ಟಿಪ್ಪು ಸುಲ್ತಾನ್ ರೀತಿ ನನ್ನನ್ನು ಮುಗಿಸಿ ಅಂದರೆ ಇದರರ್ಥ ಏನು, ಜನರಿಗೆ ಪ್ರಚೋದನೆ ನೀಡಿದಂತೆ ಅಲ್ಲವೇ: ಸಿದ್ದರಾಮಯ್ಯ
ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಹೇಳಿಕೆಗೆ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
‘ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕೋಣ’ ಎಂದರೆ ಆ ಮಾತಿನ ಅರ್ಥವೇನು ಹೇಳಿ, ಸಿದ್ದರಾಮಯ್ಯನನ್ನು ಕೊಂದುಬಿಡಿ ಎಂದು ಸಾರ್ವಜನಿಕರಿಗೆ ಪ್ರಚೋದನೆ ನೀಡಿದಂತಲ್ಲವೇ, ಹೊಡಿ ಬಡಿ ಎಂಬುದು ಬಿಜೆಪಿಯವರ ಸಂಸ್ಕೃತಿ. ಸಿದ್ದರಾಮಯ್ಯರನ್ನು ಮುಗಿಸಿ ಅಂದರೇ ಏನು ಅರ್ಥ ಇದು. ಟಿಪ್ಪು ಸುಲ್ತಾನ್ ರೀತಿ ನನ್ನನ್ನು ಮುಗಿಸಿ ಅಂದರೆ ಇದರರ್ಥ ಏನು ಎಂದು ಇಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡುವಾಗ ಸಿದ್ದರಾಮಯ್ಯ ಕೇಳಿದ್ದಾರೆ.
ಪ್ರಧಾನಮಂತ್ರಿ ಮೋದಿ, ಅಮಿತ್ ಶಾ ಈ ಬಗ್ಗೆ ಪ್ರತಿಕ್ರಿಯೆ ನೀಡಲಿ. ಇದು ಸರೀನಾ, ತಪ್ಪು ಅಂತಾ ಪ್ರಧಾನಿ ಮೋದಿ, ಅಮಿತ್ ಶಾ ಹೇಳಲಿ. ಕೂಡಲೇ ಸಚಿವ ಡಾ.ಅಶ್ವತ್ಥ್ ನಾರಾಯಣ ವಜಾಗೊಳಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಆತ ಮನುಷ್ಯನೋ ರಾಕ್ಷಸನೋ ನೀವೇ ತಿಳಿದುಕೊಳ್ಳಿ. ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದವರನ್ನು ಬೆಂಬಲಿಸುವ ಪಕ್ಷದ ಅಶ್ವತ್ಥ್ ನಾರಾಯಣ ಅವರಿಂದ ಇಂಥ ಹೇಳಿಕೆ ಮೂಡಿಬಂದಿರುವುದರಿಂದ ಅಚ್ಚರಿಯಿಲ್ಲ. ಬಹಿರಂಗವಾಗಿ ಹತ್ಯೆಗೆ ಕರೆ ನೀಡಿದ ಸಚಿವರ ವಿರುದ್ಧ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮೂಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಅವರ ಸರ್ಕಾರ ನಿದ್ದೆ ಮಾಡುತ್ತಿದೆ. ಅಶ್ವತ್ಥ್ ನಾರಾಯಣ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಏಕವಚನದಲ್ಲಿ ನಿನ್ನೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