ಕಮಿಷನ್ ಕೇಳಿಲ್ಲ ಎಂದಾದರೆ ಡಿಕೆ ಶಿವಕುಮಾರ್ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ: ಸಿಟಿ ರವಿ ಸವಾಲು

ತಾವು ಹಾಗೂ ತಮ್ಮ ಸರ್ಕಾರ ಪ್ರಮಾಣಿಕ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾವಿಸುವುದಾದರೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಒತ್ತಾಯದಂತೆ ಅಜ್ಜಯ್ಯನವರ ಮಠದಲ್ಲಿ ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಸಿಟಿ ರವಿ ಆಗ್ರಹಿಸಿದ್ದಾರೆ. 
ಸಿ.ಟಿ ರವಿ
ಸಿ.ಟಿ ರವಿ

ಚಿಕ್ಕಮಗಳೂರು: ತಾವು ಹಾಗೂ ತಮ್ಮ ಸರ್ಕಾರ ಪ್ರಮಾಣಿಕ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾವಿಸುವುದಾದರೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಒತ್ತಾಯದಂತೆ ಅಜ್ಜಯ್ಯನವರ ಮಠದಲ್ಲಿ ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಸಿಟಿ ರವಿ ಆಗ್ರಹಿಸಿದ್ದಾರೆ. 

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಿಟಿ ರವಿ, ಈ ಆರೋಪಗಳನ್ನು ತಾವೊಬ್ಬರೇ ಅಲ್ಲ, ಬಿಬಿಎಂಪಿ ಗುತ್ತಿಗೆದಾರರ ಸಂಘದಿಂದಲೂ ಮಾಡಲಾಗಿದೆ. ಹೀಗಾಗಿ, ಅಜ್ಜಯ್ಯನ ಮಠದಲ್ಲಿ ಪ್ರಮಾಣ ಮಾಡುವ ಮೂಲಕ ನಿರಪರಾಧಿ ಎಂದು ಸಾಬೀತುಪಡಿಸಲಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಸವಾಲು ಹಾಕಿದರು.

ಗುತ್ತಿಗೆದಾರರ ಸಂಘದಿಂದ ನೇರವಾಗಿ ಈ ಮಾಹಿತಿ ಪಡೆದಿರುವುದಾಗಿ ಹೇಳಿರುವ ಸಿಟಿ ರವಿ, ಭ್ರಷ್ಟಾಚಾರದಲ್ಲಿ ಶಿವಕುಮಾರ್ ಭಾಗಿಯಾಗಿರುವುದು ಅತ್ಯಂತ ಕಳವಳಕಾರಿಯಾಗಿದೆ. ಹಳೆ ಕಾಮಗಾರಿಗಳ ಬಿಲ್‌ ಪಾವತಿಗೆ ಮೊದಲು ಶೇ 7ರಷ್ಟು ಕಮಿಷನ್ ನಿಗದಿಪಡಿಸಿದ್ದರು. ನಂತರ ಮಧ್ಯವರ್ತಿಗಳು ಶೇ 10ರಷ್ಟು ಕೊಡಬೇಕು ಎಂದರು. ಬಳಿಕ ಶೇ 15ರಷ್ಟು ಕಮಿಷನ್ ನೀಡಿದರೆ ಮಾತ್ರ ಬಿಲ್ ಪಾವತಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ ಎಂದರು. 

ಈ ಆರೋಪಗಳು ಸುಳ್ಳು ಎನ್ನುವುದಾದರೆ ಡಿಕೆ ಶಿವಕುಮಾರ್ ಅವರು ಅಜ್ಜಯ್ಯನ ಮಠಕ್ಕೆ ತೆರಳಿ ಪ್ರಮಾಣ ಮಾಡುವ ಮೂಲಕ ಸತ್ಯವನ್ನು ಬಹಿರಂಗಪಡಿಸಲಿ. ಪ್ರಮಾಣ ಮಾಡುವಾಗ ನನ್ನ ಜೀವನದಲ್ಲೇ ಇನ್ನಾವ ಲಂಚವನ್ನೂ ಸ್ವೀಕರಿಸಿಲ್ಲ ಎಂದು ಮಾಡಿದರೆ ಅವರಿಗೆ ಇನ್ನಾವ ಸಾಕ್ಷ್ಯವೂ ಬೇಕಾಗುವುದಿಲ್ಲ ಎಂದು ಟೀಕಿಸಿದರು.

ಇದೇ ವೇಳೆ, ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಬಹುತೇಕ ಕಾಂಗ್ರೆಸ್ ಶಾಸಕರು ಒಂದೇ ದಿನದಲ್ಲಿ ವಸೂಲಿಗೆ ಹೊರಟಿದ್ದಾರೆ. ಬಹಿರಂಗವಾಗಿ ನಾನು ಅಷ್ಟು ಖರ್ಚು ಮಾಡಿದ್ದೇನೆ, ನಾನೇನು ದಾನ-ಧರ್ಮಕ್ಕೆ ರಾಜಕಾರಣ ಮಾಡುತ್ತಿದ್ದೇನಾ, ನಾನೇನು ಧರ್ಮರಾಯನಾ, ಖರ್ಚು ಮಾಡಿದ ಹಣ ವಸೂಲಿ ಆಗದಿದ್ದಲ್ಲಿ ಹೆಂಡತಿ ಮಕ್ಕಳನ್ನು ಬೀದಿಗೆ ನಿಲ್ಲಿಸಬೇಕಾ ಎಂದು ಶಾಸಕರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com