ಹನೂರು ಕ್ಷೇತ್ರ: ಆರು ದಶಕಗಳ 'ಕುಟುಂಬ ಪಾರುಪತ್ಯ', ಈ ಬಾರಿ ಜೆಡಿಎಸ್ ನಿಂದ ಅಂತ್ಯ?

ದಿವಂಗತ ರಾಜೂಗೌಡರ ಕುಟುಂಬ ಹಾಗೂ ದಿವಂಗತ ಎಚ್‌.ನಾಗಪ್ಪ ಕುಟುಂಬಗಳ ನಡುವಿನ ಹಣಾಹಣಿಗೆ ಈ ಕ್ಷೇತ್ರ ಸಾಕ್ಷಿಯಾಗುತ್ತಾ ಬಂದಿದೆ.  ದಿ.ರಾಜೂಗೌಡರ ಕುಟುಂಬ ಕಾಂಗ್ರೆಸ್‌ಗೆ ನಿಷ್ಠರಾಗಿದ್ದರೆ, ನಾಗಪ್ಪ ಕುಟುಂಬ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡಿತ್ತು. ಈಗ ಬಿಜೆಪಿಗೆ ನಿಷ್ಠವಾಗಿದೆ.
ಆರ್. ನರೇಂದ್ರ ಮತ್ತು ಪ್ರೀತಮ್ ನಾಗಪ್ಪ
ಆರ್. ನರೇಂದ್ರ ಮತ್ತು ಪ್ರೀತಮ್ ನಾಗಪ್ಪ

ಮೈಸೂರು: ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಹನೂರು ವಿಧಾನಸಭಾ ಕ್ಷೇತ್ರವು ಎರಡು ಕುಟುಂಬಗಳ ನಡುವಿನ ಕದನಕ್ಕೆ ಹೆಸರಾದ ಕ್ಷೇತ್ರ.

ಕಳೆದ ಆರು ದಶಕಗಳಿಂದ ಹನೂರು ಕ್ಷೇತ್ರ ಕುಟುಂಬಗಳ ಪಾರುಪತ್ಯಕ್ಕೆ ಹೆಸರಾಗಿದೆ. ಮತದಾರರ ಮನಸ್ಥಿತಿ ಆಧಾರದ ಮೇಲೆ  ಕುಟುಂಬಗಳು ಅಧಿಕಾರ ನಡೆಸುತ್ತಲೆ ಬಂದಿವೆ.

ದಿವಂಗತ ರಾಜೂಗೌಡರ ಕುಟುಂಬ ಹಾಗೂ ದಿವಂಗತ ಎಚ್‌.ನಾಗಪ್ಪ ಕುಟುಂಬಗಳ ನಡುವಿನ ಹಣಾಹಣಿಗೆ ಈ ಕ್ಷೇತ್ರ ಸಾಕ್ಷಿಯಾಗುತ್ತಾ ಬಂದಿದೆ. ದಿ.ರಾಜೂಗೌಡರ ಕುಟುಂಬ ಕಾಂಗ್ರೆಸ್‌ಗೆ ನಿಷ್ಠರಾಗಿದ್ದರೆ, ನಾಗಪ್ಪ ಕುಟುಂಬ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡಿತ್ತು. ಈಗ ಬಿಜೆಪಿಗೆ ನಿಷ್ಠವಾಗಿದೆ.

ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಗುಡ್ಡಗಾಡು ಕ್ಷೇತ್ರವು ಲಿಂಗಾಯತರು, ದಲಿತರು, ಕುರುಬರು, ಗೌಂಡರ್‌ಗಳು, ಆದಿವಾಸಿಗಳು, ಒಕ್ಕಲಿಗರು ಮತ್ತು ಇತರ ಸಣ್ಣ ಸಮುದಾಯಗಳ ಪ್ರಾಬಲ್ಯವನ್ನು ಹೊಂದಿದೆ.

ಎರಡು ಪ್ರತಿಸ್ಪರ್ಧಿ ಕುಟುಂಬಗಳು ಕಳೆದ 60 ವರ್ಷಗಳಲ್ಲಿ ಹಲವು ಏರಿಳಿತಗಳನ್ನು ಕಂಡಿವೆ. ಜಿ ವೆಂಕಟೇಗೌಡ 1957 ರಿಂದ 1962 ರವರೆಗೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು, ಅದೇ ಕುಟುಂಬದ ಜಿ ರಾಜುಗೌಡ 1978, 1985, 1989 ಮತ್ತು 1999 ರಲ್ಲಿ ಗೆದ್ದಿದ್ದರು. ಅವರ ಮಗ ನರೇಂದ್ರ 2008 ರಿಂದ ಮೂರು ಬಾರಿ ಗೆದ್ದಿದ್ದಾರೆ.

