ಕಾಂಗ್ರೆಸ್ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ, ಮೋದಿ ಸರ್ಕಾರ ಪಿಎಫ್ ಐ ನಿಷೇಧಿಸಿದೆ: ಯೋಗಿ ಆದಿತ್ಯನಾಥ್
ಮಂಡ್ಯ: ತ್ರೇತಾಯುಗದಿಂದಲೂ ಕರ್ನಾಟಕ ಮತ್ತು ಉತ್ತರ ಪ್ರದೇಶ ನಡುವೆ ಸಂಬಂಧವಿದೆ. ಮರ್ಯಾದ ಪುರುಷೋತ್ತರ ಶ್ರೀರಾಮ ಹುಟ್ಟಿದ ಸ್ಥಳ ಉತ್ತರ ಪ್ರದೇಶದ ಅಯೋಧ್ಯೆಯಾದರೆ ಶ್ರೀರಾಮನ ಪರಮ ಭಕ್ತ ಹನುಮಂತ ಹುಟ್ಟಿದ ನಾಡು ಈ ಕರ್ನಾಟಕ. ಹೀಗಾಗಿ ಕರ್ನಾಟಕ ಮತ್ತು ಉತ್ತರ ಪ್ರದೇಶ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಹಿಂದೂ ಫೈರ್ ಬ್ರಾಂಡ್ ಎಂದೇ ಜನಪ್ರಿಯವಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಡ್ಯದಲ್ಲಿಂದು ಹೇಳಿದ್ದಾರೆ.
ಕರ್ನಾಟಕ ಚುನಾವಣೆ ಸಂಬಂಧ ಪ್ರಚಾರಕ್ಕೆ ಇಂದು ಮಂಡ್ಯಕ್ಕೆ ಆಗಮಿಸಿದ ಅವರು ತಮ್ಮ ಎಂದಿನ ಶೈಲಿಯಲ್ಲಿಯೇ ಭಾಷಣ ಮಾಡಿದರು. ಇಂದು ಪ್ರಧಾನಿ ಮೋದಿಯವರ ಆಡಳಿತದ ಯೋಜನೆ ಪರಿಕಲ್ಪನೆಯನ್ನು ಇಡೀ ದೇಶದ ಜನರು, ವಿದೇಶಿಯವರು ಸಹ ಒಪ್ಪಿಕೊಂಡಿದ್ದಾರೆ, ಕೊಂಡಾಡಿದ್ದಾರೆ. ಭಾರತದ ಸಾಮರ್ಥ್ಯ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಹೀಗಿರುವಾಗ ಕರ್ನಾಟಕವು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಲು ಬಿಜೆಪಿಗೆ ಮತ ನೀಡುವಂತೆ ಮಂಡ್ಯ ಮತದಾರರನ್ನು ಕೋರಿದರು.
ದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಯಾವತ್ತೂ ಕೆಲಸ, ಅಭಿವೃದ್ಧಿ ವಿಚಾರದಲ್ಲಿ ದೋಖಾ ಮಾಡಿಲ್ಲ, ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸವಾಗುತ್ತದೆ. ಹಿಂದಿನ ಯುಪಿಎ ಸರ್ಕಾರ ಆರಂಭಿಸಿ ಅರ್ಧದಲ್ಲಿ ನಿಲ್ಲಿಸಿದ್ದ ಕಾಮಗಾರಿಗಳು, ಶಿಲಾನ್ಯಾಸ ಮಾಡಿ ನಿಂತು ಹೋಗಿದ್ದ ಯೋಜನೆಗಳನ್ನು ಮೋದಿ ಸರ್ಕಾರ ಪೂರ್ಣಗೊಳಿಸಿ ಉದ್ಘಾಟನೆ ಮಾಡಿದ್ದಾರೆ, ಚಾಲನೆ ನೀಡಿದ್ದಾರೆ. ಮೋದಿ ಸರ್ಕಾರದಲ್ಲಿ ಅಭಿವೃದ್ಧಿಯ ಬದಲಾವಣೆ ಕಾಣುತ್ತಿದೆ ಎಂದು ವಿವರಿಸುವ ಮೂಲಕ ಬಿಜೆಪಿಗೆ ಜನರು ಮತ ಹಾಕುವಂತೆ ಮನವೊಲಿಸುವ ಪ್ರಯತ್ನ ಮಾಡಿದರು.
ಕಾಂಗ್ರೆಸ್ ನವರು ತುಷ್ಠೀಕರಣ ರಾಜಕಾರಣ ಮಾಡುತ್ತಿದ್ದಾರೆ. ಮೋದಿ ಸರ್ಕಾರ ಬಂದ ಮೇಲೆ ಪಿಎಫ್ಐ ಬ್ಯಾನ್ ಮಾಡಿದೆ. ಕಾಂಗ್ರೆಸ್ ಪಿಎಫ್ಐ ತುಷ್ಠೀಕರಣ ಮಾಡುತ್ತಿದೆ. ಆರೋಗ್ಯ, ಉದ್ಯೋಗ ಕ್ಷೇತ್ರ, ತಂತ್ರಜ್ಞಾನ, ವಿಜ್ಞಾನ, ಯುವ ಸಮುದಾಯಕ್ಕೆ ಹಲವು ಯೋಜನೆಗಳು ಹೀಗೆ ಹಲವು ಕ್ಷೇತ್ರಗಳಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕಾಣುತ್ತಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
ಇದಕ್ಕೂ ಮುನ್ನ ಯೋಗಿ ಆದಿತ್ಯನಾಥ್ ಅವರು ಮಂಡ್ಯದಲ್ಲಿ 500 ಮೀಟರ್ ರೋಡ್ ಶೋದಲ್ಲಿ ಸಾಗಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