ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

2024 ರ ಲೋಕಸಭೆ ಚುನಾವಣೆ: ಜಾತಿ ಗಣತಿ ವರದಿ ಕಾಂಗ್ರೆಸ್ ಸರ್ಕಾರದ ಪಾಲಿಗೆ ಆಗಲಿದೆಯೇ ಸಮಸ್ಯೆಗಳ ಸರಮಾಲೆ?

ಜಾತಿ ಗಣತಿ ವರದಿ ಎಂದೂ ಕರೆಯಲ್ಪಡುವ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ವರದಿಯನ್ನು ಒಪ್ಪಿಕೊಳ್ಳುವ ಸಿದ್ದರಾಮಯ್ಯ ಸರ್ಕಾರದ ನಿರ್ಧಾರವು 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಂಡೋರಾ ಬಾಕ್ಸ್ ಆಗುವ ಸಾಧ್ಯತೆಯಿದೆ.
Published on

ಬೆಂಗಳೂರು: ಕರ್ನಾಟಕದ ಜಾತಿ ಗಣತಿ ವಿಚಾರ ಮತ್ತೆ ಮುನ್ನೆಲೆಗೆ ಬರುತ್ತಿದೆ. ಈ ಹಿಂದೆ 2013-2018ರ ತನಕ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಜಾತಿ ಗಣತಿ ಸದ್ದು ಮಾಡಿತ್ತು. ಹೀಗೆ ಕುತೂಹಲ ಕೆರಳಿಸಿದ್ದ ಜಾತಿ ಗಣತಿ ವರದಿಯು ಅಂತಿಮ ಘಟ್ಟ ತಲುಪಿದ್ದು, ವರದಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಾ ಎನ್ನುವ ಅನುಮಾನ ಶುರುವಾಗಿದೆ.

ಜಾತಿ ಗಣತಿ ವರದಿ ಎಂದೂ ಕರೆಯಲ್ಪಡುವ ಈ ಸಮೀಕ್ಷೆ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ವರದಿಯಾಗಿದೆ. ಈ ಜಾತಿಗಣತಿಯನ್ನು ಒಪ್ಪಿಕೊಳ್ಳುವ ಸಿದ್ದರಾಮಯ್ಯ ಸರ್ಕಾರದ ನಿರ್ಧಾರವು 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಹಲವು ಸಮಸ್ಯೆಗಳ ಸರಮಾಲೆಯನ್ನು ತಂದೊಡ್ಡುವ ಸಾಧ್ಯತೆಯಿದೆ.

2015ರಲ್ಲಿ ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕುರುಬ ಸಮುದಾಯದ ಎಚ್‌ ಕಾಂತರಾಜು ಅವರನ್ನು ನೇಮಿಸಿ ಸಮೀಕ್ಷೆ ನಡೆಸಿತ್ತು. 2019ರ ವೇಳೆಗೆ ವರದಿ ಸಿದ್ಧವಾಗಿದ್ದರೂ ಆಯೋಗದ ಸದಸ್ಯ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಸಹಿ ಹಾಕದ ಕಾರಣ ಸರ್ಕಾರ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ.

6 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಒಳಗೊಂಡಿರುವ 1.35 ಕೋಟಿ ಕುಟುಂಬಗಳನ್ನು ಸಮೀಕ್ಷೆ ನಡೆಸಲಾಗಿದ್ದರೂ, ಸುಮಾರು 25-30 ಲಕ್ಷ ಜನರು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಮೇಲ್ವರ್ಗದ ಸಮುದಾಯಗಳ ಜನರ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗಿದೆ. ವ್ಯತಿರಿಕ್ತವಾಗಿ ಹಿಂದುಳಿದ ಮತ್ತು ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿದೆ.

ಜಾತಿ ಗಣತಿಯ ಆಧಾರದ ಮೇಲೆ ವಿವಿಧ ವರ್ಗಗಳ ಅಡಿಯಲ್ಲಿ ಮೀಸಲಾತಿ ಪ್ರಯೋಜನಗಳ ಲಾಭವನ್ನು ಪಡೆಯುವಲ್ಲಿ ಆಶ್ಚರ್ಯಕರ ಸಂಗತಿಗಳನ್ನು ಬಹಿರಂಗಪಡಿಸುತ್ತದೆ. ಯಾವ ಸಮುದಾಯದ ಜನ ಎಷ್ಚು ಸಂಖ್ಯೆಯಲ್ಲಿದ್ದಾರೆ ಎಂಬುದು ವರದಿಯಿಂದ ತಿಳಿದು ಬರುತ್ತದೆ, ಹೀಗಾಗಿ ಸತ್ಯಗಳನ್ನು ಒಪ್ಪಿಕೊಳ್ಳಲು ಅಂದಿನ ಸರ್ಕಾರ ಧೈರ್ಯ ಮಾಡಲಿಲ್ಲ ಎಂದು ಮೂಲಗಳು ತಿಳಿಸಿವೆ.