ಎಚ್ ನಾಗಪ್ಪ 1967 ಮತ್ತು 1984 ರಲ್ಲಿ ಗೆಲುವು ಸಾಧಿಸಿದ್ದರು. ಅವರನ್ನು ದಂತಚೋರ ವೀರಪ್ಪನ್‌ ಕೊಂದ ನಂತರ ಅವರ ಪತ್ನಿ ಪರಿಮಳ ನಾಗಪ್ಪ 2004 ರಲ್ಲಿ ಚುನಾವಣೆಯಲ್ಲಿ ಗೆದ್ದರು. ಈ ಕ್ಷೇತ್ರದ ಮತದಾರರು ಎರಡು ಕುಟುಂಬಗನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ತಲೆಮಾರಿನ ಬದಲಾವಣೆಯಾದರೂ ಮತದಾರರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ,  ಈ ಬಾರಿಯ ಚುನಾವಣೆಯಲ್ಲೂ ಯುವ ಪೀಳಿಗೆ ಟೈಟಾನಿಕ್ ಸ್ಪರ್ಧೆಗೆ ಅಣಿಯಾಗಿದೆ.

ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಗೆಲುವನ್ನೇ ಮಾನದಂಡ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಕುಟುಂಬಗಳಿಗೆ ಅಂಟಿಕೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಆರ್ ನರೇಂದ್ರ ಮತ್ತು ಬಿಜೆಪಿಯ ಪ್ರೀತಮ್ ನಾಗಪ್ಪ ಈ ಬಾರಿ ಕಣದಲ್ಲಿದ್ದಾರೆ. ಕುಟುಂಬ ಪರಂಪರೆ ಮತ್ತು ಸಾಂಪ್ರದಾಯಿಕ ಬೆಂಬಲಿಗರು ಅಭ್ಯರ್ಥಿಗಳ ಪರವಾಗಿದ್ದಾರೆ.

ಜೆಡಿಎಸ್ ಮತ್ತೊಮ್ಮೆ ಕುರುಬ ಜನಾಂಗದ ಎಂ.ಆರ್.ಮಂಜುನಾಥ್ ಅವರನ್ನು ಕಣಕ್ಕಿಳಿಸಿದ್ದು, ಇದೇ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಕಾರ್ಯಕರ್ತರು ಸುಡು ಬಿಸಿಲಿನಲ್ಲಿ ಬೆವರು ಸುರಿಸುತ್ತಿದ್ದಾರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ನೀಡಿದ ಭಾಗ್ಯಗಳನ್ನು ಪಟ್ಟಿ ಮಾಡಿ ಮನೆ ಮನೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸುತ್ತಿದ್ದಾರೆ.

ಪ್ರೀತಮ್ ನಾಗಪ್ಪ ಮತದಾರರಿಗೆ ಅಷ್ಟಾಗಿ ಪರಿಚಿತರಲ್ಲದಿದ್ದರೂ ಕಳೆದ ಚುನಾವಣೆಯಲ್ಲಿ 56,931 ಮತಗಳನ್ನು ಪಡೆದಿದ್ದರು, ಈ ಬಾರಿಯ ವಿಧಾನಸಭೆ ಚುನಾವಣೆಗಾಗಿ ಕಳೆದೆರಡು ತಿಂಗಳಿಂದ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಸಾಂಪ್ರದಾಯಿಕ ಎದುರಾಳಿಗಳ ನಡುವೆ ಪ್ರತಿ ಬಾರಿ ಸ್ಪರ್ಧೆ ನಡೆಯುವ ಈ ಕ್ಷೇತ್ರದಲ್ಲಿ ಜಾತಿ ರಾಜಕೀಯ ಇಲ್ಲದಿದ್ದರೂ, ಅಭಿವೃದ್ಧಿ ವಿಚಾರ ಹೆಚ್ಚು ಚರ್ಚೆಯಾಗುವುದಿಲ್ಲ. ಹೀಗಾಗಿ ಮಂಜುನಾಥ್ ಈ ಬಾರಿ ಹನೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜನರಿಗೆ ತಿಳಿಸುವ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ.

ಒಕ್ಕಲಿಗ, ದಲಿತ ಮತ್ತು ಹಿಂದುಳಿದ ಸಮುದಾಯಗಳನ್ನು ಒಗ್ಗೂಡಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದರೆ, ಬಿಜೆಪಿಗೆ ಲಿಂಗಾಯತ, ಬೇಡಗಂಪನ ಮತ್ತಿತರರು ಬೆಂಬಲ ನೀಡಿದ್ದಾರೆ. ಆದರೆ ಮಂಜುನಾಥ್ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಈಗ ಇತರೆ ಸಮುದಾಯಗಳನ್ನು ಓಲೈಸುವ ಅನಿವಾರ್ಯತೆಗೆ ಸಿಲುಕಿವೆ. ಹನೂರಿನಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com