ಭ್ರಷ್ಟಾಚಾರದಲ್ಲಿ ಮುಳುಗೆದ್ದಿರುವ ಕಾಂಗ್ರೆಸ್'ಗೆ ಬಿಜೆಪಿ ವಿರುದ್ಧ ಆರೋಪ ಮಾಡುವ ನೈತಿಕ ಹಕ್ಕಿಲ್ಲ: ಸಚಿವ ಸುಧಾಕರ್

ಭ್ರಷ್ಟಾಚಾರದಲ್ಲಿ ಮುಳುಗೆದ್ದಿರುವ ಕಾಂಗ್ರೆಸ್'ಗೆ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಸೋಮವಾರ ಹೇಳಿದ್ದಾರೆ.
ಸಚಿವ ಸುಧಾಕರ್
ಸಚಿವ ಸುಧಾಕರ್

ಬೆಂಗಳೂರು: ಭ್ರಷ್ಟಾಚಾರದಲ್ಲಿ ಮುಳುಗೆದ್ದಿರುವ ಕಾಂಗ್ರೆಸ್'ಗೆ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಸೋಮವಾರ ಹೇಳಿದ್ದಾರೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಸುಳ್ಳು ಆರೋಪ ಹಾಗೂ ತಪ್ಪು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಫಲಿಸುವುದಿಲ್ಲ. ಒಂದು ನರೇಟಿವ್ ಸೆಟ್ ಮಾಡಿ ಉತ್ತಮ, ಜನಪರವಾಗಿ ಕೆಲಸ ಮಾಡುತ್ತಿರುವುದಕ್ಕೆ ಕಳಂಕ ಮೆತ್ತುವ ಕೀಳು ರಾಜಕೀಯವನ್ನು ಸರ್ಕಾರ ಹಾಗೂ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಆಡಳಿತಾವಧಿಯ ಭ್ರಷ್ಟಾಚಾರ, ಅವ್ಯವಹಾರಗಳ ಕುರಿತು ನಿರ್ದಿಷ್ಟ ದೂರೊಂದನ್ನು ಪಕ್ಷದ ವತಿಯಿಂದ ಲೋಕಾಯುಕ್ತ ಸಂಸ್ಥೆಯಲ್ಲಿ ಇಂದು ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಯಾವುದೇ ಒಂದು ಯೋಜನೆ ಮಾಡಿದರೂ ಅದರ ಹಿಂದೆ ಎಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಎಲ್ಲರಿಗೂ ಗೊತ್ತಿರುತ್ತದೆ. 2013 ರಿಂದ ಕಾಂಗ್ರೆಸ್ ಸರ್ಕಾರ ಇದ್ದಾಗ ಎಷ್ಟೆಲ್ಲ ಭ್ರಷ್ಟಾಚಾರ ನಡೆದಿದೆ. ಆದರೆ, ಇವರು ಇವಾಗ ನಮ್ಮ ಮೇಲೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. 2013ರಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ನಾವು ಹೇಳಿದ್ದೆವು, ಹಾಗೆ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಅವರು ಕೂಡ ಹೇಳಿದ್ದರು. ಅವರ ಸರ್ಕಾರ ಇದ್ದಾಗ ರಾತ್ರೋರಾತ್ರಿ ಲೋಕಾಯುಕ್ತ ಮುಚ್ಚಿ, ಎಸಿಬಿ ರಚನೆ ಮಾಡಿದರು. ಲೋಕಾಯುಕ್ತ ಸಂಸ್ಥೆಯನ್ನ ಮುಚ್ಚಿದಕ್ಕೆ ಹೈಕೋರ್ಟ್ ಛೀಮಾರಿ ಹಾಕಿತ್ತು. ಲೋಕಾಯುಕ್ತದಂತಹ ಸಂಸ್ಥೆಗಳು ರಾಜ್ಯದಲ್ಲಿ ಇರಬೇಕು ಎಂದು ತಿಳಿಸಿತ್ತು.

