ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚುನಾವಣಾ ಸಿದ್ಧತೆ ಪ್ಲಾನ್: ನಿಚ್ಚಳ ಬಹುಮತದೊಂದಿಗೆ ಪಕ್ಷ ಅಧಿಕಾರಕ್ಕೆ ಬರುವ ಸಂಕಲ್ಪ!

ಭಾರತೀಯ ಜನತಾ ಪಕ್ಷದ ಕೋರ್ ಕಮಿಟಿ ಶುಕ್ರವಾರ ಸಭೆ ನಡೆಯಿತು, ಚುನಾವಣಾ ಪೂರ್ವ ಸಮೀಕ್ಷೆಯ ವರದಿಯೊಂದಿಗೆ ಬಿಜೆಪಿ ಶಸ್ತ್ರಸಜ್ಜಿತವಾಗಿದೆ. ವಿವಿಧ ಸಮೀಕ್ಷಾ ವರದಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಸಿ.ಟಿ ರವಿ
ಸಿ.ಟಿ ರವಿ

ಬೆಂಗಳೂರು: ಭಾರತೀಯ ಜನತಾ ಪಕ್ಷದ ಕೋರ್ ಕಮಿಟಿ ಶುಕ್ರವಾರ ಸಭೆ ನಡೆಯಿತು, ಚುನಾವಣಾ ಪೂರ್ವ ಸಮೀಕ್ಷೆಯ ವರದಿಯೊಂದಿಗೆ ಬಿಜೆಪಿ ಶಸ್ತ್ರಸಜ್ಜಿತವಾಗಿದೆ. ವಿವಿಧ ಸಮೀಕ್ಷಾ ವರದಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಅದರ ಪ್ರಕಾರ, ನಿಚ್ಚಳ ಬಹುಮತದೊಂದಿಗೆ ನಾವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ಕಾರ್ಯಕಾರಿಣಿ ನಂತರ ಮಾತನಾಡಿದ ಅವರು, ನೆಲಮಟ್ಟದಲ್ಲಿ ತಯಾರಿ ಚೆನ್ನಾಗಿ ನಡೆದಿದೆ. ನಾವು ಸೌಂಡ್‌ ಮಾಡುವ ಕೆಲಸ ಮಾಡುತ್ತಿಲ್ಲ. ಆ ಕೆಲಸವನ್ನು ಕಾಂಗ್ರೆಸ್‌ಗೆ ಬಿಟ್ಟಿದ್ದೇವೆ. ಗ್ರೌಂಡ್‌ ಮಟ್ಟದಲ್ಲಿ ಏನೆಲ್ಲ ಕೆಲಸ ಮಾಡಬೇಕೊ ಅದನ್ನು ಮಾಡುತ್ತಿದ್ದೇವೆ. ಬೂತ್‌ ಗೆಲ್ಲುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು.

ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ 2-3 ಬಾರಿ ಭೇಟಿ ನೀಡಲಿದ್ದಾರೆ ಎಂದ ಸಿ.ಟಿ. ರವಿ, ಅಮಿತ್‌ ಶಾ, ಜೆ.ಪಿ. ನಡ್ಡಾ ಸೇರಿ ಕೇಂದ್ರದ ವಿವಿಧ ಸಚಿವರು ಆಗಮಿಸುತ್ತಾರೆ. ಕರ್ನಾಟಕ ಸರ್ಕಾರದ ಸಚಿವರು ಮತ್ತು ಪಕ್ಷದ ನಾಯಕರ ತಂಡ ಪ್ರತಿ ಜಿಲ್ಲೆಯಲ್ಲಿ ಫಲಾನುಭವಿಗಳ ಸಮಾವೇಶ ನಡೆಸಲಾಗುತ್ತದೆ.

