ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಮಕ್ಕಳೂ ಬಿಜೆಪಿಗೆ ಬರ್ತಾರೆ: ನಳಿನ್ ಕುಮಾರ್ ಕಟೀಲ್ ಭವಿಷ್ಯ

ಮುಂದಿನ ದಿನಗಳಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮನೆಯ ಮಕ್ಕಳೂ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸೋಮವಾರ ಭವಿಷ್ಯ ನುಡಿದಿದ್ದಾರೆ.
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಮುಂದಿನ ದಿನಗಳಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮನೆಯ ಮಕ್ಕಳೂ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸೋಮವಾರ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಕಾಂಗ್ರೆಸ್ ಶಾಸಕರ ಮನೆಯಲ್ಲಿ ಒಬ್ಬ ಪುತ್ರ ಕವಿಶ್ ಗೌಡ ಬಿಜೆಪಿಗೆ ಬಂದಿದ್ದಾರೆ. ಇದೊಂದೇ ಅಲ್ಲ,‌ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ, ಡಿಕೆಶಿ, ಖರ್ಗೆಯವರ ಮನೆಯ ಮಕ್ಕಳೂ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆಂದು ಹೇಳಿದರು.

ಹಳೇ ಮೈಸೂರು ಭಾಗದ ಹತ್ತಾರು ಪ್ರಮುಖರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಬಿಜೆಪಿ ಸೇರುವ ಮುಖಾಂತರ ಪರಿವಾರವಾದ, ಕುಟುಂಬವಾದದಿಂದ ರಾಷ್ಟ್ರವಾದಕ್ಕೆ ಬಂದಿದ್ದೀರಿ. ಈ ಮೂಲಕ ರಾಷ್ಟ್ರೀಯವಾದಿಗಳಾಗಿದ್ದೀರಿ ಹಾಗೂ ಕ್ಷೇತ್ರದಲ್ಲಿ ಕಮಲ ಅರಳಿಸುತ್ತಿರಿ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ. ಕಳೆದ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಹಾಗೂ ಜೆಡಿಎಸ್ ತಿರಸ್ಕಾರ ಮಾಡಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಗೌರವ ನೀಡಿದ್ದರು. ಆದರೆ, ಪರಿವಾರ ಹಾಗೂ ಕುಟುಂಬ ವಾದ ಒಂದಾಗಿ ಸರ್ಕಾರ ರಚನೆ ಮಾಡಿತು.‌ ನಂತರ ಒಂದು ವರ್ಷದ ಕಾಲ ಆ ರಥ ಕಾರ್ಯ ಆರಂಭಿಸಲಿಲ್ಲ.

ಇದರಿಂದ ಬೇಸತ್ತು ಮೊದಲ ಬಾರಿ 17 ಜನ ಶಾಸಕರು ತಮ್ಮ ತಮ್ಮ ಪಕ್ಷಕ್ಕೆ ರಾಜೀನಾಮೆ ಕೊಟ್ಟು ವಿರೋಧ ಪಕ್ಷವನ್ನು ಅಧಿಕಾರಕ್ಕೆ ತಂದರು, ಕಾಂಗ್ರೆಸ್ ಬಸ್ ಹೊರಟಿದ್ದು, ಹೋಗ್ತಾ ಹೋಗ್ತಾ ಬ್ರೇಕ್ ಫೇಲ್ ಆಗ್ತಿದೆ. ಪಂಚರತ್ನ ಯಾತ್ರೆ ಬಿಜಾಪುರ ಸೇರುವಾಗ ಹಾಸನದಲ್ಲಿ ಟೈರ್ ಪಂಚರ್ ಆಗುತ್ತಿದೆ. ಬಿಜೆಪಿಗೆ ಬರುವ ಮುಂಚೆ ಏನು? ಬಂದ ಮೇಲೆ ಏನು ಎಂಬುದು ಗೋಪಾಲಯ್ಯ ಅವರಿಗೆ ಅರಿವಾಗಿದೆ.‌ ಮನೆತನದ ರಾಜಕೀಯ ಹಿನ್ನೆಲೆಯನ್ನು ಬಿಜೆಪಿ ನೋಡಲ್ಲ. ಸಿದ್ದಾಂತದ ಹಿನ್ನಲೆಯಲ್ಲಿ ಗುರುತಿಸುತ್ತದೆ, ಕುಟುಂಬ ರಾಜಕಾರಣಕ್ಕೆ ಇಲ್ಲಿ ಅವಕಾಶ ಇಲ್ಲ ಎಂದರು.

ಕೋವಿಡ್ ಲಸಿಕೆ ಸಿಕ್ಕಾಗ ಬಿಜೆಪಿ ಆಡಳಿತದಲ್ಲಿ ಲಸಿಕೆ ಮೊದಲು ಮೋದಿ ಪಡೆದುಕೊಂಡಿಲ್ಲ. ತಮ್ಮ ಸಚಿವ ಸಂಪುಟದ ಸದಸ್ಯರಿಗೂ ಕೊಟ್ಟಿಲ್ಲ.‌ ಬದಲಾಗಿ ವೈದ್ಯರಿಗೆ, ನರ್ಸ್ ಗಳಿಗೆ, ಆಶಾ ಕಾರ್ಯಕರ್ತೆರಿಗೆ ಕೊಟ್ಟರು. ಕಾಂಗ್ರೆಸ್ ಆಡಳಿತದಲ್ಲಿ ಇದ್ದರೆ ಲಸಿಕೆ ಮೊದಲು ಸೋನಿಯಾ ಗಾಂಧಿಗೆ, ನಂತರ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾಗೆ ಉಳಿದರೆ ವಾದ್ರಾಗೆ ಸಿಗುತ್ತಿತ್ತು. ಇನ್ನೂ ಉಳಿದರೆ ಮಲ್ಲಿಕಾರ್ಜುನ ಖರ್ಗೆಗೆ ಕೊಡುತ್ತಿದ್ದರು ಎಂದು ಲೇವಡಿ ಮಾಡಿದರು.

ಸಚಿವ ಕೆ.ಗೋಪಾಲಯ್ಯ ಮಾತನಾಡಿ ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದೆ.‌ 2013ರಲ್ಲಿ ಬಿಜೆಪಿ ವಿಭಜನೆಯಾಗಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಇಲ್ಲವಾದರೆ ಆ ಪಕ್ಷಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷವಾಗಿದ್ದು, ಉಜ್ವಲ ಭವಿಷ್ಯವಿದೆ ಎಂದರು.

ಮೈಸೂರು, ಹಾಸನ, ಬೆಂಗಳೂರಿನ ಕಾಂಗ್ರೆಸ್, ಜೆಡಿಎಸ್ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬೊಮ್ಮಾಯಿ‌, ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಿ ಜಯಭೇರಿ ಬಾರಿಸಲಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com