ನನ್ನ ಉಲ್ಲೇಖವನ್ನು ತಪ್ಪಾಗಿ ಅರ್ಥೈಸಿ ಬಿಜೆಪಿ ಅನಗತ್ಯ ವಿವಾದ ಮಾಡುತ್ತಿದೆ- ಬಿ ಕೆ ಹರಿಪ್ರಸಾದ್; ಕೀಳು ಮಾತುಗಳಿಗೆ ಪ್ರತಿಕ್ರಿಯಿಸುವುದಿಲ್ಲ- ಸಿಎಂ ಬೊಮ್ಮಾಯಿ

ಬಿಜೆಪಿ ನಾಯಕರು ನನ್ನ ಹೇಳಿಕೆಯನ್ನು ತಿರುಚಿ ಹೇಳುತ್ತಿದ್ದಾರೆ. ಈ ಮೂಲಕ ಅನಗತ್ಯ ವಿವಾದ ಸೃಷ್ಟಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ-ಬಿ ಕೆ ಹರಿಪ್ರಸಾದ್(ಸಂಗ್ರಹ ಚಿತ್ರ)
ಸಿಎಂ ಬೊಮ್ಮಾಯಿ-ಬಿ ಕೆ ಹರಿಪ್ರಸಾದ್(ಸಂಗ್ರಹ ಚಿತ್ರ)

ಬೆಂಗಳೂರು: ಬಿಜೆಪಿ ನಾಯಕರು ನನ್ನ ಹೇಳಿಕೆಯನ್ನು ತಿರುಚಿ ಹೇಳುತ್ತಿದ್ದಾರೆ. ಈ ಮೂಲಕ ಅನಗತ್ಯ ವಿವಾದ ಸೃಷ್ಟಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.

ನಿನ್ನೆ ಹೊಸಪೇಟೆಯಲ್ಲಿ ಕಾಂಗ್ರೆಸ್ ಪ್ರತಿಧ್ವನಿ ಸಮಾವೇಶದಲ್ಲಿ ಮಾತನಾಡುವ ವೇಳೆ ಬಿಜೆಪಿಯನ್ನು ಟೀಕಿಸುವ ವೇಳೆ ಬಿ ಕೆ ಹರಿಪ್ರಸಾದ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. 2018ರಲ್ಲಿ ರಾಜ್ಯದ ಜನತೆ ಸ್ಪಷ್ಟ ಬಹುಮತ ನೀಡದಿದ್ದಾಗ ಜೆಡಿಎಸ್ ಜೊತೆ ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿದೆವು. ತನ್ನ ಜೀವನೋಪಾಯಕ್ಕಾಗಿ ಮೈ ಮಾರುವ ಮಹಿಳೆಯನ್ನು ನಾವು ಬೇರೆ ಹೆಸರಿನಿಂದ ಕೆರೆಯುತ್ತೇವೆ. ಆಕೆಯನ್ನು ವೇಶ್ಯೆ ಎನ್ನುತ್ತೇವೆ. 2019ರಲ್ಲಿ ತಮ್ಮನ್ನು ಮಾರಿಕೊಂಡ ಶಾಸಕರನ್ನು ಏನು ಕರೆಯುತ್ತೀರಿ ಎಂದು ನಿಮಗೆ ಬಿಟ್ಟುಬಿಡುತ್ತೇನೆ, ಈ ಬಾರಿಯ ಚುನಾವಣೆಯಲ್ಲಿ ಇಂತಹ ಶಾಸಕರಿಗೆ ನೀವು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದರು.

ಈ ಮಾತು ತೀವ್ರ ವಿವಾದ ಪಡೆದಿತ್ತು. ಬಿಜೆಪಿ ನಾಯಕರು ಹರಿಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡರು. ಲೈಂಗಿಕ ಕಾರ್ಯಕರ್ತರು, ವೇಶ್ಯೆಯರಿಗೆ ಅವರು ಅವಮಾನ ಮಾಡಿದ್ದಾರೆ ಎಂದು ಟೀಕಿಸಿದ್ದರು. 

ಅದಕ್ಕೆ ಇಂದು ಪ್ರತಿಕ್ರಿಯಿಸಿರುವ ಹರಿಪ್ರಸಾದ್, ನನಗೆ ವೇಶ್ಯೆಯರು, ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಅಪಾರ ಗೌರವವಾಗಿದೆ, ನನ್ನ ಮಾತುಗಳಿಂದ ಅವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಲ್ಲಿ ಪ್ರತಿಕ್ರಿಯೆ ಕೇಳಿದಾಗ, ಅಂತಹ ಕೀಳುಮಟ್ಟದ ಹೇಳಿಕೆ ನೀಡುವವರಿಗೆ ನಾನು ಪ್ರತಿಕ್ರಿಯೆ ಕೊಡಲು ಸಾಧ್ಯವಿಲ್ಲ, ಇದು ನನ್ನ ಪ್ರತಿಕ್ರಿಯೆ ಎಂದಷ್ಟೇ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com