2008 ಮತ್ತು 2018ರಲ್ಲಿ ಅಧಿಕಾರಕ್ಕೆ ಬಂದ ಎರಡೂ ಸಂದರ್ಭಗಳಲ್ಲಿ ಬಿಜೆಪಿಗೆ ಸರ್ಕಾರ ರಚಿಸುವ ಸಂಖ್ಯಾಬಲ ಇರಲಿಲ್ಲ. 2008ರಲ್ಲಿ 110 ಹಾಗೂ 2018ರಲ್ಲಿ 104 ಸ್ಥಾನಗಳನ್ನು ಪಡೆದಿತ್ತು. ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಅಥವಾ ಮೂರು ಬಾರಿ ಕರ್ನಾಟಕಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಸಭೆಯಲ್ಲಿ ರವಿ ಹೇಳಿದರು, ಹಾಗೆಯೇ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ. ವಿವಿಧ ಕೇಂದ್ರ ಸಚಿವರು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಮತ್ತು ರಾಜ್ಯ ಮತ್ತು ಕೇಂದ್ರ ಕಾರ್ಯಕ್ರಮಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಒಟ್ಟು ನಾಲ್ಕು ತಂಡಗಳಲ್ಲಿ ಯಾತ್ರೆಯ ಯೋಜನೆ ಆಗಿದೆ ಎಂದ ಸಿ.ಟಿ.ರವಿ, ಈ ನಾಲ್ಕೂ ತಂಡಗಳು ಬಹುತೇಕ ಜಿಲ್ಲೆಗಳನ್ನು ಪ್ರವಾಸ ಮಾಡಿದ ನಂತರ ದಾವಣಗೆರೆಯಲ್ಲಿ ಮಹಾ ಸಂಗಮ ನಡೆಯಲಿದೆ. ಇದರ ಜತೆಜತೆಗೆ ಪ್ರತಿ ಜಿಲ್ಲೆಯಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ನಡೆಸಲಾಗುತ್ತದೆ. ವಿಜಯ ಸಂಕಲ್ಪ ಯಾತ್ರೆ ಎನ್ನುವ ಹೆಸರನ್ನು ನೀಡಲಾಗಿದೆ. ಪ್ರತಿದಿನ ಒಂದು ದೊಡ್ಡ ಸಮಾವೇಶ, ಸಂಜೆ ವೇಳೆ ನಡೆಯುತ್ತದೆ. ಯಾತ್ರೆಯು ಫೆಬ್ರವರಿ ಕೊನೆಯ ವಾರದಲ್ಲಿ ಆರಂಭ ಆಗುತ್ತದೆ. ಮಾರ್ಚ್‌ ಮೂರನೇ ವಾರದ ಆಸುಪಾಸಿನಲ್ಲಿ ಮಹಾ ಸಂಗಮ ದಾವಣಗೆರೆಯಲ್ಲಿ ನಡೆಯುತ್ತದೆ.

ಪ್ರತಿ ಬೂತ್‌ಗೆ ಎಲ್‌ಇಡಿ ವ್ಯಾನ್‌ ಹೋಗುತ್ತದೆ. ಕೇಂದ್ರ ಹಾಗೂ ರಾಜ್ಯದ ಯೋಜನೆಗಳ ಮಾಹಿತಿಗಳು ಹಾಗೂ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿಕೊಡಲಿದ್ದೇವೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಶೇ.50 ಮತ ಪಡೆಯುವ ಮೂಲಕ ಯಾವುದೇ ಹಂಗಿಲ್ಲದೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು ಎಂಬ ಗುರಿಯಿದೆ. ಅಭಿವೃದ್ಧಿ ಹಾಗೂ ಸಿದ್ಧಾಂತದ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ.

ಈಗಾಗಲೆ ಅನೇಕ ಅಭ್ಯರ್ಥಿಗಳ ಪಟ್ಟಿ ತಯಾರಾಗಿದೆ ಎಂದು ತಿಳಿಸಿದ ಸಿ.ಟಿ. ರವಿ, ಗೆಲ್ಲುವ ಸಾಮರ್ಥ್ಯವನ್ನು ಹೊಂದಿರುವವರ ಹೆಸರನ್ನು ಈಗಾಗಲೆ ಸಂಘಟನೆ ಪಟ್ಟಿ ಮಾಡಲಾಗಿದೆ. ಚುನಾವಣಾ ಸಮಿತಿ ಚರ್ಚೆ ಮಾಡಿ ಅಂತಿಮಗೊಳಿಸುತ್ತದೆ. ದೊಡ್ಡದೊಡ್ಡ ಕಾಂಗ್ರೆಸ್‌ ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಅನೇಕರು ನಮ್ಮ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್‌ಗೆ ಮರ್ಮಾಘಾತ ಆಗುವುದು ನಿಶ್ಚಿತ. 2018ರ ಅನುಭವದ ಆಧಾರದಲ್ಲಿ ಸಿ ಮತ್ತು ಡಿ ಕ್ಷೇತ್ರಗಳಲ್ಲಿ ಎರಡು ವರ್ಷದಿಂದಲೇ ಕೆಲಸ ಆರಂಭಿಸಿದ್ದೇವೆ. ಈ ಬಾರಿ ಸರಳ ಬಹುಮತ ಬರಲಿದ್ದೇವೆ ಎಂದರು.

ಜೊತೆಗೆ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಹಳೇ ಮೈಸೂರು ಕೇಂದ್ರೀಕರಿಸಿ ಬಿಜೆಪಿ ನಾಯಕರ ನಾಲ್ಕು ತಂಡಗಳು ರಾಜ್ಯಾದ್ಯಂತ ಸಂಚರಿಸಲಿವೆ. ಯುವ ಮೋರ್ಚಾ, ಮಹಿಳಾ ಮೋರ್ಚಾ ಮತ್ತು ಇತರ ಮೋರ್ಚಾಗಳು ಎಲ್ಲಾ 224 ಕ್ಷೇತ್ರಗಳಲ್ಲಿ ಸಭೆಗಳನ್ನು ನಡೆಸುತ್ತವೆ. ಸಿಎಂ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್, ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com