ವೇಶ್ಯೆಯರ ರೀತಿ ಶಾಸಕ ಸ್ಥಾನ ಮಾರಿಕೊಂಡು 17 ಮಂದಿ ಬಿಜೆಪಿಗೆ ಹೋದರು: ಹಾಗಾದರೇ ಹರಿಪ್ರಸಾದ್ ರನ್ನ ಪಿಂಪ್ ಎನ್ನಬಹುದೇ?
ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಕೆಲ ಶಾಸಕರು ವೇಶ್ಯೆಯರ ರೀತಿ ತಮ್ಮ ಶಾಸಕ ಸ್ಥಾನವನ್ನ ಮಾರಿಕೊಂಡಿದ್ದಾರೆ ಎಂದು ಹೇಳಿಕೆಯನ್ನ ನೀಡಿದ್ದಾರೆ.
Published: 18th January 2023 09:21 AM | Last Updated: 18th January 2023 04:51 PM | A+A A-

ಬಿ.ಕೆ ಹರಿಪ್ರಸಾದ್ ಮತ್ತು ಬಿ ಸಿ ಪಾಟೀಲ್
ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವಹೇಳನಕಾರಿ ಮಾತನ್ನ ಆಡಿ ಯಡವಟ್ಟು ಮಾಡ್ಕೊಂಡಿದ್ದಾರೆ. ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಕೆಲ ಶಾಸಕರು ವೇಶ್ಯೆಯರ ರೀತಿ ತಮ್ಮ ಶಾಸಕ ಸ್ಥಾನವನ್ನ ಮಾರಿಕೊಂಡಿದ್ದಾರೆ ಎಂದು ಹೇಳಿಕೆಯನ್ನ ನೀಡಿದ್ದಾರೆ.
ನಾವೆಲ್ಲರೂ ಸಮ್ಮಿಶ್ರ ಸರ್ಕಾರವನ್ನು ಮಾಡಿರೋದನ್ನು ನೋಡಿದ್ವಿ. ಆದರೆ ಕೆಲವು ಶಾಸಕರು ತಮ್ಮನ್ನು ಮಾರಾಟ. ತಮ್ಮ ಹೊಟ್ಟೆ ಪಾಡಿಗಾಗಿ ಮಹಿಳೆ ತನ್ನನ್ನು ಮಾರಿಕೊಂಡಾಗ ಅವಳಿಗೆ ಯಾವುದೆಲ್ಲ ಹೆಸರಲ್ಲಿ ಕರೆಯುತ್ತೀವಿ.. ವೇಶ್ಯೆ ಅಂತಾ ಹೇಳ್ತೀವಿ. ಆದರೆ ತಮ್ಮನೆಲ್ಲಾ ಮಾರಾಟ ಮಾಡಿರುವಂತಹ ಈ ಶಾಸಕರಿಗೆ ನೀವು ಏನ್ ಕರೀತಿರಾ ಎಂದು ನಾನು ನಿಮಗೆ ಬಿಟ್ಟಿರ್ತೀನಿ ಎಂದು ಹೇಳಿದ್ದಾರೆ.
ವೇಶ್ಯೆಯರ ರೀತಿ ಶಾಸಕ ಸ್ಥಾನ ಮಾರಿಕೊಂಡು 17 ಮಂದಿ ಬಿಜೆಪಿಗೆ ಹೋದರು ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ. ಹರಿಪ್ರಸಾದ್ ಯಾವ ಚುನಾವಣೆ ಗೆದ್ದು ಬಂದಿದ್ದಾರೆ? ಹಿಂಬಾಗಿಲಿನಿಂದ ಬಂದು ಎಂ.ಎಲ್.ಸಿ ಆಗಿದ್ದಾರೆ. ಹಾಗಾದರೆ, ಹಿಂಬಾಗಿಲಿನಿಂದ ಬಂದ ಇವರನ್ನು ‘ಪಿಂಪ್’ ಎಂದು ಕರೆಯಬಹುದಾ’ ಎಂದು ಪ್ರಶ್ನಿಸಿದ್ದಾರೆ.
‘ಆದರೆ ನಾವು ಹಾಗೆ ಕರೆಯಲು ಆಗಲ್ಲ. ಇದು ಅವರ ಸಂಸ್ಕೃತಿ ತೋರಿಸುತ್ತದೆ. ಹಾಗೆ ಮಾತನಾಡಿದರೆ ಜನ ಬೆನ್ನತ್ತಿ ಹೊಡೆಯುತ್ತಾರೆ. ಕಾಂಗ್ರೆಸ್‌ನವರು ಮಾಡಿದ ದ್ರೋಹದಿಂದ ನಾವು ರಾಜೀನಾಮೆ ಕೊಟ್ಟು ಬಂದೆವು. ಮತ್ತೆ ಜನಾದೇಶ ಪಡೆದೇ ಶಾಸಕರಾಗಿದ್ದೇವೆ. ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ‘ ಎಂದು ಅವರು ಸಮರ್ಥಿಸಿಕೊಂಡರು.
ಹರಿಪ್ರಸಾದ ಯಾವ ಚುನಾವಣೆಯಲ್ಲಿ ಗೆದ್ದಿದ್ದಾನೆ? ನಾನು ಜನರಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದೇನೆ. ಹರಿಪ್ರಸಾದ ಎಲ್ಲಿ ಆಯ್ಕೆಯಾಗಿದ್ದಾರೆ ಎಂದು ಬಿ.ಸಿ.ಪಾಟೀಲ್ ಪ್ರಶ್ನಿಸಿದರು. ಬಿ.ಕೆ.ಹರಿಪ್ರಸಾದ ಜನರಿಂದ ನೇರವಾಗಿ ಆಯ್ಕೆಯಾದವರಲ್ಲ. ಅವರು ಹಿಂದಿನ ಬಾಗಿಲಿನಿಂದ ಬಂದು ಶಾಸಕರಾಗಿದ್ದಾರೆ. ಈ ರೀತಿ ಹಿಂಬಾಗಿಲಿನಿಂದ ಬರುವವರಿಗೆ ಏನಂತ ಕರೆಯಬೇಕು? ನಾನು ಆ ರೀತಿ ಪದಪ್ರಯೋಗ ಮಾಡುವುದಿಲ್ಲ ಎಂದು ಬಿ.ಸಿ.ಪಾಟೀಲ್ ತಿರುಗೇಟು ನೀಡಿದರು.