ನಮ್ಮಪ್ಪನ ಜೀವ ಈ ಮಣ್ಣಿಗೆ ಹೋಗೋದರೊಳಗೆ...? ದೇವೇಗೌಡರ ಕೊನೆ ಆಸೆ ಬಿಚ್ಚಿಟ್ಟು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕಣ್ಣೀರು!
ಮುಂಬರುವ ವಿಧಾನಸಭಾ ಚುನಾವಣೆ ಕೊನೆಯ ಚುನಾವಣೆ ಎಂಬ ಹೇಳಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ ಭಾವುಕರಾದರು.
Published: 28th February 2023 12:34 PM | Last Updated: 28th February 2023 03:02 PM | A+A A-

ಎಚ್.ಡಿ ಕುಮಾರಸ್ವಾಮಿ
ರಾಮನಗರ: ಮುಂಬರುವ ವಿಧಾನಸಭಾ ಚುನಾವಣೆ ಕೊನೆಯ ಚುನಾವಣೆ ಎಂಬ ಹೇಳಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ ಭಾವುಕರಾದರು.
ಚನ್ನಪಟ್ಟಣದಲ್ಲಿ ಮಾತಾಡಿದ ಹೆಚ್.ಡಿ. ಕುಮಾರಸ್ವಾಮಿ.. ನಾನು ರಾಜಕೀಯ ವಿದಾಯ ಹೇಳ್ತಿಲ್ಲ. 2028ರ ವಿಧಾನಸಭೆಗೆ ಚನ್ನಪಟ್ಟಣದಿಂದ ಕಾರ್ಯಕರ್ತರನ್ನು ನಿಲ್ಲಿಸ್ತೀನಿ. ಆಗ ಬೇರೆ ಕ್ಷೇತ್ರದಲ್ಲಿ ನಿಲ್ಲಬೇಕಾಗಬಹುದು. ನಾನು ಯಾವುದೇ ಕಾರಣಕ್ಕೂ ರಾಜಕೀಯ ಬಿಡಲ್ಲ. 2028ಕ್ಕೆ ಚನ್ನಪಟ್ಟಣದಿಂದ ಕಾರ್ಯಕರ್ತರನ್ನ ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದರು.
ನಾನು ನಮ್ಮ ಕುಟುಂಬ ಜನರನ್ನೇ ನಂಬಿ ಬಂದಿದ್ದೇವೆ. ನಮ್ಮ ತಂದೆ ಕಾಲದಿಂದಲೂ ಅಷ್ಟೇ. ದೇವೇಗೌಡರನ್ನು ಇಲ್ಲಿಗೆ ಕರೆಸಿ ಸನ್ಮಾನ ಮಾಡಬೇಕು ಅನ್ನೋ ಆಸೆ ನಿಮ್ಮದು. ಆದರೆ ಇಂದು ಅವರು ಇಲ್ಲಿಗೆ ಬರುವ ಪರಿಸ್ಥಿತಿಯಲ್ಲಿ ಇಲ್ಲ. ಅವರು ಮಣ್ಣಿಗೆ ಹೋಗೋದರೊಳಗೆ ಜೆಡಿಎಸ್ ಪಕ್ಷವನ್ನು ಸ್ವತಂತ್ರ್ಯವಾಗಿ ಅಧಿಕಾರಕ್ಕೆ ತರಬೇಕು ಎಂಬ ಆಸೆ ದೇವೇಗೌಡರಿಗಿದೆ ಎಂದು ಹೇಳುತ್ತಾ ಕುಮಾರಸ್ವಾಮಿ ಭಾವುಕರಾದರು.
ಇದನ್ನೂ ಓದಿ: 2028ಕ್ಕೆ ಚನ್ನಪಟ್ಟಣದಿಂದ ಸ್ಪರ್ಧಿಸುವುದಿಲ್ಲ; ಹಾಸನದ ಗೊಂದಲಕ್ಕೆ ಸದ್ಯದಲ್ಲೇ ತೆರೆ: ಎಚ್.ಡಿ ಕುಮಾರಸ್ವಾಮಿ
ನಮ್ಮ ಪಂಚರತ್ನ ಯಾತ್ರೆ ಬಗ್ಗೆ, ಅಲ್ಲಿ ಸೇರುವ ಜನರ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿಲ್ಲ, ಬದಲಾಗಿ ದಿನದಲ್ಲಿ ಸುಮಾರು 1ಗಂಟೆಗೂ ಮೇಲೆ ಹಾಸನ ಟಿಕೆಟ್ ಸುದ್ಧಿಯ ಬಗ್ಗೆ ಪ್ರಸಾರ ಮಾಡುತ್ತಾರೆ, ಟಿವಿಯಲ್ಲಿ ಜ್ಯೋತಿಷ್ಯ ಕಾರ್ಯಕ್ರಮವನ್ನು ನಿಲ್ಲಿಸಿ ಅದರ ಬದಲಿಗೆ, ಹಾಸನ, ಭವಾನಿ ರೇವಣ್ಣ, ಕುಮಾರಸ್ವಾಮಿ ಮತ್ತು ಎಚ್.ಡಿ ದೇವೇಗೌಡರ ವಿಷಯದ ಬಗ್ಗೆ ಸುದ್ದಿ ಹಾಕುತ್ತಿದ್ದಾರೆ. ನಮ್ಮ ಪಂಚರತ್ನ ಕಾರ್ಯಕ್ರಮದ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.