ಬಿಜೆಪಿ ಮುಖಂಡನ ಮೇಲೆ ಹಲ್ಲೆ ಆರೋಪ ಸತ್ಯಕ್ಕೆ ದೂರವಾದದ್ದು: ಚನ್ನರಾಜ ಹಟ್ಟಿಹೊಳಿ
ಚಿಕ್ಕೋಡಿ (ಬೆಳಗಾವಿ): ಬಿಜೆಪಿ ಮುಖಂಡನ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಃ ಕಾಂಗ್ರೆಸ್ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಆರೋಪ ಸತ್ಯಕ್ಕೆ ದೂರವಾಗಿದದ್ದು. ಸುಳ್ಳು ಆರೋಪವಾಗಿದೆ. ನಾವು ಹಲ್ಲೆ ಮಾಡುವ ಕೆಲಸಕ್ಕೆ ಕೈ ಹಾಕುವುದಿಲ್ಲ, ಶಿಸ್ತಿನಿಂದ ರಾಜಕೀಯ ಮಾಡುತ್ತೇವೆಂದು ಹೇಳಿದ್ದಾರೆ.
ಈ ಬಗ್ಗೆ ತನಿಖೆ ಆಗಬೇಕು ಸ್ಪಷ್ಟ ಮಾಹಿತಿ ಹೊರಬರಬೇಕು. ಹಲ್ಲೆ ಯಾರು ಮಾಡಿದರೂ ಎನ್ನುವುದರ ಬಗ್ಗೆ ಫಾರೆನ್ಸಿಕ್ ರಿಪೋರ್ಟ್ ಬರಬೇಕಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಈ ಬಗ್ಗೆ ಸಾಕಷ್ಟು ಅನುಮಾನಗಳಿವೆ. ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ. ಪೃಥ್ವಿ ಸಿಂಗ್ ಅವರು ಈಗ ಇರುವ ಮನೆ ಮೊದಲು ನನ್ನ ಕಚೇರಿಯಾಗಿದ್ದರಿಂದ ರೆಂಟ್ ಅಗ್ರಿಮೆಂಟ್ ವಾಪಸ್ ಕೇಳಲು ನನ್ನ ಸಹಚರರು ಹೋಗಿದ್ದರು. ಈ ಬಗ್ಗೆ ವಿಸ್ತೃತ ತನಿಖೆಯಾಗೇಬೇಕಿದೆ ಎಂದು ತಿಳಿಸಿದ್ದಾರೆ.
ಪೃಥ್ವಿ ಹೇಳಿರುವ ಎಲ್ಲಾ ವಿಷಯಗಳು ಸತ್ಯಕ್ಕೆ ದೂರವಾಗಿವೆ, ವೈರಲ್ ಆಗಿರುವ ಸಿಸಿಟಿವಿ ದೃಶ್ಯಗಳಲ್ಲಿ, ಪೃಥ್ವಿ ವಿಭಿನ್ನ ಉಡುಗೆ ತೊಟ್ಟಿದ್ದಾರೆ. ಆದರೆ, ಮತ್ತೊಂದು ವಿಡಿಯೋ ತುಣುಕಿನಲ್ಲಿ ಅವರು ಬಿಳಿ ಶರ್ಟ್‌ನಲ್ಲಿ ರಕ್ತದ ಕಲೆಗಳೊಂದಿಗೆ ಕಂಡುಬಂದಿದ್ದಾರೆ. ಆರೋಪದಿಂದಾಗಿ ನನ್ನ ವರ್ಚಸ್ಸನ್ನು ಹಾಳು ಮಾಡಲಾಗುತ್ತಿದೆ ಎಂದಿದ್ದಾರೆ.
ಪೊಲೀಸರು ಒತ್ತಡದಲ್ಲಿದ್ದಾರೆ: ರಮೇಶ್ ಜಾರಕಿಹೊಳಿ ಆರೋಪ
ಬಿಜೆಪಿ ಮುಖಂಡನ ಮೇಲೆ ನಡೆದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸದಂತೆ ಬೆಳಗಾವಿ ಪೊಲೀಸರ ಮೇಲೆ ಮಹಾನ್ ನಾಯಕರಿಂದ ಒತ್ತಡವಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ ಮಹಾನ್ ನಾಯಕರು, ಕೊತ್ವಾಲ್ ರಾಮಚಂದ್ರ ಶಿಷ್ಯರು ಅಧಿಕಾರದಲ್ಲಿದ್ದಾಗ ಹೇಗೆ ನ್ಯಾಯ ಸಿಗುತ್ತದೆ. ಈಗಾಗಲೇ ದೂರು ಕೊಟ್ಟಿದ್ದಾರೆ. ಆದರೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ. ಹೈದರಾಬಾದ್ ನಲ್ಲಿ ಕುಳಿತು ಬಹಳಷ್ಟು ಒತ್ತಡ ಮಾಡುತ್ತಿದ್ದಾರೆ. ಎಡಿಜಿಪಿ ಅಧಿಕಾರಿ ಮೂಲಕ ಸ್ಥಳೀಯ ಪೊಲೀಸರಿಗೆ ಬಹಳಷ್ಟು ಒತ್ತಡ ಬರುತ್ತಿದೆ ಎಂದು ಹೇಳಿದ್ದಾರೆ.
ನನಗೆ ತಿಳಿದಿರುವಂತೆ, ಬೆಂಗಳೂರಿನ ಎಡಿಜಿಪಿ ಶ್ರೇಣಿಯ ಪೊಲೀಸ್ ಅಧಿಕಾರಿಯೊಬ್ಬರು ಎಫ್‌ಐಆರ್ ದಾಖಲಿಸದಂತೆ ಸ್ಥಳೀಯ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ. ಬಿಹಾರದಲ್ಲಿಯೂ ಇಂತಹ ಅಪರಾಧಗಳು ನಡೆಯುತ್ತಿಲ್ಲ. ಚೂರಿ ಇರಿತ ಘಟನೆ ನಡೆದು 24 ಗಂಟೆ ಕಳೆದರೂ ಎಫ್‌ಐಆರ್ ದಾಖಲಾಗಿಲ್ಲ. ಪೊಲೀಸರು ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದರೆ ನಾವು ಹೈಕೋರ್ಟ್ ಅಥವಾ ಸಿಬಿಐ ಮೊರೆ ಹೋಗುತ್ತೇವೆ" ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