ಶಾಸಕ ಹ್ಯಾರಿಸ್‌ ಪರವಾಗಿ ಕೆಎಎಸ್‌ ಅಧಿಕಾರಿಯಿಂದ ಬೆದರಿಕೆ ಕರೆ: ಎಎಪಿ ಮುಖಂಡ ಆರೋಪ

ಕೆಎಎಸ್‌ ಅಧಿಕಾರಿ ಎಲಿಶ ಆ್ಯಂಡ್ರಿವ್ಸ್‌ರವರು ಬೆದರಿಕೆ ಹಾಕಿದ್ದಾರೆಂದು ಆಮ್‌ ಆದ್ಮಿ ಪಾರ್ಟಿ ರಾಜ್ಯ ವಕ್ತಾರ ಕೆ.ಮಥಾಯಿ ಆರೋಪಿಸಿದ್ದು, ಈ ಬಗ್ಗೆ ಆಡಿಯೋ ಬಿಡುಗಡೆ ಮಾಡಿದ್ದಾರೆ.
ಕೆ. ಮಥಾಯಿ
ಕೆ. ಮಥಾಯಿ

ಬೆಂಗಳೂರು: ಕೆಎಎಸ್‌ ಅಧಿಕಾರಿ ನನಗೆ ಬೆದರಿಕೆ ಹಾಕಿದ್ದಾರೆಂದು ಆಮ್‌ ಆದ್ಮಿ ಪಾರ್ಟಿ ರಾಜ್ಯ ವಕ್ತಾರ ಕೆ.ಮಥಾಯಿ ಆರೋಪಿಸಿದ್ದು, ಈ ಬಗ್ಗೆ ಆಡಿಯೋ ಬಿಡುಗಡೆ ಮಾಡಿದ್ದಾರೆ.

ಶಾಸಕ ಎನ್‌.ಎ.ಹ್ಯಾರಿಸ್‌ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಕೆಎಎಸ್‌ ಅಧಿಕಾರಿ  ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸದಂತೆ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯ ವಕ್ತಾರ ಕೆ.ಮಥಾಯಿ ಆರೋಪಿಸಿದ್ದಾರೆ

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆ.ಮಥಾಯಿ ಅವರು ಕೆಎಎಸ್ ಅಧಿಕಾರಿ ಬೆದರಿಕೆ ಹಾಕಿರುವ ಆಡಿಯೋ ಬಿಡುಗಡೆ ಮಾಡಿದರು. ಜನವರಿ 13ರ ಬೆಳಗ್ಗೆ 9 ಗಂಟೆಗೆ ನನ್ನ ಮೊಬೈಲ್‌ ಕರೆ ಮಾಡಿದರು. ಸುಮಾರು 15 ನಿಮಿಷ ಮಾತನಾಡಿದ ಅವರು ಶಾಸಕ ಎನ್‌.ಎ.ಹ್ಯಾರಿಸ್‌ ಹೆಸರನ್ನು ಹಲವು ಬಾರಿ ಉಲ್ಲೇಖಿಸಿ, ಅವರ ಪರವಾಗಿ ಮಾತನಾಡಿದ್ದಾರೆ. ಶಾಂತಿನಗರ ಕ್ಷೇತ್ರದಿಂದ ನಾನು ಸ್ಪರ್ಧಿಸಬಾರದೆಂದು ಒತ್ತಡ ಹೇರಿದ್ದಲ್ಲದೇ, ಇದಕ್ಕೆ ಒಪ್ಪದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದಾರೆ. ಶಾಸಕರು ಚುನಾವಣಾ ಸೋಲಿನ ಭೀತಿಯಲ್ಲಿ ಈ ರೀತಿ ಅಧಿಕಾರಿಗಳಿಂದ ಕರೆ ಮಾಡಿಸುತ್ತಿರುವುದು ದುರಂತ ಎಂದರು.

ಶಾಸಕರಾಗಿನಿಂದಲೂ ಸರ್ ಸಿ.ವಿ.ರಾಮನ್‌ ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದ ಶಾಸಕ ಎಸ್.ರಘುರವರು ಈಗ ಸೋಲಿನ ಭೀತಿಯಲ್ಲಿ ಕುಕ್ಕರ್‌ ಮೊರೆ ಹೋಗಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ ಹೇಳಿದ್ದಾರೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್‌ ದಾಸರಿ, ಮತದಾರರಿಗೆ ಆಮಿಷವೊಡ್ಡಲು ಶಾಸಕ ಎಸ್.ರಘುರವರು ಹಲವು ಕಂಟೇನರ್ ವಾಹನಗಳಲ್ಲಿ ಕುಕ್ಕರ್‌ಗಳನ್ನು ತಂದು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ನಿಂಬಂಧನೆಗಳ ಪ್ರಕಾರ ಇದು ಅಪರಾಧವಾಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕುಣಿಗಲ್‌ನಲ್ಲಿ ಇಂತಹದ್ದೇ ಪ್ರಕರಣಕ್ಕೆ ಸಂಬಂಧಿಸಿ ದಾಳಿ ಮಾಡಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ಸರ್ ಸಿ.ವಿ.ರಾಮನ್‌ ಕ್ಷೇತ್ರದಲ್ಲೇಕೆ ಸುಮ್ಮನಿದ್ದಾರೆ? ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com