ಚುನಾವಣೆಯಲ್ಲಿ ಹಿಂದುತ್ವ ಮಾತ್ರ ನಮ್ಮ ಅಸ್ತ್ರವಲ್ಲ; ಆಯಾ ಸಂದರ್ಭಕ್ಕೆ ತಕ್ಕಂತೆ 'ಬ್ರಹ್ಮಾಸ್ತ್ರ' ಪ್ರಯೋಗ: ಬಿ.ವೈ ವಿಜಯೇಂದ್ರ

ಚುನಾವಣೆಯಲ್ಲಿ ಗೆಲ್ಲಲು ಎಲ್ಲ ಅಸ್ತ್ರಗಳು ಬಳಕೆಯಾಗುತ್ತವೆ. ಅದರಲ್ಲಿ ಬ್ರಹ್ಮಾಸ್ತ್ರವು ಸೇರಿದ್ದು, ಯಾವ ಭಾಗಕ್ಕೆ ಯಾವ ಅಸ್ತ್ರ‌ ಬಳಸಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬಿ.ವೈ ವಿಜಯೇಂದ್ರ
ಬಿ.ವೈ ವಿಜಯೇಂದ್ರ

ಬೆಂಗಳೂರು: ಚುನಾವಣೆಯಲ್ಲಿ ಗೆಲ್ಲಲು ಎಲ್ಲ ಅಸ್ತ್ರಗಳು ಬಳಕೆಯಾಗುತ್ತವೆ. ಅದರಲ್ಲಿ ಬ್ರಹ್ಮಾಸ್ತ್ರವು ಸೇರಿದ್ದು, ಯಾವ ಭಾಗಕ್ಕೆ ಯಾವ ಅಸ್ತ್ರ‌ ಬಳಸಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮೋರ್ಚಾಗಳ ಸಮಾವೇಶದ ರಾಜ್ಯ ಸಂಚಾಲಕ ಬಿ.ವೈ.ವಿಜಯೇಂದ್ರ ಹೇಳಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು ಮೋರ್ಚಾಗಳ ಸಮಾವೇಶದ ಮೂಲಕ ಸ್ಪಷ್ಟ ಸಂದೇಶ ಕಳುಹಿಸಲಿದ್ದು, ಅದು ಹಿಂದುತ್ವ ಅಥವಾ ಅಭಿವೃದ್ಧಿ ಮುಂದಿನ ಚುನಾವಣಾ ಅಜೆಂಡಾ ಆಗಿರಲಿದೆಯೆ ? ಎನ್ನುವುದನ್ನು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದು, ಯಾವ ಭಾಗಕ್ಕೆ ಏನು ಬೇಕೋ ಆ ಅಸ್ತ್ರ‌ಬಳಸಲಿದ್ದಾರೆ ಎಂದರು.

ಹಿಂದುತ್ವ ಕಾರ್ಯಸೂಚಿ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಚುನಾವಣೆಯಲ್ಲಿ ಆಯಾ ಸಂದರ್ಭಕ್ಕೆ ತಕ್ಕಂತೆ ಅಸ್ತ್ರಗಳನ್ನು ಪ್ರಯೋಗಿಸಬೇಕಾಗುತ್ತದೆ. ಅಭಿವೃದ್ಧಿಯೇ ನಮ್ಮ ಮುಖ್ಯ ಕಾರ್ಯಸೂಚಿ. ಆದರೆ, ಬತ್ತಳಿಕೆಯಲ್ಲಿ ಹಿಂದುತ್ವವೂ ಸೇರಿ ಸಾಕಷ್ಟು ಅಸ್ತ್ರಗಳೂ ಇವೆ’ ಎಂದರು.

ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ನಡೆಸುವ ಜವಾಬ್ದಾರಿ ನೀಡಲಾಗಿದೆ. ಈ ಮೂಲಕ ರಾಜ್ಯ ಮತ್ತು ಕೇಂದ್ರದ ಯೋಜನೆಗಳ ಮಾಹಿತಿಯನ್ನು ಮನೆ ಮನೆಗೆ ಮತ್ತು ಮನ ಮನಕ್ಕೆ ತಲುಪಿಸಲಾಗುವುದು. 224 ವಿಧಾನಸಭಾ ಕ್ಷೇತ್ರಗಳಿಗೆ ತಲುಪುವ ಗುರಿ ಹಾಕಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿಜಯೇಂದ್ರ ಹೇಳಿದರು.

ಇದರ ಅಂಗವಾಗಿ ಇದೇ 20 ರಂದು ಮಂಡ್ಯದಲ್ಲಿ ಯುವ‌ ಮೋರ್ಚಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕೆಆರ್ ಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷವು ಇತಿಹಾಸ ಸೃಷ್ಟಿಸಿದ್ದು, 140-150 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಈಗ ಹಳೇ ಮೈಸೂರಿನತ್ತ ಗಮನ ಹರಿಸುತ್ತಿದೆ ಎಂದು ಅವರು ಹೇಳಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಕಣ್ಣೀರಿನ ವಿದಾಯವನ್ನು ಲಾಭ ಮಾಡಿಕೊಳ್ಳಲು ವಿರೋಧ ಪಕ್ಷಗಳು ಪ್ರಯತ್ನಿಸಿ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸಬಹುದು, ಆದರೆ ಸರಿಯಾದ ಸಮಯದಲ್ಲಿ ಯಡಿಯೂರಪ್ಪ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು. ಸಚಿವ ಆರ್.ಅಶೋಕ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ವಜಾಗೊಳಿಸಿರುವಂತಹ ಸಮಸ್ಯೆಗಳನ್ನು ನಾಯಕರು ಪರಿಹರಿಸಲಿದ್ದಾರೆ ಎಂದು ಅವರು ಹೇಳಿದರು.

ಪಕ್ಷದ ಅಧಿಕೃತ ಫೋನ್ ಸಂಖ್ಯೆಗೆ ಮಿಸ್ಡ್ ಕಾಲ್‌ಗಳ ಮೂಲಕ 50 ಲಕ್ಷ ಸದಸ್ಯರನ್ನು ನೋಂದಾಯಿಸಲು ಪಕ್ಷವು ಯೋಜಿಸಿದೆ, ಜೊತೆಗೆ 2 ಕೋಟಿ ಮತದಾರರನ್ನು ತಲುಪುತ್ತದೆ. ಕರ್ನಾಟಕ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಭೂಪೇಂದರ್ ಯಾದವ್, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಸೇರಿದಂತೆ ಕೇಂದ್ರ ನಾಯಕರು ರಾಜ್ಯಾದ್ಯಂತ ಸಮಾವೇಶಕ್ಕೆ ಬರಲಿದ್ದಾರೆ. ಪಕ್ಷವು ಯುವ ಮೋರ್ಚಾ, ಎಸ್‌ಸಿ ಮೋರ್ಚಾ, ಎಸ್‌ಟಿ ಮೋರ್ಚಾ, ಒಬಿಸಿ ಮೋರ್ಚಾ, ಮಹಿಳಾ ಮೋರ್ಚಾ, ರೈತ ಮೋರ್ಚಾ ಮತ್ತು ಅಲ್ಪಸಂಖ್ಯಾತ ಮೋರ್ಚಾವನ್ನು ಸಕ್ರಿಯಗೊಳಿಸುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com