ವಿಪಕ್ಷಗಳ ಮೈತ್ರಿಕೂಟ INDIA: 1977ರ ಮ್ಯಾಜಿಕ್ ಮರುಕಳಿಸುತ್ತದೆಯೇ?
ಮುಂದಿನ ವರ್ಷ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಲು ಕಳೆದ ಕೆಲವು ವಾರಗಳಿಂದ ವಿರೋಧ ಪಕ್ಷಗಳು ಒಗ್ಗಟ್ಟು ಮೂಡಿಸಲು ಪ್ರಯತ್ನಿಸುತ್ತಿದ್ದು ಈಗಾಗಲೇ ಪಾಟ್ನಾ ಮತ್ತು ಬೆಂಗಳೂರಿನಲ್ಲಿ ಸಭೆಯನ್ನು ಏರ್ಪಡಿಸಿ ಚರ್ಚೆ ನಡೆಸಿವೆ. ವಿರೋಧ ಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ (INDIA) ಎಂದು ಹೆಸರನ್ನೂ ಇಡಲಾಗಿದೆ.
Published: 22nd July 2023 11:25 AM | Last Updated: 22nd July 2023 01:31 PM | A+A A-

ವಿರೋಧ ಪಕ್ಷದ ಮೈತ್ರಿಕೂಟವನ್ನು ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್ (ಇಂಡಿಯಾ) ಎಂದು ಕರೆಯಲಾಗುತ್ತಿದ್ದು, ಸಮನ್ವಯಕ್ಕಾಗಿ 11 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ
ಬೆಂಗಳೂರು: ಮುಂದಿನ ವರ್ಷ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಲು ಕಳೆದ ಕೆಲವು ವಾರಗಳಿಂದ ವಿರೋಧ ಪಕ್ಷಗಳು ಒಗ್ಗಟ್ಟು ಮೂಡಿಸಲು ಪ್ರಯತ್ನಿಸುತ್ತಿದ್ದು ಈಗಾಗಲೇ ಪಾಟ್ನಾ ಮತ್ತು ಬೆಂಗಳೂರಿನಲ್ಲಿ ಸಭೆಯನ್ನು ಏರ್ಪಡಿಸಿ ಚರ್ಚೆ ನಡೆಸಿವೆ. ವಿರೋಧ ಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ(INDIA) ಎಂದು ಹೆಸರನ್ನೂ ಇಡಲಾಗಿದೆ.
ರಾಷ್ಟ್ರ ಮಟ್ಟದಲ್ಲಿ ವಿರೋಧ ಪಕ್ಷಗಳ ಈ ಒಗ್ಗಟ್ಟಿನ ಪ್ರಯತ್ನ 1977 ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ನ್ನು ಸೋಲಿಸಲು ದೇಶಾದ್ಯಂತ ವಿರೋಧ ಪಕ್ಷಗಳು ಜನತಾ ಪಕ್ಷದ ಬ್ಯಾನರ್ ಅಡಿಯಲ್ಲಿ ಒಗ್ಗೂಡಿದ ದಿನಗಳನ್ನು ಮತ್ತೆ ನೆನಪಿಗೆ ತರುತ್ತವೆ.
Indian National Democratic Inclusive Alliance (I.N.D.I.A) ಎಂದು ಕರೆಯಲ್ಪಡುವ 26 ಪಕ್ಷಗಳ ಹೊಸ ಮೈತ್ರಿ ಮತ್ತು ನಾಲ್ಕೂವರೆ ದಶಕಗಳ ಹಿಂದೆ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಬಿರುಗಾಳಿ ಎಬ್ಬಿಸಿದ್ದ ಅಂದಿನ ಜನತಾ ಪಕ್ಷದ ನಡುವೆ ಸಾಮ್ಯತೆಗಳನ್ನು ಕಾಣಬಹುದು.
ಆಗ, ತುರ್ತು ಪರಿಸ್ಥಿತಿಯನ್ನು ಘೋಷಿಸಿ ರಾಜಕೀಯ ನಾಯಕರನ್ನು ಕಂಬಿ ಹಿಂದೆ ಹಾಕಿದ್ದ ಇಂದಿರಾಗಾಂಧಿ ಅವರನ್ನು ಸೋಲಿಸಲು ರಾಜಕೀಯ ಪಕ್ಷಗಳ ನಾಯಕರು ಒಂದಾಗಿದ್ದರು, ಮೊರಾರ್ಜಿ ದೇಸಾಯಿ ಮತ್ತು ಚಳವಳಿಯ ಹಿಂದೆ ದೊಡ್ಡ ಶಕ್ತಿಯಾಗಿದ್ದ ಜೆಪಿ ಎಂದು ಹೆಸರಾದ ಜಯಪ್ರಕಾಶ್ ನಾರಾಯಣ್ ಅವರನ್ನು ಸಹ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಕಳುಹಿಸಲಾಗಿತ್ತು.
