ವಿಧಾನಸಭಾ ಚುನಾವಣೆ: ಮತದಾರರ ಓಲೈಸಲು ರೈತರ ಕಾರ್ಡ್ ಬಳಸಿದ ಡಿಕೆಶಿ, ಮೇಕೆದಾಟು ಯೋಜನೆ ಜಾರಿಗೆ ತರುವುದಾಗಿ ಘೋಷಣೆ!

ಮಂಡ್ಯ ಜಿಲ್ಲೆಯ ಒಕ್ಕಲಿಗ ಸಮುದಾಯ ಹಾಗೂ ರೈತರ ಮನ ಗೆಲ್ಲಬೇಕೆಂಬ ಹಂಬಲದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಪ್ರಚಾರದ ವೇಳೆ ರೈತ ಕಾರ್ಡ್ ಅನ್ನು ಬಳಕೆ ಮಾಡಿದ್ದು, ಬಹು ನಿರೀಕ್ಷಿತ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬದ್ಧ ಎಂದು ಶನಿವಾರ ಘೋಷಿಸಿದ್ದಾರೆ.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಮೈಸೂರು: ಮಂಡ್ಯ ಜಿಲ್ಲೆಯ ಒಕ್ಕಲಿಗ ಸಮುದಾಯ ಹಾಗೂ ರೈತರ ಮನ ಗೆಲ್ಲಬೇಕೆಂಬ ಹಂಬಲದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಪ್ರಚಾರದ ವೇಳೆ ರೈತ ಕಾರ್ಡ್ ಅನ್ನು ಬಳಕೆ ಮಾಡಿದ್ದು, ಬಹು ನಿರೀಕ್ಷಿತ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬದ್ಧ ಎಂದು ಶನಿವಾರ ಘೋಷಿಸಿದ್ದಾರೆ.

ಮದ್ದೂರಿನಲ್ಲಿ ಶನಿವಾರ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದು, ಮಂಡ್ಯದ ಜನರ ಹಿತ ಕಾಪಾಡಲು ಹಾಗೂ ಬೆಂಗಳೂರಿಗರ ಕುಡಿಯುವ ನೀರಿನ ಅಗತ್ಯತೆಗಳನ್ನು ಈಡೇರಿಸುವ ಸಲುವಾಗಿದೆ ಎಂದು ಹೇಳಿದರು.

ಅಧಿಕಾರಕ್ಕೆ ಬಂದಿದ್ದೇ ಆದರೆ, ಮಂಡ್ಯದಲ್ಲಿ ಇನ್ನೂ ಬಾಕಿ ಇರುವ 40 ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇನೆ. ರೈತರ ಬದುಕನ್ನು ಬದಲಾಯಿಸುವ ಶಕ್ತಿ ಮತ್ತು ದೂರದೃಷ್ಟಿ ಕಾಂಗ್ರೆಸ್‌ಗೆ ಇದೆ ಎಂದು ತಿಳಿಸಿದರು.

ಇದೇ ವೇಳೆ 400 ಟಿಎಂಸಿ ಅಡಿ ಕಾವೇರಿ ನೀರು ಸಮುದ್ರ ಪಾಲಾಗುತ್ತಿರುವುದನ್ನು ಉಲ್ಲೇಖಿಸಿದ ಅವರು, ಮೇಕೆದಾಟು ಯೋಜನೆಯು ಮಂಡ್ಯದ ರೈತರ ಆಶೋತ್ತರಗಳನ್ನು ಮತ್ತು ಸಿಲಿಕಾನ್ ಸಿಟಿ ಜನರ ಅಗತ್ಯಗಳನ್ನು ಪೂರೈಸುತ್ತದೆ ಎಂದರು.

