ಹಾರೋಹಳ್ಳಿ ತಾಲೂಕ್ ಕಚೇರಿ ಲೋಕಾರ್ಪಣೆ: ಡಾ.ಸಿ ಎನ್ ಅಶ್ವತ್ಥ ನಾರಾಯಣ, ಅನಿತಾ ಕುಮಾರಸ್ವಾಮಿ ಟ್ವೀಟ್ ವಾರ್

ರಾಮನಗರ ಜಿಲ್ಲೆ ಹಾರೋಹಳ್ಳಿ ತಾಲೂಕ್ ಕಚೇರಿ ಲೋಕಾರ್ಪಣೆ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ನಡುವೆ ವೇದಿಕೆಯಲ್ಲಿ ವಾಗ್ವಾದ ಬಳಿಕ ಟ್ವೀಟರ್ ನಲ್ಲಿಯೂ ವಾರ್ ಜೋರಾಗಿಯೇ ನಡೆದಿದೆ.
ಅನಿತಾ ಕುಮಾರಸ್ವಾಮಿ, ಅಶ್ವತ್ಥ ನಾರಾಯಣ
ಅನಿತಾ ಕುಮಾರಸ್ವಾಮಿ, ಅಶ್ವತ್ಥ ನಾರಾಯಣ

ಬೆಂಗಳೂರು: ರಾಮನಗರ ಜಿಲ್ಲೆ ಹಾರೋಹಳ್ಳಿ ತಾಲೂಕ್ ಕಚೇರಿ ಲೋಕಾರ್ಪಣೆ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ನಡುವೆ ವೇದಿಕೆಯಲ್ಲಿ ವಾಗ್ವಾದ ಬಳಿಕ ಟ್ವೀಟರ್ ನಲ್ಲಿಯೂ ವಾರ್ ಜೋರಾಗಿಯೇ ನಡೆದಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅನಿತಾ ಕುಮಾರಸ್ವಾಮಿ, ತಾಲೂಕ್ ಕಚೇರಿ ಉದ್ಘಾಟನೆ ವಿಚಾರದಲ್ಲಿ ಅಶ್ವತ್ಥ ನಾರಾಯಣ ತೋರಿದ ಆತುರ ಅತೀವ ಅಚ್ಚರಿಯನ್ನುಂಟು ಮಾಡಿದೆ. ಕ್ಷುಲ್ಲಕ ರಾಜಕೀಯಕ್ಕಾಗಿ ಶಿಷ್ಟಾಚಾರ ಹತ್ತಿಕ್ಕಿ, ಓರ್ವ ಶಾಸಕಿಯನ್ನು ಅಪಮಾನಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. 

ಜನರ ಸಂಕಷ್ಟಗಳ ಪರಿಹಾರ, ಅಭಿವೃದ್ಧಿ ವಿಷಯದಲ್ಲಿ ನಾನಾಗಲಿ, ಕುಮಾರಸ್ವಾಮಿ ಅವರಾಗಲಿ ಕ್ಷುಲ್ಲಕ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ. ಅಂತಹ ರಾಜಕೀಯದಲ್ಲಿ ನಿಪುಣರಾಗಿರುವ ಬಿಜೆಪಿಗರಿಗೆ ಶಿಷ್ಟಾಚಾರ ಎನ್ನುವುದು ಗೊತ್ತಿರಲು ಹೇಗೆ ಸಾಧ್ಯ? ಉನ್ನತ ಶಿಕ್ಷಣ ಸಚಿವರ ಉನ್ನತ ಮೌಲ್ಯ ಎಂದರೆ, ಮಹಿಳಾ ಶಾಸಕರನ್ನು ಅಪಮಾನಿಸುವುದಾ? ಎಂದು ಕೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದಕ್ಕೆ ಉತ್ತರ ನೀಡಬೇಕು  ಶಾಸಕಿಗೆ ಅಪಮಾನಿಸಿದ ಸಚಿವರ ನಡೆಯನ್ನು ಖಂಡಿಸಬೇಕು ಎಂದಿರುವ ಅವರು, ಈ ಬಗ್ಗೆ ಬಹಳ ನೋವಾಗಿದ್ದು, ಸಭಾಧ್ಯಕ್ಷರು ಹಾಗೂ ಹಕ್ಕು ಭಾದ್ಯತಾ ಸಮಿತಿಯ ಅಧ್ಯಕ್ಷರಿಗೆ ದೂರು ಸಲ್ಲಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಅಶ್ವತ್ಥ ನಾರಾಯಣ, ಅನಿತಾ ಕುಮಾರಸ್ವಾಮಿ ಅವರಿಗೆ ಅಪಮಾನಿಸಲಾಗಿದೆ ಎಂಬರ್ಥದ ಮಾತು ಕೇಳಿ ಆಶ್ಚರ್ಯವಾಯಿತು! ಕಾರ್ಯಕ್ರಮ ಶಿಷ್ಟಾಚಾರದ ಪ್ರಕಾರವೇ ಜರುಗಿದರೂ ನಿಗದಿತ ಸಮಯಕ್ಕೆ ಹಾಜರಾಗದೇ, ಈ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. 

ರಾಮನಗರ ಜಿಲ್ಲೆಯ ಜನತೆಯ ಶ್ರೇಯವೇ ನನ್ನ ಆದ್ಯತೆ. ಕ್ಷುಲ್ಲಕ ರಾಜಕಾರಣ, ಕುಟುಂಬ ರಾಜಕಾರಣದ ಬಗ್ಗೆ ನನಗೆ ಆಸಕ್ತಿಯಿಲ್ಲ. ಬಿಜೆಪಿ ಸರ್ಕಾರ ಬರುವ ಮೊದಲು ಅಭಿವೃದ್ಧಿ ಹೇಗೆ ಕುಂಠಿತವಾಗಿತ್ತು,  ಬಿಜೆಪಿ ಸರ್ಕಾರ ಬಂದಮೇಲೆ ಏನೆಲ್ಲಾ ಅಭಿವೃದ್ಧಿ ಕೆಲಸಗಳು ಆಗಿವೆ ಎನ್ನುವುದು ಜನರಿಗೂ ಗೊತ್ತಿದೆ, ದಾಖಲೆಗಳೂ ಹೇಳುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.

 ಹಾರೋಹಳ್ಳಿ ಪ್ರತ್ಯೇಕ ತಾಲೂಕು ರಚನೆಯಲ್ಲಿ ಕುಮಾರಸ್ವಾಮಿ ಅವರ ಕೊಡುಗೆಯ ಬಗ್ಗೆ ವೇದಿಕೆಯಲ್ಲಿ ಹೇಳಿದ್ದೇನೆ. ಇನ್ನೊಬ್ಬರ ಕೆಲಸಕ್ಕೆ ಕ್ರೆಡಿಟ್‌ ತೆಗೆದುಕೊಳ್ಳುವ ದುರ್ಬುದ್ಧಿಯಾಗಲಿ, ಕೆಲಸವನ್ನೇ ಮಾಡದೇ ನಾನೇ ಮಾಡಿದ್ದು ಎನ್ನುವ ಕುಬುದ್ಧಿಯಾಗಲಿ ನನ್ನಲ್ಲಿಲ್ಲ. ನೇರ ನುಡಿ, ಅಭಿವೃದ್ಧಿಪರ ರಾಜಕಾರಣ ನನ್ನದು ಎಂದು ಸಮರ್ಥಿಸಿಕೊಂಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com