ಕಾಂಗ್ರೆಸ್ ಸೋಲಿಸಬೇಕು ಎನ್ನುವ ಅರ್ಥದಲ್ಲಷ್ಟೇ ನಾನು ಆ ಮಾತು ಆಡಿದ್ದೇನೆ. ಸಿದ್ದರಾಮಯ್ಯಗೆ ನೋವಾಗಿದ್ದರೆ ವಿಷಾದಿಸುತ್ತೇನೆ: ಡಾ ಅಶ್ವಥ್ ನಾರಾಯಣ

ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಆಡಿರುವ ಮಾತು ಈಗ ಆಡಳಿತ ಮತ್ತು ವಿಪಕ್ಷ ನಾಯಕರ ಮಧ್ಯೆ ವಾಗ್ದಾಳಿಗೆ ಕಾರಣವಾಗಿದೆ.
ಡಾ ಸಿ ಎನ್ ಅಶ್ವಥ್ ನಾರಾಯಣ
ಡಾ ಸಿ ಎನ್ ಅಶ್ವಥ್ ನಾರಾಯಣ
Updated on

ಬೆಂಗಳೂರು: ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಆಡಿರುವ ಮಾತು ಈಗ ಆಡಳಿತ ಮತ್ತು ವಿಪಕ್ಷ ನಾಯಕರ ಮಧ್ಯೆ ವಾಗ್ದಾಳಿಗೆ ಕಾರಣವಾಗಿದೆ.

ಡಾ ಅಶ್ವಥ್ ನಾರಾಯಣ ಹೇಳಿದ್ದೇನು?: ಮಂಡ್ಯದಲ್ಲಿ ನಿನ್ನೆ ಬಿಜೆಪಿ ಪ್ರಚಾರ ಸಭೆಯಲ್ಲಿ ಡಾ ಅಶ್ವಥ್ ನಾರಾಯಣ ಮಾತನಾಡುತ್ತಾ ಆವೇಶಭರಿತರಾದರು. ಹಿಂದಿನಿಂದಲೂ ಟಿಪ್ಪು ಸುಲ್ತಾನ್-ವಾರ ಸಾವರ್ಕರ್ ವಿಚಾರದಲ್ಲಿ ಮಾತಿನಲ್ಲಿ ಬಡಿದಾಡುವ, ಚುನಾವಣೆಯ ಅಸ್ತ್ರವಾಗಿ ತೆಗೆದುಕೊಂಡಿರುವ ರಾಜಕೀಯ ಪಕ್ಷಗಳು ಈ ಬಾರಿಯೂ ಅದನ್ನೇ ಪ್ರಸ್ತಾಪಿಸುತ್ತಿದೆ. 

ನಿಮಗೆ ಟಿಪ್ಪು ಬೇಕಾ, ವೀರ ಸಾವರ್ಕರ್ ಬೇಕಾ ಹೇಳಿ, ಟಿಪ್ಪು ವಿಚಾರದಲ್ಲಿ ಸಿದ್ದರಾಮಯ್ಯನವರು ಮಾಡಿದ ರಾಜಕೀಯ ನಿಮಗೆಲ್ಲಾ ಗೊತ್ತಿದೆ, ಹಿಂದೂ ವಿರೋಧಿ ಟಿಪ್ಪುವನ್ನು ಎಲ್ಲಿಗೆ ಕಳುಹಿಸಬೇಕು ಹೇಳಿ, ಟಿಪ್ಪುವನ್ನು ಉರಿಗೌಡ ಮತ್ತು ದೊಡ್ಡ ನಂಜೇಗೌಡ ಏನು ಮಾಡಿದರು ಎಂದು ಪ್ರಶ್ನೆ ಮಾಡಿದರು. ಆಗ ನೆರೆದಿದ್ದ ಜನ ಹೊಡೆದು ಹಾಕಿದರು ಎಂದು ಉತ್ತರಿಸಿದರು. 

ಸಭಿಕರ ಮಾತು ಅಶ್ವಥ್ ನಾರಾಯಣ ಅವರನ್ನು ಹುರಿದುಂಬಿಸಿತು. ಆವೇಶಭರಿತರಾಗಿ ಮಾತನಾಡುತ್ತಾ ಟಿಪ್ಪುವನ್ನು ಹೊಡೆದು ಹಾಕಿದ ರೀತಿಯಲ್ಲಿ ಇವರನ್ನೂ ಹೊಡೆದು ಹಾಕಬೇಕಲ್ಲವೇ, ಸಿದ್ದರಾಮಯ್ಯನವರನ್ನೂ ಹೊಡೆದು ಹಾಕಿ ಎಂದು ಬಿಟ್ಟರು. ನೆರೆದಿದ್ದವರು ಚಪ್ಪಾಳೆ, ಶಿಳ್ಳೆ ಹೊಡೆದರು.

