ಸಿದ್ದರಾಮಯ್ಯ ಸರ್ಕಾರಕ್ಕೆ 100 ದಿನ: ʼಕೈಕೊಟ್ಟ ಯೋಜನೆಗಳು-ಹಳಿ ತಪ್ಪಿದ ಆಡಳಿತ’ ಪುಸ್ತಕ ಬಿಡುಗಡೆ ಮಾಡಿದ ಬಿಜೆಪಿ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ನೂರು ದಿನ ಪೂರೈಸಿದ ಬೆನ್ನಲ್ಲೇ ಕಾಂಗ್ರೆಸ್‌ನ ವೈಫಲ್ಯಗಳ ಕುರಿತು ರಾಜ್ಯ ಬಿಜೆಪಿ ‘ಕೈಕೊಟ್ಟ ಯೋಜನೆಗಳು-ಹಳಿ ತಪ್ಪಿದ ಆಡಳಿತ’ ಎಂಬ ಪುಸ್ತಕವನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಂಗಳವಾರ ರಾಜ್ಯ ಸರ್ಕಾರದ 100 ವೈಫಲ್ಯಗಳ ಒಳಗೊಂಡ ಪುಸ್ತಕವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು.
ಕೇವಲ ಮಾಧ್ಯಮ ವರದಿಗಳನ್ನೇ ಮುಂದಿಟ್ಟುಕೊಂಡು ಮುದ್ರಿಸಿ ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡಲಾಗಿದ್ದು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿನ ಆರೋಪಗಳು ಸೇರಿದಂತೆ ವರ್ಗಾವಣೆ ದಂಧೆ, ಶಾಸಕರು-ಸಚಿವರ ನಡುವಿನ ಹಗ್ಗಜಗ್ಗಾಟ ಸೇರಿದಂತೆ ಇತರೆ ವಿಷಯವನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ.
ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು, “ನೂರು ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಜನದ್ರೋಹ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನೂರಾರು ತಪ್ಪು ಮಾಡಿದೆ. ಇಬ್ಬರು ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಆದರೂ ಸರ್ಕಾರ ಅವರ ರಾಜೀನಾಮೆ ಪಡೆಯಲಿಲ್ಲ” ಎಂದು ಟೀಕಿಸಿದರು.
“ನಮ್ಮ ಸರ್ಕಾರವಿದ್ದಾಗ ಬಂಡವಾಳ ಹೂಡಿಕೆ ಅತಿ ಹೆಚ್ಚು ಬಂದಿತ್ತು. ಈಗ ವಿದ್ಯುತ್ ದರ ಹೆಚ್ಚಳ, ವ್ಯತ್ಯಯದಿಂದ ಹೂಡಿಕೆದಾರರು ವಾಪಸ್ ಹೋಗಿದ್ದಾರೆ. ರೈತ ವಿದ್ಯಾನಿಧಿ, ಕಿಸಾನ್ ಸಮ್ಮಾನ್ ಯೋಜನೆಗಳಿಗೆ ಕತ್ತರಿ ಹಾಕಿದ್ದಾರೆ. ಎರಡು ಶಕ್ತಿಗಳು ಸಿಎಂ ಕಂಟ್ರೋಲ್ ಮಾಡುತ್ತಿವೆ ಎಂಬುದನ್ನು ಕೇಳಿದ್ದೇವೆ. ಭ್ರಷ್ಟಾಚಾರ ನಿಯಂತ್ರಣ ಮಾಡುವಲ್ಲೂ ಸರ್ಕಾರ ವಿಫಲವಾಗಿದೆ” ಎಂದು ಕಿಡಿಕಾರಿದರು.
“ಕಾಂಗ್ರೆಸ್ ಬಿಜೆಪಿ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿ ಜೈಲಿಗೆ ಹಾಕುತ್ತಿದ್ದಾರೆ. ಹಿಂದಿನ ತುರ್ತು ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಮಾಧ್ಯಮಗಳ ಮೇಲೂ ಇವರು ದಬ್ಬಾಳಿಕೆ ಮಾಡುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲೂ ವಿಫಲರಾಗಿದ್ದಾರೆ” ಕಟೀಲ್ ಆರೋಪಿಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, “ರಾಜ್ಯ ಕಾಂಗ್ರೆಸ್ ಸರ್ಕಾರ ಐದು ವರ್ಷದ ಆಡಳಿತದ ದಿಕ್ಸೂಚಿ ಹೇಳಬೇಕಿತ್ತು. ಆದರೆ, ಹಲವಾರು ವಿಚಾರಗಳಲ್ಲಿ ವೈಫಲ್ಯ ಮತ್ತು ಗೊಂದಲ ಇದೆ. ನಾಡಿನ ಜನರಿಗೆ ಕೊಟ್ಟ ಮಾತು ತಪ್ಪಿದೆ. ಹಣಕಾಸಿನ ವಿಚಾರದಲ್ಲಿ ರಾಜ್ಯ ಸರ್ಕಾರ ಹಳಿ ತಪ್ಪಿದೆ. ಇದು ದಿಕ್ಕುತಪ್ಪಿದ ಸರ್ಕಾರ” ಎಂದು ಟೀಕಿಸಿದರು.
