ಬಿಜೆಪಿಯಲ್ಲೇ ಇರುವೆ, ಆದರೆ ಯತ್ನಾಳ್ ಪರ ಪ್ರಚಾರ ಮಾಡುವುದಿಲ್ಲ: ಅಪ್ಪು ಪಟ್ಟಣಶೆಟ್ಟಿ ಸ್ಪಷ್ಟನೆ

ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿಯ ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ ನಡುವಿನ ರಾಜಕೀಯ ವೈಮನಸ್ಸು ಮತ್ತಷ್ಟು ಹೆಚ್ಚಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ವಿಜಯಪುರ: ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿಯ ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ ನಡುವಿನ ರಾಜಕೀಯ ವೈಮನಸ್ಸು ಮತ್ತಷ್ಟು ಹೆಚ್ಚಾಗಿದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ನಡುವಲ್ಲೇ ಪಟ್ಟಣಶೆಟ್ಟಿ ಅವರು ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಪರ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಕ್ಷದಲ್ಲಿಯೇ ಉಳಿಯಲು ನಿರ್ಧರಿಸಿದ್ದೇನೆ. ಆದರೆ, ಯತ್ನಾಳ್ ಪರ ಪ್ರಚಾರ ಮಾಡುವುದಿಲ್ಲ. ಯತ್ನಾಳ್ ಅವರನ್ನು ಹೊರತುಪಡಿಸಿ ಪಕ್ಷದ ಇತರೆ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆಂದು ಹೇಳಿದ್ದಾರೆ.

ಯತ್ನಾಳ್ ನನ್ನನ್ನು ಮತ್ತು ನನ್ನ ಬೆಂಬಲಿಗರನ್ನು ಪ್ರಚಾರದಿಂದ ಸಂಪೂರ್ಣವಾಗಿ ದೂರ ಇಟ್ಟಿದ್ದಾರೆ. ಅವರಿಗೆ ಇದೀಗ ನನ್ನ ಮತ್ತು ನನ್ನ ಬೆಂಬಲಿಗರ ಅಗತ್ಯವಿಲ್ಲ. ಹೀಗಾಗಿ ಅವರ ಪರ ಪ್ರಚಾರ ಮಾಡುವ ಅವಶ್ಯಕತೆ ನನಗೂ ಇಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಇತರ ಏಳು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ನನ್ನನ್ನು ಪ್ರಚಾರಕ್ಕೆ ಆಹ್ವಾನಿಸಿದ್ದಾರೆ. ಅವರ ಪರ ಪ್ರಚಾರ ಮಾಡುತ್ತೇನೆಂದು ಹೇಳಿದರು.

ಹಲವು ಬಾರಿ ಪ್ರಯತ್ನ ಮಾಡಿದರೂ ಪಕ್ಷವು ನನಗೆ ಟಿಕೆಟ್ ನಿರಾಕರಿಸಿದ್ದು, ಇದು ನನಗೆ ನೋವುಂಟು ಮಾಡಿದೆ. ಮುಂದಿನ ನಡೆ ಬಗ್ಗೆ ನಿರ್ಧಾರ ಕೈಗೊಳ್ಳಲು ಬೆಂಬಲಿಗರ ಸಭೆ ಕರೆದಿದ್ದೇನೆ. ಸಭೆ ಬಳಿಕ ನಿರ್ಧಾರ ಕೈಗೊಳ್ಳುತ್ತೇನೆಂದರು.

ಚುನಾವಣೆಯಲ್ಲಿ ಯತ್ನಾಳ್‌ಗೆ ಮತ ಹಾಕದಿರುವ ಬಣಜಿಗ ಸಮುದಾಯದ ನಿರ್ಧಾರ ಕುರಿತು ಮಾತನಾಡಿ, ಇದು ಸಮುದಾಯದ ನಿರ್ಧಾರ, ಅದನ್ನು ಬೆಂಬಲಿಸುವುದಿಲ್ಲ ಮತ್ತು ವಿರೋಧಿಸುವುದೂ ಇಲ್ಲ ಎಂದರು.

ನಾನು ಎಂದಿಗೂ ಜಾತಿ ರಾಜಕೀಯವನ್ನು ಮಾಡುವುದಿಲ್ಲ. ಏಕೆಂದರೆ ನಾನು ಯಾವಾಗಲೂ ಅಂತರ್ಗತ ರಾಜಕೀಯದಲ್ಲಿ ನಂಬಿಕೆ ಹೊಂದಿದ್ದೇನೆ, ಆದರೆ, ಇಂದು ಜಾತಿ ರಾಜಕೀಯವು ವಾಸ್ತವಕ್ಕೆ ತಿರುಗಿದೆ. ರಾಜಕೀಯ ಪಕ್ಷಗಳು ತಮ್ಮ ಸಮುದಾಯದ ಆಕಾಂಕ್ಷಿಗಳಿಗೆ ಟಿಕೆಟ್ ನಿರಾಕರಿಸಿದಾಗ ಸಮಾಜದ ಮುಖಂಡರಿಗೆ ನೋವಾಗುವುದು ಸಹಜ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com