ಶಿಸ್ತು ಸಮಿತಿಯಿಂದ ಯಾವ ನೋಟಿಸ್ ಬಂದಿಲ್ಲ, ಷಡ್ಯಂತ್ರಗಳಿಗೆ ಅಂಜುವ ಮಗ ನಾನಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು
ನನಗೆ ಬಿಜೆಪಿ ಹೈಕಮಾಂಡ್‌ನಿಂದ ಅಥವಾ ಪಕ್ಷದ ಶಿಸ್ತು ಸಮಿತಿಯಿಂದ ಇದುವರೆಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
Published: 17th January 2023 08:39 AM | Last Updated: 17th January 2023 04:59 PM | A+A A-

ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ: ನನಗೆ ಬಿಜೆಪಿ ಹೈಕಮಾಂಡ್‌ನಿಂದ ಅಥವಾ ಪಕ್ಷದ ಶಿಸ್ತು ಸಮಿತಿಯಿಂದ ಇದುವರೆಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ನಾಯಕರ ವಿರುದ್ಧ ಮಾತನಾಡಿದ ಕಾರಣಕ್ಕೆ ನೋಟಿಸ್ ನೀಡಲಾಗಿದೆ ಎಂಬ ಸುದ್ದಿ ಹರಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನನಗೆ ಪಕ್ಷದ ಶಿಸ್ತು ಸಮಿತಿ ನೋಟಿಸ್ ನೀಡಿದೆ ಎಂಬುದು ಕೇವಲ ವಿರೋಧಿಗಳ ಭಯ ಹುಟ್ಟಿಸುವ ತಂತ್ರ ಅಷ್ಟೇ, ನನಗೆ ನೋಟಿಸ್ ಬಂದಿಲ್ಲ, ಬರುವುದಿಲ್ಲ, ಉತ್ತರ ಕೊಡುವ ಅವಶ್ಯಕತೆಯೂ ಬರುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ಈವರೆಗೆ ಯಾವುದೇ ನೋಟಿಸ್ ಬಂದಿಲ್ಲ, ಸುಮ್ಮನೇ ಊಹಾಪೂಹ ಹರಡಿಸುತ್ತಿದ್ದಾರೆ. ನಾನು ನೋಟಿಸ್ ಕೊಡುವಂತಹ ಯಾವುದೇ ಪಕ್ಷ ವಿರೋಧಿ ಹೇಳಿಕೆ ಅಥವಾ ಚಟುವಟಿಕೆ ನಡೆಸಿಲ್ಲ ಎಂದು ತಿಳಿಸಿದ್ದಾರೆ. ನಾನು ಭ್ರಷ್ಟಾಚಾರ ನಡೆಸುತ್ತಿರುವವರ ವಿರುದ್ಧ ಹಾಗೂ ವಂಶ ಪಾರಂಪರೆ ರಾಜಕೀಯ ಮುಂದುವರೆಸುವವರ ಬಗ್ಗೆ ಮಾತನಾಡಿದ್ದೇನೆ ಅಷ್ಟೆ. ನನಗೆ ನೋಟಿಸ್ ನೀಡಿದ್ದರೆ ಇಷ್ಟೊತ್ತಿಗೆ ಬಂದಿರುತ್ತಿತ್ತು. ಯತ್ನಾಳ್ ಇಷ್ಟೆಲ್ಲಾ ಮಾತನಾಡಿದ್ದಾನೆ ನೋಟಿಸ್ ಯಾಕೆ ನೀಡಿಲ್ಲ ಎಂದು ಕೆಲವರಿಗೆ ಕಾಡುತ್ತಿದೆ. ಅದಕ್ಕೆ ಇಂತಹ ಊಹಾಪೂಹ ಹರಡಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ಕೊನೆಗೂ ಶಾಸಕ ಯತ್ನಾಳ್‌ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ನೋಟಿಸ್
ನೋಟಿಸ್ ವಿಚಾರ ನನಗೆ ಹೊಸದೇನಲ್ಲ. ಹಿಂದೆ ವಾಜಪೇಯಿ ಇದ್ದಾಗಲೂ ನನಗೆ ನೋಟಿಸ್ ನೀಡಿದ್ದರು. ನೋಟಿಸ್ ನೀಡಿದ ಮೂರು ತಿಂಗಳಿಗೆ ಕೇಂದ್ರ ಮಂತ್ರಿಯಾಗಿದ್ದೆ. ಇದೆಲ್ಲಾ ರಾಜಕೀಯ ವಿರೋಧಿಗಳ ಷಡ್ಯಂತ್ರ. ಹೈಕಮಾಂಡ್ನಲ್ಲಿ ನನಗೆ ನೋಟಿಸ್ ಕೊಡುವ ಯಾವುದೇ ವಾತಾವರಣ ಇಲ್ಲ. ಕೆಲವು ಜನ ಆ ರೀತಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಭಯಪಡುವಂತದ್ದು, ಅಂಜುವಂತದ್ದು ಏನಿಲ್ಲ ಎಂದು ಹೇಳಿದ್ದಾರೆ.