'ಹಿಂದುತ್ವ'ದಿಂದ ನಿರೀಕ್ಷಿತ ಫಲಿತಾಂಶ ಬಾರದು: ಕಟೀಲ್, ಬೊಮ್ಮಾಯಿಯಿಂದ ಪವಾಡ ನಡೆಯದು; ವಿಧಾನಸಭೆ ಚುನಾವಣೆಗೆ ಬಿಎಸ್ ವೈ ಸಾರಥ್ಯ ಅನಿವಾರ್ಯ!

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು, ಬಿಎಸ್‌ವೈ ರಾಷ್ಟ್ರ ರಾಜಧಾನಿ ನವದೆಹಲಿಗೆ ತೆರಳಿದ್ದಾರೆ. ಈ ವೇಳೆ ಮಾಜಿ ಸಿಎಂ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಯಡಿಯೂರಪ್ಪ ಮತ್ತು ಪ್ರಧಾನಿ ಮೋದಿ(ಸಂಗ್ರಹ ಚಿತ್ರ)
ಯಡಿಯೂರಪ್ಪ ಮತ್ತು ಪ್ರಧಾನಿ ಮೋದಿ(ಸಂಗ್ರಹ ಚಿತ್ರ)

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು, ಬಿಎಸ್‌ವೈ ರಾಷ್ಟ್ರ ರಾಜಧಾನಿ ನವದೆಹಲಿಗೆ ತೆರಳಿದ್ದಾರೆ. ಈ ವೇಳೆ ಮಾಜಿ ಸಿಎಂ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಉಭಯ ನಾಯಕರ ನಡುವೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆದಿದೆ ಎಂದು ಮೂಲಗಳು ಖಚಿತಪಡಿಸಿವೆ. ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಜನಪ್ರಿಯತೆ ಪ್ರಮುಖ ಆಧಾರ ಎಂಬುದು ಬಿಜೆಪಿ ಹೈಕಮಾಂಡ್‌ಗೆ ಸ್ಪಷ್ಟವಾಗಿದೆ.

ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ, ಕರ್ನಾಟಕದ ಮಟ್ಟಿಗೆ ಬಿಎಸ್‌ವೈ ಅವರೇ ಬಿಜೆಪಿಯ ಪರಮೋಚ್ಛ ನಾಯಕ ಎಂಬುದು ಹಲವು ಬಾರಿ ಸಾಬೀತಾಗಿದೆ. ಇದೇ ಕಾರಣಕ್ಕೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ವೈ ಅವರ ಸುದೀರ್ಘ ರಾಜಕೀಯ ಅನುಭವದ ನೆರವು ಪಡೆಯಲು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಸೇರಿದಂತೆ ಕೆಲವು ಕಾರ್ಯಕ್ರಮಗಳಿಗೆ ಪಿಎಂ ಅವರನ್ನು ಆಹ್ವಾನಿಸಲು ತೆರಳಿದ್ದಾಗಿ ಯಡಿಯೂರಪ್ಪ ಹೇಳಿದ್ದಾರೆ

ಇತ್ತೀಚೆಗೆ ಕರ್ನಾಟಕಕ್ಕೆ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ ನಂತರ  ನೇಪಥ್ಯಕ್ಕೆ ಸರಿದಿರುವಯಡಿಯೂರಪ್ಪ  ಮತ್ತೆ ಸಕ್ರಿಯ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಹೇಳಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸಾಧ್ಯವಿಲ್ಲ ಎಂದು ಕೇಂದ್ರ ನಾಯಕತ್ವಕ್ಕೆ ಮನವರಿಕೆಯಾಗಿದೆ ಸದ್ಯ ಕರ್ನಾಟಕದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಪ್ರತಿಪಕ್ಷ ಕಾಂಗ್ರೆಸ್‌ ನಿರಂತರವಾಗಿ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸುತ್ತಿದೆ. ಪ್ರತಿಪಕ್ಷಗಳ ಈ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲು, ಬಿಜೆಪಿ ಹೈಕಮಾಂಡ್‌ ಬಿಎಸ್‌ವೈ ಅವರ ನೆರವು ಕೇಳಿದೆ ಎನ್ನಲಾಗಿದೆ.

ಯಡಿಯೂರಪ್ಪ ಅವರನ್ನು ಮತ್ತೆ ಸಕ್ರಿಯ ರಾಜಕಾರಣಕ್ಕೆ ಕರೆತಂದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಪರ ಸಕ್ರಿಯ ಪ್ರಚಾರದಲ್ಲಿ ತೊಡಗಿಸಬೇಕೆಂದು ಹಲವು ಶಾಸಕರು ಕೇಂದ್ರ ನಾಯಕರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ,  ಕಳೆದ ಕೆಲವು ದಶಕಗಳಲ್ಲಿ ಕರ್ನಾಟಕವು ಯಡಿಯೂರಪ್ಪ ಇಲ್ಲದೆ ಎಂದಿಗೂ ಅಧಿಕಾರಕ್ಕೆ ಬಂದಿಲ್ಲ. ಪಕ್ಷ ಮತ್ತು ಸರ್ಕಾರದೊಳಗೆ ಕಾರ್ಯತಂತ್ರದ ಬದಲಾವಣೆಗಳಿಲ್ಲದೆ, ಪವಾಡವನ್ನು ನಿರೀಕ್ಷಿಸುವುದು ಕಷ್ಟ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ವಿರುದ್ಧ ವಿರೋಧಿ ಗುಂಪೊಂದು ಹಿಡಿತ ಸಾದಿಸಿತ್ತು, ಹೀಗಾಗಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿತ್ತು, ಹಿಂದುತ್ವ ಕಾರ್ಡ್ ಪ್ರಯೋಗ ನಿರೀಕ್ಷಿತ ಫಲಿತಾಂಶ ದೊರಕದು ಎಂಬುದನ್ನು ಅರ್ಥಮಾಡಿಕೊಂಡಿರುವ ಬಿಜೆಪಿ ಹೈಕಮಾಂಡ್, ಸೂಕ್ತವಾಗಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸುತ್ತಿದೆ.  ಯಡಿಯೂರಪ್ಪ ಅವರ ಪುನಾರಾಗಮನ ಕಾಂಗ್ರೆಸ್ ಗೆ ಒಳ್ಳೆಯ ಸುದ್ದಿಯಾಗುವುದಿಲ್ಲ, ಏಕೆಂದರೆ ಯಡಿಯೂರಪ್ಪ ಅವರ ನಿರಾಶೆಯನ್ನು ಕಾಂಗ್ರೆಸ್ ಲಾಭ ಮಾಡಿಕೊಳ್ಳಲು ಮುಂದಾಗಿತ್ತು.

ಈ ಎಲ್ಲಾ ಕಾರಣಗಳಿಂದಾಗಿ ಪ್ರಧಾನಿ ಮೋದಿ ಮತ್ತು ಬಿಎಸ್ ಯಡಿಯೂರಪ್ಪ ಅವರ ನಡುವಿನ ಮಾತುಕತೆ ಇದೀಗ ಮಹತ್ವ ಪಡೆದುಕೊಂಡಿದ್ದು, ಬಿಎಸ್‌ವೈ ಇಲ್ಲದೇ ರಾಜ್ಯ ಬಿಜೆಪಿ ಇಲ್ಲ ಎಂಬ ಅವರ ಬೆಂಬಲಿಗರ ಅಭಿಪ್ರಾಯ ಮತ್ತಷ್ಟು ಗಟ್ಟಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com