ಪ್ರತಿ ವರ್ಷ ಕೃಷಿಕನ ಬ್ಯಾಂಕ್ ಖಾತೆಗೆ 15 ಸಾವಿರ ರೂ. ಜಮೆ: ಗಾಲಿ ಜನಾರ್ಧನ್ ರೆಡ್ಡಿ ಪಕ್ಷದ ಪ್ರಣಾಳಿಕೆ ಬಿಡುಗಡೆ
ರಾಜ್ಯ ವಿಧಾನಸಭಾ ಚುನಾವಣೆ ಇನ್ನೂ ಅಧಿಕೃತವಾಗಿ ಘೋಷಣೆಯಾಗದಿದ್ದರೂ ರಾಜಕೀಯ ಪಕ್ಷಗಳು ಈಗಾಗಲೇ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿವೆ.
Published: 14th February 2023 08:58 PM | Last Updated: 15th February 2023 01:36 PM | A+A A-

ಗಾಲಿ ಜನಾರ್ಧನ ರೆಡ್ಡಿ
ರಾಯಚೂರು: ರಾಜ್ಯ ವಿಧಾನಸಭಾ ಚುನಾವಣೆ ಇನ್ನೂ ಅಧಿಕೃತವಾಗಿ ಘೋಷಣೆಯಾಗದಿದ್ದರೂ ರಾಜಕೀಯ ಪಕ್ಷಗಳು ಈಗಾಗಲೇ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿವೆ.
ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ,ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ರಾಜ್ಯಾದ್ಯಂತ ಸಂಚರಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರೆ, ಗಾಲಿ ಜನಾರ್ಧನ ರೆಡ್ಡಿ ಸ್ಥಾಪಿಸಿರುವ ಹೊಸ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮಂಗಳವಾರ ಒಂದು ಹೆಜ್ಜೆ ಮುಂದೆ ಹೋಗಿದ್ದು, ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಸಿಂಧನೂರು ತಾಲೂಕಿನ ಅಂಬಾಮಠದಲ್ಲಿ ಪಾದಯಾತ್ರೆ ನಡೆಸಿದ ಗಾಲಿ ಜನಾರ್ಧನರೆಡ್ಡಿ ಅಲ್ಲಿಯೇ, ಪ್ರಣಾಳಿಕೆ ಬಿಡುಗಡೆ ಮಾಡಿದರು. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಪ್ರತಿ ವರ್ಷ ರೈತನ ಅಕೌಂಟ್‌ಗೆ ರೂ.15,000 ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ರೈತರ ಮನೆ ಬಾಗಿಲಿಗೆ ಅಧಿಕಾರಿಗಳು ಆಗಮಿಸಿ ಸಮಸ್ಯೆ ಆಲಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ.
ಎಲ್ಲ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು, ನೀರಾವರಿ ಯೋಜನೆ ಸದೃಢಗೊಳಿಸಲಾಗುವುದು, ಸಕಾಲಕ್ಕೆ ರಸ ಗೊಬ್ಬರಗಳನ್ನು ರೈತರಿಗೆ ನೀಡಲು ಕ್ರಮ ತೆಗೆದುಕೊಳ್ಳುವುದಾಗಿ ಅವರು ಘೋಷಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಪಾದಯಾತ್ರೆಗೆ ಬಂದ ಗ್ರಾಮಸ್ಥರು ಹಾಗೂ ಸುಮಾರು 20 ಸಾವಿರ ಕಾರ್ಯಕರ್ತರಿಗೆ ಅಂಬಾಮಠದ ಬಳಿ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು.