್ ಅವರನ್ನು ವಿಚಾರಣೆಗೆ ಕರೆದಿದ್ದರು. ಶಿವಕುಮಾರ್ ಅವರು ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ಐಟಿ ಅಧಿಕಾರಿಗಳು ವಿವರ ಸಂಗ್ರಹಿಸಿದ್ದರು. ಕನಕಪುರ ಪಟ್ಟಣಕ್ಕೂ ಬಂದು ಶಿವಕುಮಾರ್ ಆಸ್ತಿ ಹಾಗೂ ಇತರೆ ವಿವರ ಸಂಗ್ರಹಿಸಿದ್ದರು.

ಐಟಿ ಅಧಿಕಾರಿಗಳು ಕಳೆದ ಐದು ವರ್ಷಗಳಿಂದ ಶಿವಕುಮಾರ್ ಅವರ ಆಸ್ತಿ ವಿವರಗಳು ಮತ್ತು ತೆರಿಗೆ ಪಾವತಿ ವಿವರಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಐಟಿ ಅಧಿಕಾರಿಗಳು ಈ ವಿಚಾರದಲ್ಲಿ ತಪ್ಪುಗಳನ್ನು ಪತ್ತೆ ಮಾಡಿದ್ದಾರೆ. ಐಟಿ ಇಲಾಖೆಗೆ ಸಲ್ಲಿಕೆಯಾಗಿರುವ ವಿವರಗಳು ಮತ್ತು ನಾಮಪತ್ರ ಸಲ್ಲಿಕೆಗಳಲ್ಲಿನ ವಿವರಗಳು ವಿಭಿನ್ನವಾಗಿರುವುದು ಕಂಡುಬಂದಿದೆ ಎಂದು ಮೂಲಗಳು ವಿವರಿಸಿವೆ.

ಚುನಾವಣಾಧಿಕಾರಿಗಳು ಶಿವಕುಮಾರ್ ಸಲ್ಲಿಸಿರುವ ಆಸ್ತಿ ವಿವರಗಳನ್ನು ಪರಿಶೀಲಿಸಲಿದ್ದು, ತಪ್ಪು ಮಾಹಿತಿ ನೀಡಿದ್ದಲ್ಲಿ ಅವರ ನಾಮಪತ್ರವನ್ನು ತಿರಸ್ಕರಿಸಲಿದ್ದಾರೆ. ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ, ಶಿವಕುಮಾರ್ ಅವರೂ ಕಾನೂನು ಕುಣಿಕೆಯಲ್ಲಿ ಸಿಲುಕಿಕೊಳ್ಳಬಹುದು ಎನ್ನಲಾಗಿದೆ.

ಈ ಬೆಳವಣಿಗೆಯಿಂದಾಗಿ ಶಿವಕುಮಾರ್ ನಾಮಪತ್ರ ತಿರಸ್ಕೃತಗೊಳ್ಳುವ ಶಂಕೆಯ ಹಿನ್ನೆಲೆಯಲ್ಲಿ ಸಹೋದರ ಸುರೇಶ್ ಅವರನ್ನು ಕಣಕ್ಕಿಳಿಸಿದ್ದಾರೆ. ಶಿವಕುಮಾರ್ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜೊತೆ ಸಿಎಂ ಹುದ್ದೆಯ ರೇಸ್‌ನಲ್ಲಿದ್ದು, ಈ ಬೆಳವಣಿಗೆಯಿಂದ ಶಿವಕುಮಾರ್‌ಗೆ ಹಿನ್ನಡೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com