ಜಿ.ಟಿ. ದೇವೇಗೌಡ
ಜಿ.ಟಿ. ದೇವೇಗೌಡ

ದೇವೇಗೌಡರ ಕುಟುಂಬ ಹೊರಗಿಟ್ಟು ಹೊಸ ಕೋರ್ ಕಮಿಟಿ ರಚಿಸಿದ ಜೆಡಿಎಸ್; ಜಿ.ಟಿ.ದೇವೇಗೌಡ ಅಧ್ಯಕ್ಷ

ಮುಂಬರುವ ಲೋಕಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಮತ್ತು ಪಕ್ಷ ಬಲಪಡಿಸುವ ಉದ್ದೇಶದಿಂದ ಜೆಡಿಎಸ್, ಮಾಜಿ ಸಚಿವ ಹಾಗೂ ಹಿರಿಯ...

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಮತ್ತು ಪಕ್ಷ ಬಲಪಡಿಸುವ ಉದ್ದೇಶದಿಂದ ಜೆಡಿಎಸ್, ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ 21 ಸದಸ್ಯರ ನೂತನ ಕೋರ್ ಕಮಿಟಿ ರಚಿಸಿದೆ.

ಕೋರ್ ಕಮಿಟಿ ಸಂಚಾಲಕರಾಗಿ ಮಾಜಿ ಶಾಸಕ ವೈಎಸ್ ವಿ ದತ್ತ ಅವರನ್ನು ನೇಮಕ ಮಾಡಲಾಗಿದೆ.

ಕುತೂಹಲಕಾರಿಯಾಗಿ, ಪಕ್ಷದ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಕುಟುಂಬದ ಯಾವುದೇ ಸದಸ್ಯರು ಈ ಕೋರ್ ಕಮಿಟಿಯ ಭಾಗವಾಗಿಲ್ಲ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ನಡೆದ ಪಕ್ಷದ ಮುಖಂಡರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ಪಕ್ಷದ ವರಿಷ್ಠ ಎಚ್‌ಡಿ ದೇವೇಗೌಡರ ನಿರ್ದೇಶನದ ಮೇರೆಗೆ ಕೋರ್ ಕಮಿಟಿ ರಚಿಸಲಾಗಿದೆ ಎಂದರು.

ಆಗಷ್ಟು 7ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಕೋರ್ ಕಮಿಟಿ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ ಅಂತಿಮಗೊಳಿಸಲಾಗಿದೆ ಎಂದರು.

21 ಸದಸ್ಯರ ಕೋರ್ ಕಮಿಟಿಯಲ್ಲಿ ಮಾಜಿ ಸಚಿವರಾದ ಸಾ.ರಾ.ಮಹೇಶ್, ಬಂಡೆಪ್ಪ ಖಾಶೆಂಪೂರ್, ಎಚ್.ಕೆ.ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ, ಸಿ.ಎಸ್.ಪುಟ್ಟರಾಜು, ಆಲ್ಕೋಡ್ ಹನುಮಂತಪ್ಪ ಸೇರಿದಂತೆ ಹಲವು ಶಾಸಕರು, ಎಂಎಲ್ಸಿಗಳು ಹಾಗೂ ಪಕ್ಷದ ಮುಖಂಡರು ಇದ್ದು, ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದರು.

ಸಭೆಯಲ್ಲಿ ಪಕ್ಷ ಸಂಘಟನೆ ಮತ್ತು ಬಲವರ್ಧನೆ, ಮುಂಬರುವ ಲೋಕಸಭೆ ಚುನಾವಣೆ ಹಾಗೂ ತಾಲೂಕು, ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಸಿದ್ಧತೆ ಹಾಗೂ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲಾಯಿತು ಎಂದು ಇಬ್ರಾಹಿಂ ತಿಳಿಸಿದರು.

ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಪಕ್ಷದ ನಾಯಕರು ಆಗಸ್ಟ್ 20 ರಿಂದ ಸೆಪ್ಟೆಂಬರ್ 30 ರವರೆಗೆ ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ಅವರು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com