ಆದರೆ ಇದೀಗ ತಮ್ಮ ಸರ್ಕಾರ ವರದಿಯನ್ನು ಒಪ್ಪಿಕೊಳ್ಳುವುದಾಗಿ ಸಿದ್ದರಾಮಯ್ಯ ಘೋಷಿಸಿರುವ ಹಿನ್ನೆಲೆಯಲ್ಲಿ ಸದಸ್ಯ ಕಾರ್ಯದರ್ಶಿ ಸಹಿ ಮಾಡದಿರುವ ಅಡೆತಡೆಯನ್ನು ತೆರವುಗೊಳಿಸುವಂತೆ ಆಯೋಗ ಸರ್ಕಾರಕ್ಕೆ ಪತ್ರ ಬರೆದಿದೆ.

ವರದಿಯನ್ನು ಸಲ್ಲಿಸಲು ನಮಗೆ ಯಾವುದೇ ಸಮಸ್ಯೆ ಇಲ್ಲ, ಆದರೆ ವಿಶ್ಲೇಷಣೆಯನ್ನು ಬಿಡುಗಡೆ ಮಾಡಲು ನಮಗೆ ಕಾನೂನು ಸಲಹೆಯ ಅಗತ್ಯವಿದೆ, ಇದಕ್ಕಾಗಿ ಸದಸ್ಯ ಕಾರ್ಯದರ್ಶಿಯ ಸಹಿ ಕಡ್ಡಾಯವಾಗಿದೆ.

ಅದು ಪರಿಹರಿದ ನಂತರ ನಾವು ಮುಖ್ಯ ಕಾರ್ಯದರ್ಶಿಗೆ ವರದಿಯನ್ನು ಸಲ್ಲಿಸುತ್ತೇವೆ ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರಾವಧಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದೆ.

ಕಾಂಗ್ರೆಸ್ ಸರ್ಕಾರವು ಸಂಪೂರ್ಣ ಜನಾದೇಶವನ್ನು ಹೊಂದಿರುವುದರಿಂದ, ಮೀಸಲಾತಿ ಮರುವರ್ಗೀಕರಿಸಲು ಮಾಹಿತಿಯನ್ನು ಬಳಸಬಹುದು ಎಂದು ಮೂಲಗಳು ತಿಳಿಸಿವೆ. 2B ವರ್ಗದ ಅಡಿಯಲ್ಲಿ ಮುಸ್ಲಿಮರಿಗೆ ಶೇ. 4 ಕೋಟಾವನ್ನು ಪುನಃಸ್ಥಾಪಿಸಲು ಸರ್ಕಾರವು ವರದಿಯನ್ನು ಬಳಸುತ್ತದೆ ಎಂದು ಇನ್ನೊಂದು ಮೂಲಗಳು ತಿಳಿಸಿವೆ.

ವರದಿಯನ್ನು ಅಂಗೀಕರಿಸುವುದರಿಂದ ಕೋಟಾ ಸೌಲಭ್ಯದಿಂದ ವಂಚಿತರಾಗಿರುವ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ಮತ್ತು ಸರ್ಕಾರವು ಮುಂದಿನ ಕ್ರಮ ಕೈಗೊಳ್ಳಲು ಸಹಾಯ ಮಾಡುತ್ತದೆ ಎಂದು ಕೆಪಿಸಿಸಿ ವಕ್ತಾರ ನಟರಾಜ್ ಗೌಡ ಹೇಳಿದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಅವರು ಅಲೆಮಾರಿಗಳು, ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಈ ಜಾತಿ ಗಣತಿ ಸಹಾಯ ಮಾಡುತ್ತದೆ ಎಂದು ಹೇಳಿದರು. ವರದಿಯನ್ನು ಅಂಗೀಕರಿಸುವ ಮುಖ್ಯಮಂತ್ರಿಯವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ಸಿದ್ದರಾಮಯ್ಯ ಸರ್ಕಾರ ಜಾತಿ ಗಣತಿ ವರದಿಯನ್ನು ಅಂಗೀಕರಿಸಿದರೇ ಅದರಲ್ಲಿರುವ ಅಂಕಿ ಅಂಶಗಳ ಪ್ರಕಾರ, ಮೀಸಲಾತಿ ಮರುಜಾರಿ ಮಾಡಬೇಕಾಗುತ್ತದೆ, ಕೆಲ ಸಮುದಾಯಗಳಿಗೆ ಅಸ್ಥಿತ್ವದಲ್ಲಿರುವ ಮೀಸಲಾತಿ ಪ್ರಮಾಣ ಕೂಡ ಏರಪೇರಾಗುವ ಸಾಧ್ಯತೆಯಿದೆ. ಹೀಗಾಗಿ ಜಾತಿ ಗಣತಿ ವರದಿ ಎಂಬ ಜೇನುಗೂಡಿಗೆ ಕಾಂಗ್ರೆಸ್ ಸರ್ಕಾರ ಕೈ ಹಾಕಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com