ಹಾಸನ ಜೆಡಿಎಸ್ ಟಿಕೆಟ್‌ಗಾಗಿ ಜಿದ್ಧಾಜಿದ್ದಿ; ಇಂದು ಸಹ ಘೋಷಣೆಯಾಗದ ಅಭ್ಯರ್ಥಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಹಾಸನ ಕ್ಷೇತ್ರಕ್ಕೆ ಸದ್ಯಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಭವಾನಿ, ಕುಮಾರಸ್ವಾಮಿ ಮತ್ತು ಸ್ವರೂಪ್
ಭವಾನಿ, ಕುಮಾರಸ್ವಾಮಿ ಮತ್ತು ಸ್ವರೂಪ್

ಹಾಸನ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಹಾಸನ ಕ್ಷೇತ್ರಕ್ಕೆ ಸದ್ಯಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಮಾಜಿ ಸಚಿವ ಎಚ್‌ಡಿ ರೇವಣ್ಣ ಅಥವಾ ಅವರ ಪತ್ನಿ ಮಾಜಿ ಜಿಪಂ ಸದಸ್ಯೆ ಭವಾನಿ ಅವರನ್ನು ಹಾಲಿ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಅವರ ವಿರುದ್ಧ ಕಣಕ್ಕಿಳಿಸುವ ಸಾಧ್ಯತೆ ಇದೆ. ಆದರೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಜೆಡಿಎಸ್ ಅಭ್ಯರ್ಥಿ ವಿಚಾರದಲ್ಲಿ ಗೌಪ್ಯತೆಯನ್ನು ಕಾಯ್ದುಕೊಂಡಿದ್ದಾರೆ. 

ಎಚ್‌ಡಿ ರೇವಣ್ಣ ಅವರು ಇಂದು ಸಹ ಮೌನವಹಿಸುವ ಮೂಲಕ ಹಾಸನ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡುತ್ತಾರೆ ಎಂದು ಎಂಪಿ ಕ್ವಾಟರ್ಸ್‌ ಎದುರು ಜಮಾಯಿಸಿದ್ದ ನೂರಾರು ಕಾರ್ಯಕರ್ತರಿಗೆ ನಿರಾಸೆ ಉಂಟು ಮಾಡಿದರು.

ಗುರುವಾರ ಎಚ್.ಡಿ.ರೇವಣ್ಣ ಅವರು ಅಧಿಕೃತವಾಗಿ ಹಾಸನ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತಾರೆ ಎಂದು ಮಾಧ್ಯಮದವರೂ ನಿರೀಕ್ಷಿಸಿದ್ದರು. ಆದರೆ ಪತ್ರಿಕಾಗೋಷ್ಠಿಯಲ್ಲಿ ಹಾಸನ ಅಭ್ಯರ್ಥಿ ಬಗ್ಗೆ ಮಾತನಾಡಲು ರೇವಣ್ಣ ನಿರಾಕರಿಸಿದರು. ಕೊನೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿಯನ್ನು ಘೋಷಿಸಲಿದ್ದಾರೆ ಎಂದು ಹೇಳಿದರು.

ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಮತ್ತು ಪುತ್ರ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಟೆಂಪಲ್ ರನ್ ಮೂಲಕ ಪ್ರಚಾರದ ಭರಾಟೆ ಆರಂಭಿಸಿದ್ದು, ಹೊಳೆನರಸೀಪುರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಹರದನಹಳ್ಳಿಯ ದೇವೇಶ್ವರ ದೇವಸ್ಥಾನ ಮತ್ತು ಅದೇ ತಾಲ್ಲೂಕಿನ ಹಳೇಕೋಟೆ ಸಮೀಪದ ಮಾವಿನಕೆರೆ ಬೆಟ್ಟದ ರಂಗನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಭವಾನಿ ರೇವಣ್ಣ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. 

ಎಚ್.ಡಿ.ರೇವಣ್ಣ ಅಥವಾ ಭವಾನಿ ರೇವಣ್ಣ ಅವರು ಅಧಿಕೃತ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸದಿದ್ದರೂ ಹಾಸನ ಕ್ಷೇತ್ರ ಗೌಡರ ಕುಟುಂಬಕ್ಕೆ ಮಾತ್ರ ಮೀಸಲಾಗಿದೆ ಎಂದು ದಂಪತಿಗಳು ನಡೆಸುತ್ತಿರುವ ಟೆಂಪಲ್ ರನ್ ಸ್ಪಷ್ಟವಾಗಿ ಸೂಚಿಸಿದೆ. ಸೂಕ್ತ ಸಮಯದಲ್ಲಿ ಪಕ್ಷವು ಅಭ್ಯರ್ಥಿಯ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಎಚ್.ಡಿ.ರೇವಣ್ಣ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com