ಈ ಹೇಳಿಕೆ ಹೊರಬಂದಿದ್ದೇ ತಡ ಸಿದ್ದರಾಮಯ್ಯನವರು ಆಕ್ರೋಶಭರಿತರಾದರು, ಹೊಡೆದು ಹಾಕಿ ಎಂದರೆ ನನ್ನನ್ನು ಸಾಯಿಸಿ ಎಂದು ನೀವು ಜನತೆಗೆ ಪ್ರಚೋದನೆ ಕೊಟ್ಟಂತಲ್ಲವೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಖಾರವಾಗಿ ಪ್ರಶ್ನಿಸಿದರು. ಅಶ್ವಥ್ ನಾರಾಯಣ ಆಡಿದ ಮಾತುಗಳು ವಿವಾದ ಹುಟ್ಟಿಸಿದವು.

ಇದಕ್ಕೆ ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಸಚಿವ ಡಾ ಅಶ್ವಥ್ ನಾರಾಯಣ, ಟಿಪ್ಪು ಸುಲ್ತಾನ್ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹೋಲಿಸಿ ಆಡಿರುವ ಮಾತುಗಳು ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ, ರಾಜಕೀಯ ಭಾಷಣ ಮಾಡುವಾಗ ಬಂದು ಹೋದ ಮಾತುಗಳಷ್ಟೆ, ಅವರಲ್ಲಿ ನನಗೆ ವೈಯಕ್ತಿಕ ದ್ವೇಷವಿಲ್ಲ, ಅವರನ್ನು ಕೊಂದುಹಾಕಿ ಎಂಬರ್ಥದಲ್ಲಿ ನಾನು ಆಡಿದ ಮಾತುಗಳಲ್ಲ ಎಂದು ಸ್ಪಷ್ಟನೆ ನೀಡಿ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. 

ಅಲ್ಲದೆ ಸಿದ್ದರಾಮಯ್ಯನವರಿಗೆ ನನ್ನ ಮಾತುಗಳಿಂದ ನೋವಾಗಿದ್ದರೆ ವೈಯಕ್ತಿಕವಾದಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಪ್ರಧಾನಿಯವರನ್ನು ನರ ಹಂತಕ ಎನ್ನುವುದು, ಮುಖ್ಯಮಂತ್ರಿ ಅವರಿಗೆ ಮನೆ ಹಾಳಾಗ ಎನ್ನುವುದು ಸಿದ್ದರಾಮಯ್ಯ ಅವರ ಸಂಸ್ಕೃತಿ ಆಗಿರಬಹುದು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಬೇಕು ಎನ್ನುವ ಅರ್ಥದಲ್ಲಷ್ಟೇ ನಾನು ಆ ಮಾತು ಆಡಿದ್ದೇನೆ. ಅದರಿಂದ ಅವರಿಗೆ ನೋವುಂಟಾಗಿದ್ದಾರೆ ವಿಷಾದಿಸುತ್ತೇನೆ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದ್ದಾರೆ. 

‘ಸಾಂದರ್ಭಿಕವಾಗಿ ಆಡು ಭಾಷೆಯಲ್ಲಿ ಸೋಲಿಸಿ ಎಂಬ ಅರ್ಥದಲ್ಲಿ ಹೇಳಿರುವ ಮಾತನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು ಮಾತನಾಡುತ್ತಿರುವ ಸಿದ್ದರಾಮಯ್ಯ ಅವರ ಭಾಷಾ ಪ್ರಾವೀಣ್ಯತೆ, ಅವರು ಬಳಸುವ ಗ್ರಾಮೀಣ ಪದಗಳು ಏನೆಂಬುದನ್ನು ರಾಜ್ಯದ ಜನತೆಯೇ ನೋಡಿದೆ. ಅಷ್ಟಕ್ಕೂ, ಟಿಪ್ಪುವಿನಲ್ಲಿರುವ ಕಟುಕತನದ ಮನಸ್ಥಿತಿ ನಮ್ಮ ಮಂಡ್ಯದ ಜನತೆಗೆ ಇಲ್ಲ’ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com