ನನ್ನ ವಿರುದ್ಧ ಪತ್ನಿಯ ಕಣಕ್ಕಿಳಿಸಿದ್ದಾನೆ, ಬಳ್ಳಾರಿಯಿಂದಲೇ ಸ್ಪರ್ಧಿಸಿ ಗೆಲವು ಸಾಧಿಸುತ್ತೇನೆ: ಜನಾರ್ಧನ ರೆಡ್ಡಿ ವಿರುದ್ಧ ತೊಡೆ ತಟ್ಟಿದ ಸೋಮಶೇಖರ್ ರೆಡ್ಡಿ

ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಥಾಪಿಸಿರುವ ಕೆಆರ್‌ಪಿಪಿ ಪಕ್ಷದಿಂದ ಜನಾರ್ದನ ರೆಡ್ಡಿ ಅವರ ಪತ್ನಿ ಗಾಲಿ ಲಕ್ಷ್ಮೀ ಅರುಣಾ ಅವರು ಬಳ್ಳಾರಿ ನಗರ ಕ್ಷೇತ್ರಕ್ಕೆ ಅಭ್ಯರ್ಥಿ ಎಂದು ಘೋಷಣೆ ಆಗಿರುವ ಹಿನ್ನೆಲೆ ಸೋಮಶೇಖರ್ ರೆಡ್ಡಿಯವರು ಅಸಮಾಧಾನ ಹೊರಹಾಕಿದ್ದಾರೆ.
ಸೋಮಶೇಖರ್ ರೆಡ್ಡಿ
ಸೋಮಶೇಖರ್ ರೆಡ್ಡಿ

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಥಾಪಿಸಿರುವ ಕೆಆರ್‌ಪಿಪಿ ಪಕ್ಷದಿಂದ ಜನಾರ್ದನ ರೆಡ್ಡಿ ಅವರ ಪತ್ನಿ ಗಾಲಿ ಲಕ್ಷ್ಮೀ ಅರುಣಾ ಅವರು ಬಳ್ಳಾರಿ ನಗರ ಕ್ಷೇತ್ರಕ್ಕೆ ಅಭ್ಯರ್ಥಿ ಎಂದು ಘೋಷಣೆ ಆಗಿರುವ ಹಿನ್ನೆಲೆ ಸೋಮಶೇಖರ್ ರೆಡ್ಡಿಯವರು ಅಸಮಾಧಾನ ಹೊರಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಮ್ಮನಿಗಾಗಿ 63 ದಿನ ಜೈಲು ಸೇರಿದೆ. ಅವನನ್ನು ಜೈಲಿನಿಂದ ಬಿಡುಗಡೆ ಮಾಡಲು ಹಗಲು ರಾತ್ರಿ ಹೋರಾಡಿದ್ದೆ. ತಮ್ಮನ ಪತ್ನಿ ಲಕ್ಷ್ಮೀ ಅರುಣಾ ಸಹ ನಿಮ್ಮ ಋುಣ ತೀರಿಸಲು ಸಾಧ್ಯವಿಲ್ಲ ಮಾಮಾ ಎಂದಿದ್ದಳು. ಅವರ ಪುತ್ರಿ ಸಹ ಇದೇ ಮಾತು ಹೇಳಿದ್ದಳು. ಅವರಿಗಾಗಿ ಇಷ್ಟೆಲ್ಲ ತ್ಯಾಗ ಮಾಡಿದ್ದೆ. ಆದಾಗ್ಯೂ ನನ್ನ ವಿರುದ್ಧವೇ ಅವರು ಸ್ಪರ್ಧೆ ಮಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆಯಿಂದ ಅವರು ಸಂಪಾದನೆ ಮಾಡಿಕೊಂಡರು. ನಾನೇನು ಮಾಡಿಕೊಂಡಿಲ್ಲ. ರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲಿಗೆ ಹೋದ ಕಾರಣ 2013ರಲ್ಲಿ ಚುನಾವಣೆಗೂ ಸ್ಪರ್ಧಿಸಿರಲಿಲ್ಲ. ಆತನಿಗಾಗಿ ನಾನೂ ಜೈಲಿಗೆ ಹೋಗಬೇಕಾಯಿತು. ತಮ್ಮನಿಗಾಗಿ ಅಷ್ಟೆಲ್ಲ ತ್ಯಾಗ ಮಾಡಿದೆ. ಆದರೂ ತಮ್ಮನ ಪತ್ನಿ ನನ್ನ ವಿರುದ್ಧವೇ ಸ್ಪರ್ಧಿಸುತ್ತಿರುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು.

ಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಪಕ್ಷ ಟಿಕೆಟ್‌ ನೀಡಲಿದೆ ಎಂಬ ವಿಶ್ವಾಸವಿದೆ. ಒಂದು ವೇಳೆ ನೀಡದಿದ್ದರೂ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಮತ್ತೆ ಬಿಜೆಪಿ ಸೇರುವೆ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ನನ್ನ ತಮ್ಮನ ಪತ್ನಿ ಲಕ್ಷ್ಮೀ ಅರುಣಾ ನನ್ನ ವಿರುದ್ಧ ಸ್ಪರ್ಧೆ ಮಾಡುತ್ತಿರುವುದು ಸಂತಸವಾಗಿದೆ. ಸೊಸೆ ಮತ್ತು ಮಾವನ ನಡುವೆ ತೀವ್ರ ಪೈಪೋಟಿ ಇರಲಿದೆ ಎಂದು ತಿಳಿಸಿದರು.

‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಘೋಷಣೆ ಅನಿರೀಕ್ಷಿತವಲ್ಲ. ನಿರೀಕ್ಷೆಯಂತೆ ಅವರು ಅಭ್ಯರ್ಥಿ ಹಾಕಿದ್ದಾರೆ. ನನ್ನ ಸಹೋದರ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ನನ್ನನ್ನು ಬರುವಂತೆ ಕೇಳಿದರು. ಅದಕ್ಕೆ ನಾನು ಒಪ್ಪಲಿಲ್ಲ. ಪಕ್ಷ ಕಟ್ಟುವುದು ಬೇಡ. ಬಿಜೆಪಿಯಲ್ಲಿಯೇ ಇರೋಣ ಎಂದು ಹೇಳಿದ್ದೆ. ನಾನು, ನನ್ನ ಹಿರಿಯ ಸಹೋದರ ಕರುಣಾಕರ ರೆಡ್ಡಿ, ಶ್ರೀರಾಮುಲು ಸೇರಿದಂತೆ ಎಲ್ಲರೂ ತಮ್ಮನಿಗೆ ತಿಳಿ ಹೇಳಿದೆವು. ಆದರೆ, ನಮ್ಮ ಮಾತು ಕೇಳಲಿಲ್ಲ. ನಾನು ಪಕ್ಷಕ್ಕೆ ಹೋಗಲಿಲ್ಲ ಎಂಬ ಕಾರಣಕ್ಕಾಗಿ ನನ್ನ ವಿರುದ್ಧ ತನ್ನ ಪತ್ನಿಯನ್ನು ಸ್ಪರ್ಧೆಗೆ ಇಳಿಸಿದ್ದಾನೆ. ಹಾಗಂತ ನಾನು ವಿಚಲಿತನಾಗಿಲ್ಲ. ಬಳ್ಳಾರಿ ಜನರ ಪರವಾಗಿ ಈವರೆಗೆ ಕೆಲಸ ಮಾಡಿದ್ದೇನೆ. ಹೀಗಾಗಿ ನಾನು ಗೆದ್ದೇ ಗೆಲ್ಲುವೆ’ ಎಂದು ವ್ಯಕ್ತಪಡಿಸಿದರು.

ನನ್ನ ಸಹೋದರ ಜನಾರ್ದನ ರೆಡ್ಡಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ನನಗೆ ಯಾವುದೇ ರೀತಿಯ ನೋವಿಲ್ಲ. ಒಂದು ವೇಳೆ ಇದ್ದರೂ ಜನರ ಸೇವೆಯಲ್ಲಿ ಎಲ್ಲ ನೋವನ್ನು ಮರೆಯುತ್ತೇನೆ. ನಾನು ಯಾವುದೇ ಕಾರಣಕ್ಕೂ ಚುನಾವಣೆಯಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ. ನೂರಕ್ಕೆ ನೂರರಷ್ಟುನಾನು ಸ್ಪರ್ಧೆ ಮಾಡುವುದು ಖಚಿತ. ಬಳ್ಳಾರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ನಾನು ಅಡ್ಜಸ್ಟ್‌ಮೆಂಟ್‌ ರಾಜಕಾರಣಿ ಅಲ್ಲ, ಅದು ನನ್ನ ಜಾಯಮಾನದಲ್ಲಿಯೇ ಇಲ್ಲ’ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com