ಭಾರತೀಯ ಜನಸಂಘ, ಭಾರತೀಯ ಲೋಕದಳ, ಕಾಂಗ್ರೆಸ್ (ಒ) ಮತ್ತು ಸಮಾಜವಾದಿ ಪಕ್ಷಗಳು ಒಗ್ಗೂಡಿಸಿ ಇಂದಿರಾ ನೇತೃತ್ವದ ಕಾಂಗ್ರೆಸ್ ನ್ನು ಭಾರಿ ಅಂತರದಿಂದ ಸೋಲಿಸಿದವು.
ಇದನ್ನೂ ಓದಿ: ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ 'I.N.D.I.A' ಎಂದು ನಾಮಕರಣ: ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಘೋಷಣೆ
ಸರ್ವಾಧಿಕಾರವನ್ನು ಕೊನೆಗಾಣಿಸಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಉದ್ದೇಶದಿಂದ ಕಾಂಗ್ರೆಸ್ಸೇತರ ಪಕ್ಷಗಳು ಇಂದಿರಾ ಗಾಂಧಿ ವಿರುದ್ಧ ಚುನಾವಣಾ ಯುದ್ಧವನ್ನೇ ಸಾರಿದ್ದವು. ಅದೇ ರೀತಿ ಈಗ 2023ರಲ್ಲಿ I.N.D.I.A ಹೆಸರಿನಲ್ಲಿ ರಾಜಕೀಯ ಪಕ್ಷಗಳು ಮೋದಿಯವರ ಸರ್ವಾಧಿಕಾರತ್ವ ಮತ್ತು ಅವರ ಭಾರತದ ಕಲ್ಪನೆಯನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ.
ಸಾಮಾನ್ಯ ವೇದಿಕೆಯಲ್ಲಿ ಒಗ್ಗೂಡಿರುವ ವಿರೋಧ ಪಕ್ಷಗಳು ಜನರ ಧ್ವನಿಯಾಗಲು ಮತ್ತು ಸಂವಿಧಾನದ ನಿಜವಾದ ಚೇತನವನ್ನು ರಕ್ಷಿಸಲು ಒಗ್ಗೂಡಿದ್ದೇವೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್‌ಜೆಡಿ, ಜೆಡಿಯು, ಡಿಎಂಕೆ, ಸಿಪಿಐ(ಎಂ), ಸಿಪಿಐ, ಶಿವಸೇನೆ, ಎನ್‌ಸಿಪಿ ಮತ್ತು ಇತರ ವಿರೋಧ ಪಕ್ಷಗಳು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ನಿರುದ್ಯೋಗ, ಹಣದುಬ್ಬರ, ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆ ಮತ್ತು ಬಿಜೆಪಿಯೇತರ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಅಧಿಕಾರ ಚಲಾಯಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೈತ್ರಿಗೆ ನಾಯಕರ ಆಯ್ಕೆ ಮತ್ತು ಸೀಟು ಹಂಚಿಕೆ ದೊಡ್ಡ ವಿಷಯವಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಆಯಾ ರಾಜ್ಯಗಳಲ್ಲಿ ವಿವಿಧ ಮೈತ್ರಿ ಪಾಲುದಾರರ ನಡುವಿನ ದೊಡ್ಡ ವಿರೋಧಾಭಾಸವನ್ನು ಪರಿಗಣಿಸಿದರೆ ಮೈತ್ರಿ ಮಾಡಿ ನಾಯಕನ ಹೆಸರು ಘೋಷಣೆ ಮಾಡುವುದು ಅಷ್ಟು ಸುಲಭವಲ್ಲ.
