ವಿರೋಧ ಪಕ್ಷ ಇರುವುದು ಯುದ್ಧಕ್ಕಾಗಿ, ಸ್ನೇಹ ಮಾಡೋಕೆ ಅಲ್ಲ: ಸಿದ್ದರಾಮಯ್ಯ ವಿರುದ್ಧ ಎಚ್ ಡಿ ಕೆ ವಾಗ್ದಾಳಿ

ಸರ್ಕಾರದ ತಪ್ಪುಗಳ ವಿರುದ್ಧ ಯುದ್ಧ ನಡೆಸುವುದಕ್ಕಾಗಿ ಜೆಡಿಎಸ್ ವಿಪಕ್ಷ ಸ್ಥಾನದಲ್ಲಿ ಕುಳಿತಿದೆ, ಕಾಂಗ್ರೆಸ್ ಪಕ್ಷವು ಕೊಟ್ಟ ಮಾತಿನಂತೆ ನಡೆಯದಿದ್ದರೆ ನಾವು ಕೈಕಟ್ಟಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಸರ್ಕಾರದ ತಪ್ಪುಗಳ ವಿರುದ್ಧ ಯುದ್ಧ ನಡೆಸುವುದಕ್ಕಾಗಿ ಜೆಡಿಎಸ್ ವಿಪಕ್ಷ ಸ್ಥಾನದಲ್ಲಿ ಕುಳಿತಿದೆ, ಕಾಂಗ್ರೆಸ್ ಪಕ್ಷವು ಕೊಟ್ಟ ಮಾತಿನಂತೆ ನಡೆಯದಿದ್ದರೆ ನಾವು ಕೈಕಟ್ಟಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಪಕ್ಷದ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ವಿರೋಧ ಪಕ್ಷಗಳ ಜತೆ ಸ್ನೇಹಕ್ಕೂ ಸಿದ್ಧ ಮತ್ತು ಸಮರಕ್ಕೂ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಾವು ಇಲ್ಲಿರುವುದು ಸರ್ಕಾರದ ತಪ್ಪುಗಳನ್ನು ಕಂಡೂ ಸುಮ್ಮನೆ ಕುಳಿತುಕೊಳ್ಳಲು ಅಲ್ಲ. ಜನರ ಪರವಾಗಿ ಧ್ವನಿ ಎತ್ತಿ ಹೋರಾಡುವುದಕ್ಕೆ ಇದ್ದೇವೆ ಸ್ನೇಹಕ್ಕಾಗಿ ಅಲ್ಲ ಎಂದರು.

ಗ್ಯಾರಂಟಿ ಕುರಿತಂತೆ ನಿನ್ನೆ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯೊಂದನ್ನ ನೋಡಿದೆ, ವಿರೋಧ ಪಕ್ಷಗಳು ಜನರನ್ನು ದಾರಿ ತಪ್ಪಿಸಿ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ. ಅವರಿಗೆ ಕೇಳಲು ಬಯಸುತ್ತೇನೆ ದುರ್ಬಳಕೆ ಮಾಡಲು ವೇದಿಕೆ ಸಿದ್ದ ಮಾಡಿರೋವವರು ನೀವು. 200 ಯುನಿಟ್ ಫ್ರೀ ಅಂದ್ರಿ ಆದರೆ ಈಗ ಗೊತ್ತಾಗುತ್ತಿದೆಯಾ? ಅದೇನು ಸಮಸ್ಯೆ ಅಂತ. ಫ್ರೀ ಅಂತ ಹೇಳುವಾಗ ಪರಿಜ್ಞಾನ ಇರಲಿಲ್ವಾ..? ಈಗ ನೀವು ಷರತ್ತು ಹಾಕಿದಿರಲ್ಲಾ..? ಷರತ್ತು ಹಾಕ್ತೀವಿ ಅಂತ ಅಂದೇ ಹೇಳಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.

ಸಿದ್ದರಾಮಯ್ಯ ಅವರೇ ಉಚಿತ ಅಂತ ಹೇಳಿದವರು ನೀವು. ಗ್ಯಾರಂಟಿ ಕಾರ್ಡ್ ಮೇಲೆ ಸಹಿ ಹಾಕಿದವರು ನೀವು, ನಾವಲ್ಲ. ಬಾಡಿಗೆದಾರರ ಪರಿಸ್ಥಿತಿ ಏನಾಗುತ್ತದೆ ಈಗ. ಬೇರೆ ಮನೆಗೆ ಶಿಫ್ಟ್ ಆಗುವವನ ಕಥೆ ಏನು, ಮಣ್ಣು ತಿನ್ನಬೇಕು. ಇದನ್ನು ಪ್ರಶ್ನೆ ಮಾಡ್ತಾ ಇರೋದು ನಾವು. ವಿರೋಧ ಪಕ್ಷ ದವರು,  ನಾವು ಇರುವುದೇ ಯುದ್ಧ ಮಾಡೋಕೆ, ಸ್ನೇಹ ಮಾಡೋಕೆ ಅಲ್ಲ. ಜನ ಅದನ್ನು ಕೇಳೋಕೆ ಅಂತಾನೇ ಕೂರಿಸಿರೋದು ನಮ್ಮನ್ನ ಎಂದರು.

ನಾವು ಎಷ್ಟು ಸ್ಥಾನ ಗಳಿಸಿದ್ದೇವೆ ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ವಿರೋಧ ಪಕ್ಷದಲ್ಲಿ ಇದ್ದು ಪ್ರಬಲ ಹೋರಾಟ ನಡೆಸುತ್ತೇವೆ. ಅದಕ್ಕೆ ಬಿಜೆಪಿಯವರಂತೆ ಆತುರವೂ ಇಲ್ಲ. ಸರ್ಕಾರ ಕೆಲಸ ಮಾಡಲು ಒಂದಷ್ಟು ದಿನ ಕಾಲಾವಕಾಶ ನೀಡುತ್ತೇವೆ. ನಂತರ ಹೋರಾಟ ಆರಂಭಿಸಲಾಗುವುದು ಎಂದರು. ಇನ್ನೂ ರಾಷ್ಟ್ರೀಯ ಪಕ್ಷಗಳು ನಮ್ಮ ಪಕ್ಷವನ್ನು ಮುಗಿಸುವ ಕನಸು ಕಂಡಿದ್ದರೆ ಅದು ಅವರ ಮೂರ್ಖತನ, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಿ ಜೆಡಿಎಸ್ ಪಕ್ಷವನ್ನು ಮತ್ತಷ್ಚು ಪ್ರಬಲ ಗೊಳಿಸುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಸಾಧನೆ ಹೇಗಿರುತ್ತೆ ಅಂತ ಗೊತ್ತು. ಅವರು ಯಾವ ರೀತಿ ಉತ್ತಮ ಆಡಳಿತ ನಡೆಸುತ್ತಾರೆ ಎಂಬುದು ನನಗೆ ತಿಳಿದಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com