ಬೆಳಗಾವಿ ಶಿವಾಜಿ ​​ಪ್ರತಿಮೆ ಉದ್ಘಾಟನೆ: ರಮೇಶ್​ ಜಾರಕಿಹೊಳಿ-ಹೆಬ್ಬಾಳ್ಕರ್​ ನಡುವೆ ಶುರುವಾಯ್ತು ಹಗ್ಗಜಗ್ಗಾಟ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಐತಿಹಾಸಿಕ ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ವಿಚಾರವಾಗಿ ಗೋಕಾಕ್ ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ ಮತ್ತು ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಹಗ್ಗಜಗ್ಗಾಟ ಆರಂಭವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಐತಿಹಾಸಿಕ ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ವಿಚಾರವಾಗಿ ಗೋಕಾಕ್ ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ ಮತ್ತು ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಹಗ್ಗಜಗ್ಗಾಟ ಆರಂಭವಾಗಿದೆ.

ಮಾರ್ಚ್​​ 5ರಂದೇ ಶಿವಾಜಿ ಮೂರ್ತಿ ಲೋಕಾರ್ಪಣೆ ಮಾಡುತ್ತೇವೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಆಹ್ವಾನ ನೀಡಿದ್ದೇವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರೆ, ಅತ್ತ ಶಾಸಕ ರಮೇಶ್​ ಜಾರಕಿಹೊಳಿ ಮಾರ್ಚ್ 2ರಂದು ಸರಳವಾಗಿ ಕಾರ್ಯಕ್ರಮ ಮಾಡಿ ಶಿವಾಜಿ ಮೂರ್ತಿ ಉದ್ಘಾಟನೆ ಮಾಡುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಆಗಮಿಸುತ್ತಾರೆಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಗ್ಯುದ್ಧ ಶುರುವಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​,  ಶಿಷ್ಟಾಚಾರದ ಪ್ರಕಾರ ಉದ್ಘಾಟನೆಗೆ ಎಲ್ಲರನ್ನೂ ಆಹ್ವಾನಿಸುತ್ತೇವೆ. ಯಾರು ಯಾರು ಬರುತ್ತಾರೆ ಎಲ್ಲರಿಗೂ ಸ್ವಾಗತ ಕೋರುತ್ತೇವೆ. ಸಿಎಂ ಬೊಮ್ಮಾಯಿ ಅವರಿಗೆ ಟೈಮ್ ಕೊಟ್ಟಿದ್ದು ನನಗೆ ಗೊತ್ತಿಲ್ಲ. ಏನೇ ಆದರೂ ಮಾರ್ಚ್​​ 5ರಂದೇ ಶಿವಾಜಿ ಮೂರ್ತಿ ಉದ್ಘಾಟನೆ ಮಾಡುತ್ತೇವೆ ಎಂದು ಹೇಳಿದರು.

ಹೇಳಿಕೆ ಬೆನ್ನಲ್ಲೇ ಬೆಳಗಾವಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಾರಕಿಹೊಳಿ ಅವರು, ಸರ್ಕಾರದ ಶಿಷ್ಟಾಚಾರದಂತೆ ಅನಾವರಣ ಮಾಡಬೇಕು ಮತ್ತು ಪ್ರತಿಮೆ ಅನಾವರಣಕ್ಕೆ ಕಾಂಗ್ರೆಸ್ ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸರಿಯಲ್ಲ. ಹೆಬ್ಬಾಳ್ಕರ್ ನೇತೃತ್ವದ ಕಾಂಗ್ರೆಸ್ ನಾಯಕರು ಇದನ್ನು ಕಾಂಗ್ರೆಸ್ ಕಾರ್ಯಕ್ರಮವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಾಜಹಂಸಗಡ ಕೋಟೆಯಲ್ಲಿ ಅಭಿವೃದ್ಧಿಗೆ ಸರ್ಕಾರ ಕ್ರಮಗಳನ್ನು ಕೈಗೊಂಡಾಗ, ಸರ್ಕಾರದ ನಿಯಮಗಳಂತೆಯೇ ಕಾರ್ಯಕ್ರಮವನ್ನು ನಡೆಸಬೇಕು ಎಂದು ನಾನು ಭಾವಿಸಿದ್ದೆ. ಆದರೆ, ಕಾಂಗ್ರೆಸ್ ನಾಯಕರು ತಮ್ಮ ಕಾರ್ಯಕ್ರಮವೆಂದು ಬಿಂಬಿಸಲು ಸಿದ್ಧತೆ ನಡೆಸುತ್ತಿರುವ ವಿಚಾರ ನನ್ನ ಕಿವಿಗೆ ಬಿದ್ದ ಬಳಿಕವೇ ನಾನೂ ಕೂಡ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು ಹಾಗೂ ಮುಖ್ಯಮಂತ್ರಿಗಳನ್ನು ಭಾಗಿಯಾಗುವಂತೆ ಮಾಡಲು ನಿರ್ಧರಿಸಿದೆ ಎಂದು ಹೇಳಿದರು.

ಮಾಜಿ ಶಾಸಕ ಸಂಜಯ್ ಪಾಟೀಲ್ ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದಾಗ ಕೋಟೆ ಪ್ರದೇಶದಲ್ಲಿ ರಸ್ತೆ ನಿರ್ಮಾಣ, ನೀರು ಪೂರೈಕೆ, ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿತ್ತು. ಆನಂದ್ ಸಿಂಗ್ (ಬಿಜೆಪಿ) ಅವರು ಸಚಿವರಾಗಿದ್ದಾಗ ಇದರ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದರು ಮತ್ತು ನಂತರ ಸಚಿವ ಸುನೀಲ್ ಕುಮಾರ್ ಅವರು ಇತ್ತೀಚಿನ ದಿನಗಳಲ್ಲಿ ಅದರ ಅಭಿವೃದ್ಧಿಗೆ ಅನುದಾನ ನೀಡಿದರು ಎಂದು ತಿಳಿಸಿದರು.

ಈ ಹೇಳಿಕೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಎಂಎಲ್'ಸಿ ಚೆನ್ನರಾಜ್ ಹಟ್ಟಿಹೊಳಿ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜಹಂಸಗಡ ಕೋಟೆ ಅಭಿವೃದ್ಧಿಗೆ ನನ್ನ ಸ್ವಂತ ಹಣ ರೂ.1 ಕೋಟಿ ಖರ್ಜು ಮಾಡಿದ್ದೇನೆ. ಕೋಟೆಯಲ್ಲಿ ಪ್ರತಿಮೆ ಸ್ಥಾಪನೆ ಸೇರಿದಂತೆ ಸಂಪೂರ್ಣ ಅಭಿವೃದ್ಧಿ ಕಾಮಗಾರಿಗಳಿಗೆ 8 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದರೂ, ಅಲ್ಲಿ ನಡೆದಿರುವ ಕಾಮಗಾರಿಗಳನ್ನು ನೋಡಿದಾಗ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಿಲ್ಲ ಎಂದು ತೋರುತ್ತದೆ ಎಂದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠ ಮತಗಳು ಹೆಚ್ಚಾಗಿದ್ದು, ಈ ಮತಗಳನ್ನು ಸೆಳೆಯಲು ಎರಡು ರಾಷ್ಟ್ರೀಯ ಪಕ್ಷಗಳು ಸೆಣಸಾಡುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com