ಹಲವು ಸವಾಲುಗಳನ್ನು ಎದುರಿಸಬೇಕು: ಮೈತ್ರಿಕೂಟವು 1977ರ ಪರಿಸ್ಥಿತಿಯನ್ನು ಪುನರಾವರ್ತಿಸಬೇಕಾದರೆ ಕೆಲವು ಅಡೆತಡೆಗಳನ್ನು ನಿವಾರಿಸಬೇಕಾಗುತ್ತದೆ. ಮುಂಬೈನಲ್ಲಿ ಮತ್ತೆ ಸಭೆ ನಡೆಸುತ್ತಿರುವ ನಾಯಕರು, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿರಿಸಬೇಕಾಗುತ್ತದೆ. ಕಾಂಗ್ರೆಸ್ಸೇತರ ರಾಜ್ಯಗಳಲ್ಲಿ ಸೀಟು ಹಂಚಿಕೆಯ ಬಗ್ಗೆ ಚರ್ಚಿಸಬೇಕು. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅಂದು ಜನತಾ ಪಕ್ಷವು ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಸಾಧಿಸಲು ಹಲವು ತ್ಯಾಗಗಳನ್ನು ಮಾಡಬೇಕಾಗಿತ್ತು.
ಇದನ್ನೂ ಓದಿ: ಪ್ರತಿಪಕ್ಷಗಳ ಒಕ್ಕೂಟಕ್ಕೆ INDIA ಹೆಸರು ಸಲಹೆ ನೀಡಿದ್ಯಾರು?: ಯಾರು ಯಾವೆಲ್ಲಾ ಹೆಸರು ಸೂಚಿಸಿದ್ದರು?... ಇಲ್ಲಿದೆ ವಿವರ
I.N.D.I.A-ಇಂಡಿಯಾ ಯಶಸ್ವಿಯಾಗಬೇಕಾದರೆ, ಮೋದಿಯವರ ಹ್ಯಾಟ್ರಿಕ್ ಗೆಲುವನ್ನು ತಡೆಯಬೇಕಾದರೆ ಅದು ದಕ್ಷಿಣ ಭಾರತವನ್ನು ಹೊರತುಪಡಿಸಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. 1977ರಲ್ಲಿ, ಹರಿಯಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗುವುದನ್ನು ಜನತಾ ಪಕ್ಷ ಖಚಿತಪಡಿಸಿತ್ತು.
ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್‌ನ ಮಾಜಿ ನಿರ್ದೇಶಕ ವಿಕೆ ನಟರಾಜ್, ಹೊಸ ಮೈತ್ರಿಕೂಟಕ್ಕೆ 1977ರ ಜನತಾ ಪಕ್ಷದ ಗೆಲುವು ಸಿಗಬೇಕಾದರೆ ಅಂದಿನ ನಿಲುವು ಅವರ ಸ್ಥಾನಮಾನ ಅಥವಾ ಪ್ರಭಾವಶಾಲಿ ನಾಯಕ ಇಂದಿಲ್ಲ ಎನ್ನುತ್ತಾರೆ. ಹೊಸ ರಾಜಕೀಯ ಗುಂಪು ಪರಿಣಾಮ ಬೀರಬಹುದು, ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಅಲ್ಲ. ಆದರೆ ಬಿಜೆಪಿ ತನ್ನ ತಪ್ಪಿಗೆ ಬೆಲೆ ತೆರಲಿದೆ ಎಂದರು.
ವಿಪಕ್ಷಗಳ ಮೈತ್ರಿಕೂಟವು 1977ರ ರಾಜಕೀಯ ಪರಿಸ್ಥಿತಿಯನ್ನು ಪುನರಾವರ್ತಿಸಲು ಉತ್ಸುಕವಾಗಿದೆಯೇ ಎಂಬ ಪ್ರಶ್ನೆಗೆ, ಎಐಸಿಸಿ ವಕ್ತಾರ ಪವನ್ ಖೇರಾ, ಪ್ರತಿ ಯುಗದಲ್ಲಿ ಭಿನ್ನ ಮಾದರಿಗಳಿರುತ್ತವೆ. ಮೋದಿಯವರನ್ನು ಸೋಲಿಸಲು I.N.D.I.A 1977ರ ರಾಜಕೀಯ ಗುರಿಯನ್ನು ಹೊಂದಿದ್ದು ಅದರಲ್ಲಿ ಸಫಲವಾಗಲಿದೆ. ದೇಶದ ಜನರು ಸರ್ಕಾರ ಮತ್ತು ಅದರ ಜನವಿರೋಧಿ ನೀತಿಗಳ ವಿರುದ್ಧ ಇರುವುದರಿಂದ ಮೋದಿ ಮತ್ತು ಬಿಜೆಪಿ ನಾಯಕರು ತಳಮಳಗೊಂಡಿದ್ದಾರೆ ಎಂದರು.