ನಾವು ಭ್ರಷ್ಟಾಚಾರ ಮಾಡಿರೋದೆ ಆಗಿದ್ದರೆ, ನಾವು ಲೋಕಾಯುಕ್ತ ಸಂಸ್ಥೆ ಪುನರ್ ಸ್ಥಾಪಿಸಲು ಸ್ಟೇ ತರುತ್ತಿದ್ದೆವು. ಆದರೆ, ನಾವು ಬಂದು ಲೋಕಯುಕ್ತವನ್ನು ಪುನರ್ ಸ್ಥಾಪನೆ ಮಾಡಿದ್ದೇವೆ. ಭ್ರಷ್ಟಾಚಾರ ಮಾಡುತ್ತಿದ್ದೇವೆ ಎಂಬುದು ನಿಜವಾಗಿದ್ದರೆ ಇವತ್ತು ನಾವು ಲೋಕಾಯುಕ್ತವನ್ನ ಪುನರ್ ಸ್ಥಾಪನೆ ಮಾಡುತ್ತಿರಲಿಲ್ಲ. ಆದರೆ ನಾವು ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು ಎಂದು ಪ್ರಧಾನಿಗಳು ಯಾವ ರೀತಿ ಹೇಳಿದ್ದರೋ, ಹಾಗೆಯೇ ನಾವು ಅದಕ್ಕೆ ಕಾಯಕಲ್ಪ ಕೊಟ್ಟಿದ್ದೇವೆ.

2018ರಲ್ಲಿ ಫೈನಾನ್ಸಿಯಲ್ ಅಡಿ ಸಿಎಜಿ ವರದಿ ಬಂದಿದೆ, ಇದನ್ನ ನಾನು ಅಥವಾ ಅಶ್ವಥ್ ನಾರಾಯಣ್ ಮಾಡುತ್ತಿರುವ  ಆರೋಪ ಅಲ್ಲ. 2013, 2018 ರಲ್ಲಿ 35 ಸಾವಿರ ಕೋಟಿ ಭ್ರಷ್ಟಾಚಾರವಿದೆ ಎಂದು ಹೇಳಿದೆ, ರೀಡೂ ಅಂತ ಅವರ ಅನುಕೂಲಕ್ಕೆ ಹೊಸ ಪದವನ್ನೇ ಸೃಷ್ಟಿ ಮಾಡಿದ್ದಾರೆ. 10 ಸಾವಿರ ಬೆಂಗಳೂರು ನಿವಾಸಿಗಳಿಗೆ ಅನ್ಯಾಯ ಮಾಡಿದ್ದಾರೆ. 900 ಎಕರೆಗೂ ಹೆಚ್ಚು ಜಾಗವನ್ನ ಡಿನೋಟಿಫಿಕೇಷನ್ ಮಾಡಿದ್ದಾರೆ. ಇದಕ್ಕಾಗಿ ಲೋಕಾಯುಕ್ತ ಮುಚ್ಚಿ, ಎಸಿಬಿ ತೆರೆದರು. ಇವರ ಬಲಗೈ ಬಂಟ ಕೆ.ಜೆ ಜಾರ್ಜ್‌ ನಗರಾಭಿವೃದ್ಧಿ ಸಚಿವರಾಗಿದ್ದರು. 292 ಕೋಟಿ ವೈಟ್ ಟಾಪಿಂಗ್ ಅಂದಾಜು ಇತ್ತು, ಅದನ್ನ 374 ಕೋಟಿಗೆ ಹೆಚ್ಚಿಸಿದರು. ಯಾಕೆ ಶೇ.23% ಹೆಚ್ಚಳವಾಗಿ ಕೊಟ್ಟರು ಹೇಳಿ? ಜಾರ್ಜ್ ಅವರೇ ಯಾಕೆ, ಯಾವ ಉದ್ದೇಶಕ್ಕೆ ಹೆಚ್ಚಿಗೆ ಕೊಟ್ಟಿರಿ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಮಧ್ಯೆ, ಇಂದಿರಾ ಕ್ಯಾಂಟೀನ್ ಆರಂಭಿಸಿ ಬಡವರಿಗೆ ಕೊಡುವ ಊಟದಲ್ಲೂ ಕಮೀಷನ್ ಹೊಡೆದರು. ಅಲ್ಪಸಂಖ್ಯಾತರಿಗೆ, ದಲಿತರಿಗೆ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಿಲ್ಲ. ಲ್ಯಾಪ್ ಟಾಪ್ ಕೊಟ್ಟರು, ಲ್ಯಾಪ್ ಟಾಪಲ್ಲಿ ಭ್ರಷ್ಟಾಚಾರ ಆಗಿಲ್ಲವೇ? ವಸ್ತು ನಿಷ್ಠವಾಗಿ ಕೆಲಸ ಮಾಡಬೇಕು, ಇವರು ಸತ್ಯ ಹರಿಶ್ಚಂದ್ರ ಅಂತ ಹೇಳುತ್ತಾರೆ. ಸಿದ್ದರಾಮಯ್ಯನವರ ಆಪ್ತನ ಮನೆ ಮೇಲೆ 2017ರಲ್ಲಿ ರೇಡ್ ಆದಾಗ ಡೈರಿ ಸಿಗುತ್ತೆ. 1000 ಕೋಟಿ ಹೈಕಮಾಂಡ್‌ಗೆ ಹೇಗೆ ಹೋಯಿತು. ಧರ್ಮದ ಹಣ ಹೋಯಿತೇ? ಬಜೆಟ್ ಮೂಲಕವೇ ಸ್ಪೆಷಲ್ ಅಲೋಯನ್ಸ್ ಅಂತ ಬಜೆಟ್ ಮೂಲಕವೇ ಹೋಯಿತೇ..? ನಿಮ್ಮ ಸಿಎಂ, ಸಚಿವರು, ಅಧಿಕಾರಿಗಳ ಮೇಲೆ ಬರೀ ದೂರು ದಾಖಲಾಗಿಲ್ಲ. ಪಿಎಸ್ಐ ಹಗರಣವಾಗಿದೆ ಎಂದು ಹೇಳುತ್ತೀರಿ. ಇದು ನಿಮ್ಮ ಕಾಲದಲ್ಲೇ ಆಗಿದ್ದು, ಕಸ ವಿಲೇವಾರಿ ಮಾಡೋದ್ರಲ್ಲೂ 1,066 ಕೋಟಿ ರೂ.  ಹಗರಣ ಮಾಡಿದ್ದಾರೆಂದು ಹೇಳಿದರು.

