ಸಿದ್ದರಾಮಯ್ಯ ವಿರುದ್ಧ ಪ್ರಚೋದನಾಕಾರಿ ಹೇಳಿಕೆ: ಸಚಿವ ಸ್ಥಾನದಿಂದ ಅಶ್ವತ್ಥನಾರಾಯಣ ವಜಾಕ್ಕೆ ಕಾಂಗ್ರೆಸ್ ಒತ್ತಾಯ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನೂ ಹೊಡೆದು ಹಾಕಿ ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಕಾಂಗ್ರೆಸ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದೆ.
ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ
ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನೂ ಹೊಡೆದು ಹಾಕಿ ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಕಾಂಗ್ರೆಸ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಅಶ್ವತ್ಥ ನಾರಾಯಣ ಅವರ ಹೇಳಿಕೆ ಬಿಜೆಪಿಯ ಕೊಲೆಗಡುಕ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ಬಹುಶ: ರಾಜ್ಯ ಬಿಜೆಪಿ ಹೇಳುತ್ತಿದ್ದ ಯುಪಿ ಮಾಡೆಲ್ ಇದೇ ಇರಬಹುದು. ಬಸವರಾಜ ಬೊಮ್ಮಾಯಿ ಅವರಿಗೆ ಕನಿಷ್ಠ ನೈತಿಕತೆ ಇದ್ದರೆ ಅಶ್ವತ್ಥ ನಾರಾಯಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.

ಇಷ್ಟು ದಿನ ವಿಪಕ್ಷಗಳ ನಾಯಕರಿಗೆ ಐಟಿ, ಇಡಿಗಳ ಮೂಲಕ ಮಣಿಸಲು ಯತ್ನಿಸುತಿತ್ತು. ಈಗ ಸೋಲಿನ ಹತಾಶೆಯಲ್ಲಿ ಕೊಲೆ ಮಾಡುವ ಹಂತಕ್ಕೆ ಇಳಿದಿದೆ. ನಿಜಕ್ಕೂ ಕಾನೂನು ಪಾಲನೆಯಾಗುತ್ತಿದ್ದರೆ ಡಾ.ಸಿಎನ್ ಅಶ್ವತ್ಥ ನಾರಾಯಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದೆ.

ಕೊಲೆ ಮಾಡುವುದು ಬಿಜೆಪಿಗೆ ಆರ್ ಎಸ್ ಎಸ್ ನಿಂದ ಬಂದಿರುವ ಗುಣ. ಅಂದು ಮಹಾತ್ಮ ಗಾಂಧಿಯನ್ನು ಕೊಂದ ಸಿದ್ದಾಂತದವರೇ ಇಂದು ಸಿದ್ದರಾಮಯ್ಯರನ್ನೂ ಕೊಲ್ಲಲು ಕರೆ ಕೊಟ್ಟಿದ್ದಾರೆ. ಈ ಕೊಲೆ ಮಾಡುವ ಯೋಜನೆ, ಯೋಜನೆ ಬಂದಿರುವುದು ಕೇಶವ ಕೃಪದಿಂದಲೋ, ನಾಗಪುರದಿಂದಲೋ ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿರುವ ಕಾಂಗ್ರೆಸ್, ಇಲ್ಲಿನ ಬಿಜೆಪಿಗರಿಗೂ ತಾಲಿಬಾನಿನ ಉಗ್ರರಿಗೂ ವ್ಯತ್ಯಾಸವಿಲ್ಲ ಎಂದಿದೆ.

ಮತ್ತೊಂದೆಡೆ ಡಾ. ಅಶ್ವತ್ಥ ನಾರಾಯಣ ಕೂಡಲೇ ತಮ್ಮ ಹೇಳಿಕೆ ಹಿಂಪಡೆದು, ಸಿದ್ದರಾಮಯ್ಯ ಅವರಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾದೀತು ಎಂದು ಶಾಸಕ ಜಮೀರ್ ಅಹಮದ್ ಖಾನ್ ಟ್ವೀಟ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com