“ಎಲ್ಲ ತೆರಿಗೆ ಹೆಚ್ಚಳವಾಗಿದೆ, ಸಾಲ ಮತ್ತು ತೆರಿಗೆ ಮೂಲಕ 45 ಸಾವಿರ ಕೋಟಿ ಆದಾಯ ಇದ್ದರೂ 12 ಸಾವಿರ ಕೋಟಿ ರೂ. ಖೋತಾ ಬಜೆಟ್ ಮಂಡಿಸಿದ್ದಾರೆ. ಹಲವಾರು ಸಂಘ ಮತ್ತು ಸಂಸ್ಥೆಗಳ ಸಂಬಳ ಸರಿಯಾಗಿ ಆಗುತ್ತಿಲ್ಲ. ರಾಜ್ಯದಲ್ಲಿ 1 ಕಿ.ಮೀ. ರಸ್ತೆ ಕೂಡ ಕಾಂಗ್ರೆಸ್ ನಿರ್ಮಾಣ ಮಾಡಿಲ್ಲ. ಕೃಷಿ ಸೇರಿ ಹಲವು ಇಲಾಖೆಯಲ್ಲಿ ವರ್ಗಾವಣೆಯ ಸುಗ್ಗಿ ನಡೆದಿದೆ” ಎಂದು ಹರಿಹಾಯ್ದರು.
ದೂರು ಕೊಟ್ಟವರ ಮೇಲೆಯೇ ಈ ಸರ್ಕಾರ ಕೇಸ್ ಹಾಕಿಸುತ್ತಿದೆ. ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದರೂ ನಾವೇನೂ ಕೇಸ್ ಹಾಕಲಿಲ್ಲ. ತನಿಖೆ ಮಾಡದೇ ದೂರು ಕೊಟ್ಟವರ ಮೇಲೆಯೇ ಕ್ರಮ ತೆಗೆದುಕೊಳ್ಳುವುದು ಕಾಂಗ್ರೆಸ್ ಸರ್ಕಾರ” ಎಂದು ಎಂದು ಕಿಡಿಕಾರಿದರು.
“ಶಾಸಕ ಬಿ.ಆರ್. ಪಾಟೀಲ್ ನಕಲಿ ಪತ್ರ ಎಂದರು. ಅವರ ಶಾಸಕರೇ ತಾವು ಸಹಿ ಮಾಡಿದ್ದೇವೆ ಎಂದರು. ತನಿಖೆ ಮಾಡದೇ ಪತ್ರಕರ್ತರ ಮೇಲೆ ಪ್ರಶ್ನೆ ಮಾಡಿದರು. ಎಲ್ಲದಕ್ಕೂ ಕೇಸ್ ಹಾಕಿದರೆ ಜೈಲಿನಲ್ಲಿ ಜಾಗ ಸಾಕಾಗಲ್ಲ. ಎಲ್ಲ ಕ್ಲಬ್ ಗಳನ್ನು ಬಂದ್ ಮಾಡಲಾಗಿತ್ತು. ಈಗ ಮತ್ತೆ ಎಲ್ಲ ಓಪನ್ ಆಗಿವೆ. ಎಲ್ಲೆಂದರಲ್ಲಿ ಮಾಮೂಲಿ ಪಡೆದು ಓಪನ್ ಮಾಡಿದ್ದಾರೆ” ಎಂದು ದೂರಿದರು.
“ಶಿಕ್ಷಣ, ಆರೋಗ್ಯ, ಕೃಷಿಗೆ ಪ್ರೋತ್ಸಾಹ ಇಲ್ಲ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಮುಕ್ತವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಮಂತ್ರಿಗಳು, ಸಿಎಂ ಕಚೇರಿ ನಡುವೆ ಭ್ರಷ್ಟಾಚಾರಕ್ಕಾಗಿ ಗಲಾಟೆ ನಡೆಯುತ್ತಿವೆ. ಬೆಂಗಳೂರು ಗ್ರಾಮೀಣ ಎಸಿ ಸೇರಿದಂತೆ ಪ್ರಮುಖ ಹುದ್ದೆಗಳ ವರ್ಗಾವಣೆಗೆ ಹರಾಜು ನಡೆಯುತ್ತಿದೆ” ಎಂದು ಆರೋಪಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