''ಸಮ್ಮಿಶ್ರ ಸರಕಾರದಲ್ಲಿ ನೀರಾವರಿ ಸಚಿವನಾಗಿದ್ದ ನಾನು ಮೇಕೆದಾಟು ಯೋಜನೆ ಜಾರಿಗೊಳಿಸಿ ಹೆಚ್ಚುವರಿ ನೀರು ಸಂಗ್ರಹಿಸಿ ವಿದ್ಯುತ್ ಉತ್ಪಾದಿಸುವ ಪ್ರಯತ್ನ ನಡೆಸಿದ್ದೆ, ಸಂಕಷ್ಟದ ವರ್ಷದಲ್ಲೂ ತಮಿಳುನಾಡು ತನ್ನ ಪಾಲನ್ನು ನಿಷ್ಕರುಣೆಯಿಂದ ಕಸಿದುಕೊಂಡಿತ್ತು. ಆದರೆ, ಸಂಕಷ್ಟ ಎದುರಾದಾಗ ಮೇಕೆದಾಟು ಜಲಾಶಯವು ಸಹಾಯ ಮಾಡಲಿದೆ. ತಮಿಳುನಾಡು ಪಾಲಿನ ನೀರು ಮತ್ತು ಕೆಆರ್‌ಎಸ್‌ ನೀರನ್ನು ನೀರಾವರಿಗೆ ಬಳಸಿಕೊಳ್ಳಬಹುದು ಎಂದು ಹೇಳಿದರು.

ರೈತರ ಹಿತ ಕಾಪಾಡಲು ಎಸ್‌ಎಂ ಕೃಷ್ಣ ಬೆಂಗಳೂರಿನಿಂದ ಮಂಡ್ಯದವರೆಗೆ ಪಾದಯಾತ್ರೆ ನಡೆಸಿದ್ದನ್ನು ಸ್ಮರಿಸಿಕೊಂಡು ‘ಪ್ರಜಾಧ್ವನಿ’ ನಡೆಸುತ್ತಿದ್ದೇವೆ. 2018ರ ಚುನಾವಣೆಯಲ್ಲಿ ಜನತೆಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಈ ಬಗ್ಗೆ ಜನರಿಗೆ ವಿವರವಾಗಿ ಮಾಹಿತಿ ನೀಡುತ್ತೇವೆ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ, ಜನರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುವುದಾಗಿ ಹಾಗೂ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಬಿಜೆಪಿ ಭರವಸೆ ನೀಡಿದ್ದು, ಈ ಭರವಸೆಗಳನ್ನಾದರೂ ಈಡೇರಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

ಇದೇ ವೇಳೆ ಶಿವಕುಮಾರ್ ಅವರು ಹೀರಣ್ಣ ಗೌಡ, ಶಂಕರೇಗೌಡ, ಮಾದೇಗೌಡ, ಎಂ ಎಚ್ ಅಂಬರೀಶ್ ಅವರ ಕೊಡುಗೆಗಳನ್ನು ಸ್ಮರಿಸಿದರು ಮತ್ತು ಎಸ್ ಎಂ ಕೃಷ್ಣ ಅವರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆಂದರು.

ಮಂಡ್ಯದ ಜನರು ಮತ್ತು ವರ್ಷವಿಡೀ ಕೃಷಿ ಚಟುವಟಿಕೆಗಳನ್ನು ಅವಲಂಬಿಸಿರುವ ರೈತರು ರಾಷ್ಟ್ರವನ್ನು ಬದಲಾಯಿಸುವ ಶಕ್ತಿ ಹೊಂದಿದ್ದಾರೆಂದು ತಿಳಿಸಿದರು.

ಹೆಚ್ ಡಿ ದೇವೇಗೌಡರನ್ನು ಕಾಂಗ್ರೆಸ್ ದೇಶದ ಪ್ರಧಾನಿಯನ್ನಾಗಿ ಮಾಡಿತ್ತು. ವಿಧಾನಸಭೆಯಲ್ಲಿ 80 ಸದಸ್ಯರಿರುವ ಕಾಂಗ್ರೆಸ್ 38 ಶಾಸಕರಿರುವ ಹೆಚ್ ಡಿ ಕುಮಾರಸ್ವಾಮಿ ಅವರನ್ನು 2018ರಲ್ಲಿ ಮುಖ್ಯಮಂತ್ರಿಯಾಗುವಂತೆ ಮಾಡಿತು ಎಂದರು.

ನಂತರ ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್, ಕುಟುಂಬದ ಓರ್ವ ಮಹಿಳೆಗೆ ತಿಂಗಳಿಗೆ 2,000 ರೂ ಮತ್ತು 10 ಕೆಜಿ ಅಕ್ಕಿಯನ್ನು ಘೋಷಿಸಿದ್ದು, ನೀಡಿದ ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com