2015-16ರಲ್ಲಿ 385ಕೋಟಿ ಖರ್ಚಾಗಿದೆ‌. ಕೇವಲ ಒಂದೇ ವರ್ಷದಲ್ಲಿ 681ಕೋಟಿ ಹೆಚ್ಚಾಗಿದೆ. ಇದು ಯಾವ ಸ್ಕೀಮ್, ಎಷ್ಟು ಪರ್ಸೆಂಟ್ ಆಗಿದೆ ಹೇಳಿ? ಬೆಂಗಳೂರಿಗೆ ಹೊರ ಹೋಗುವ ಕಸ ಮಾಯ ಆಗಿ ಹೋಯ್ತಾ? ನಾನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷನಾಗಿದ್ದಾಗ ನೋಡಿದ್ದೇನೆ. ಆ ಪ್ರದೇಶದ ಜನ ರೋಗಗ್ರಸ್ತರಾಗಿದ್ದರು ಎಂದು ಟೀಕೆ ಮಾಡಿದ್ದಾರೆ.

ಕಾಂಗ್ರೆಸ್ ನಡೆಸಿರುವುದು ಪ್ರಜಾಧ್ವನಿಯಲ್ಲ, ಪ್ರಜಾದ್ರೋಹದ ಯಾತ್ರೆ. ಆಡಳಿತದ ಅವಧಿಯುದ್ದಕ್ಕೂ ಜನ ವಿರೋಧಿ ಕೆಲಸ ಮಾಡಿದ್ದರಿಂದಲೇ ಕಾಂಗ್ರೆಸ್ ಪಕ್ಷವು ಜನರಿಂದ ತಿರಸ್ಕೃತವಾಗಿದೆ. ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಹಗಲುಗನಸು ಕಾಣುತ್ತಿದ್ದು, ಏನೇ ತಿಪ್ಪರಲಾಗ ಹಾಕಿದರೂ 80 ರಿಂದ 90 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದರು.

ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿದ್ದು, 125 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಜೆಡಿಎಸ್ ಗೆ ಎಷ್ಟು ಸ್ಥಾನ ಬರುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com