ಬೆಂಗಳೂರು: ರಾಜ್ಯ ಸರ್ಕಾರದ ಭ್ರಷ್ಟಾಚಾರದ ಪುರಾವೆ ಇರುವ ಪೆನ್ ಡ್ರೈವ್ ತಮ್ಮ ಜೇಬಿನಲ್ಲಿದೆ ಎಂದಿದ್ದ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಸ್ಪೀಕರ್ ಯುಟಿ ಖಾದರ್ ಅವರು ಒಪ್ಪಿದರೆ ಸದನದಲ್ಲೇ ಪೆನ್ಡ್ರೈವ್ ಪ್ರದರ್ಶನ ಮಾಡುತ್ತೇನೆ ಮತ್ತು ಇಲ್ಲೇ ಆಡಿಯೋ ಹಾಕಿಸುತ್ತೇನೆ ಎಂದು ಗುರುವಾರ ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಆರೋಪಿಸುತ್ತಿರುವ ಎಚ್ ಡಿ ಕುಮಾರಸ್ವಾಮಿ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ನಡುವೆ ತೀವ್ರ ವಾಗ್ವಾದ ನಡೆಯಿತು.
ನನ್ನ ಬಳಿ ಪೆನ್ಡ್ರೈವ್ ಇದೆ, ಅದರಲ್ಲಿ ಸಾಕ್ಷ್ಯವಿದೆ ಎಂದು ಹೇಳುತ್ತಿದ್ದೀರಿ. ನಿಮ್ಮ ಬಳಿ ಯಾವ ಸಾಕ್ಷ್ಯವಿದೆ, ಅದನ್ನು ಸ್ಪೀಕರ್ಗೆ ನೀಡಿ ಎಂದು ಕುಮಾರಸ್ವಾಮಿ ಅವರಿಗೆ ಕೆ.ಜೆ.ಜಾರ್ಜ್ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪೆನ್ಡ್ರೈವ್ನಲ್ಲಿರುವ ಸಾಕ್ಷ್ಯ ವೀಕ್ಷಣೆಗೆ ಸದನದಲ್ಲಿ ವ್ಯವಸ್ಥೆ ಮಾಡಿ. ಸ್ಪೀಕರ್ ಒಪ್ಪಿಗೆ ಕೊಟ್ಟರೆ ಸದನದಲ್ಲೇ ಪೆನ್ ಡ್ರೈವ್ ಪ್ರದರ್ಶನ ಮಾಡುತ್ತೇನೆ ಎಂದು ತಿರುಗೇಟು ನೀಡಿದರು.
ಈ ವೇಳೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ಸದಸ್ಯರು ಬೆಂಬಲ ಸೂಚಿಸಿದರು. ವಿಧಾನಸಭೆಯಲ್ಲಿ ಎಚ್ಡಿಕೆ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯುತ್ತಿದೆ.
Advertisement