ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎಂದು ಹೈಕಮಾಂಡ್ ಹೇಳಿಲ್ಲ: ಊಹಾಪೋಹಗಳಿಗೆ ತೆರೆ ಎಳೆದ ಸತೀಶ್ ಜಾರಕಿಹೊಳಿ

2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಕೆಲವು ಸಚಿವರು ಅಥವಾ ಸಂಸದರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎಂಬ ಊಹಾಪೋಹವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಳ್ಳಿಹಾಕಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: 2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಕೆಲವು ಸಚಿವರು ಅಥವಾ ಸಂಸದರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎಂಬ ಊಹಾಪೋಹವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಳ್ಳಿಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿಯವರು, ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಲು ತಯಾರಿ ನಡೆಸುವಂತೆ ಎಲ್ಲರಿಗೂ ಸೂಚನೆ ನೀಡಿದ್ದಾರೆಯೇ ಹೊರತು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎಂದು ಹೈಕಮಾಂಡ್ ನನಗೆ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು,

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎಂದು ಹೈಕಮಾಂಡ್ ನನಗೆ ಹೇಳಿಲ್ಲ. ಆದರೆ ಚುನಾವಣೆಯಲ್ಲಿ ರಾಜ್ಯದಿಂದ ಅತೀ ಹೆಚ್ಚು ಸ್ಥಾನ ಗೆಲ್ಲಿಸಬೇಕು. ಆದ್ದರಿಂದ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕೆಂದು ಸಭೆಯಲ್ಲಿ ಎಲ್ಲರಿಗೂ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ನಮ್ಮ‌ ಜಿಲ್ಲೆಯಲ್ಲಿ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವುದು ನಮ್ಮ ಕರ್ತವ್ಯ. ಅದನ್ನು ಮಾಡುತ್ತೇವೆ. ಈಗಾಗಲೇ ಬೆಂಗಳೂರಿನಲ್ಲಿ ಒಂದು ಬಾರಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಚರ್ಚೆಯಾಗಿದೆ. ಎರಡನೇ ಬಾರಿ ಆದಷ್ಟು ಬೇಗ ಬೆಳಗಾವಿಯಲ್ಲಿ ಸಭೆ ಮಾಡಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಹೈಕಮಾಂಡ್ ನನಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸಬೇಕೆಂದು ಸೂಚನೆ ನೀಡಿಲ್ಲ. ಆಕಾಂಕ್ಷಿ ಅಭ್ಯರ್ಥಿಗಳನ್ನು ಹುಡುಕಾಟ ನಡೆಸಬೇಕಿದೆ. ಹಾಲಿ ಹಾಗೂ ಮಾಜಿ ಸಚಿವರಿಗೆ ಸ್ಪರ್ಧೆ ಮಾಡಬೇಕೆಂದು ಎಲ್ಲಿಯೂ ಹೇಳಿಲ್ಲ. ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಿ ಅವರಿಗೆ ಅವಕಾಶ ಕೊಡುತ್ತೇವೆ. ವಿಧಾನಸಭಾ ‌ಚುನಾವಣೆಯ ಮಾದರಿಯಲ್ಲಿ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಲಿದೆ. ಆದರೆ ಈ ಚುನಾವಣೆಯಲ್ಲಿ ಹೆಚ್ಚಿನ ಜವಾಬ್ದಾರಿ ಇದೆ ಎಂದರು.

ಇದೇ ವೇಳೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಗಡ್ಕರಿ ಭೇಟಿ ವೇಳೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಕಾಮಗಾರಿಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ಮಾಹಿತಿ ನೀಡಿದರು.

ಜೆಡಿಎಸ್ ಮುಖಂಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕಳೆದ ಎರಡು ತಿಂಗಳಿಂದ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆಯೇ ಆರೋಪ ಮಾಡುತ್ತಿದ್ದಾರೆಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com