ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ: ಸಚಿವ ಸತೀಶ್ ಜಾರಕಿಹೊಳಿ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ರಾಜ್ಯದಲ್ಲಿ ಮುಂದಿನ ಐದು ವರ್ಷ ಆಡಳಿತ ನಡೆಸುತ್ತಾರೆ. ಅಧಿಕಾರ ಪೂರೈಸುವ ವಿಶ್ವಾಸ ನನಗಿದೆ ಎಂದು ಲೋಕೋಪಯೋಗಿ ಸಚಿವ ಹಾಗೂ ಸಿದ್ದರಾಮಯ್ಯರ ಆಪ್ತರಾಗಿರುವ ಸತೀಶ್ ಜಾರಕಿಹೊಳಿ ಅವರು ಭಾನುವಾರ ಹೇಳಿದರು.
ಸಚಿವ ಸತೀಶ್ ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ

ದಾವಣಗೆರೆ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ರಾಜ್ಯದಲ್ಲಿ ಮುಂದಿನ ಐದು ವರ್ಷ ಆಡಳಿತ ನಡೆಸುತ್ತಾರೆ. ಅಧಿಕಾರ ಪೂರೈಸುವ ವಿಶ್ವಾಸ ನನಗಿದೆ ಎಂದು ಲೋಕೋಪಯೋಗಿ ಸಚಿವ ಹಾಗೂ ಸಿದ್ದರಾಮಯ್ಯರ ಆಪ್ತರಾಗಿರುವ ಸತೀಶ್ ಜಾರಕಿಹೊಳಿ ಅವರು ಭಾನುವಾರ ಹೇಳಿದರು.

ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಸ್ಥಾನ ಇದುವರೆಗೂ ಅರ್ಧಕ್ಕೆ ಅಂತ ಯಾರೂ ಹೇಳಿಲ್ಲ, ಅದ್ದರಿಂದ ಸಿದ್ದರಾಮಯ್ಯ ಅವರೇ 5 ವರ್ಷ ಆಡಳಿತ ನಡೆಸುತ್ತಾರೆ ಎನ್ನುವ ವಿಶ್ವಾಸ ಇದೆ. ಅದು ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆ ಕುರಿತು ಮಾತನಾಡಿ, ಅಕ್ಕಿ ಖರೀದಿ ವಿಚಾರಕ್ಕೆ ಸಂಬಂಧಿಸಿದ್ದಂತೆ ಸಣ್ಣ ಪುಟ್ಟ ಸಮಸ್ಯೆಗಳಿವೆ. ಸದ್ಯದಲ್ಲಿಯೇ ಎಲ್ಲವನ್ನೂ ಸರಿಪಡಿಸುತ್ತೇವೆ. ವಿರೋಧ ಪಕ್ಷ ಬಿಜೆಪಿಯವರು ವಿನಾಕಾರಣ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಹೋರಾಟ ಮಾಡುವುದು, ಬಿಡುವುದು ಆ ಪಕ್ಷಕ್ಕೆ ಬಿಟ್ಟ ವಿಚಾರ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು 15 ಲಕ್ಷ ರೂಪಾಯಿ ಅಕೌಂಟ್ ಗೆ ಹಾಕಲಾಗುವುದು ಎಂಬ ಭರವಸೆ ನೀಡಿ 9 ವರ್ಷಗಳ ಮೇಲಾಯ್ತು. ಆದರೂ ಇದುವರೆಗೂ ನಯಾಪೈಸೆ ಕೂಡ ಬಂದಿಲ್ಲ. ವಿದೇಶಗಳ ಬ್ಯಾಂಕ್‌ನಲ್ಲಿ ಇಟ್ಟಿರುವ ಕಪ್ಪು ಹಣ ತರುತ್ತೇವೆ ಎಂದಿದ್ದರು. ಇಷ್ಟು ವರ್ಷವಾದರೂ ತರಲು ಆಗಿಲ್ಲ. ಅವರು ನೀಡಿದ್ದ 10 ಭರವಸೆಗಳು ಹಾಗೆಯೇ ಉಳಿದಿವೆ ಎಂದು ಆರೋಪಿಸಿದರು.

ಸಮಸ್ಯೆಗಳನ್ನು ಸರಿಪಡಿಸಲು ಕಾಲಾವಕಾಶ ಬೇಕು. ಎಲ್ಲವನ್ನೂ ಒಮ್ಮೆಲೆ ಸರಿಪಡಿಸುತ್ತೇವೆ ಎಂದರೆ ಆಗದು. ಬಿಜೆಪಿಯವರು ಪಠ್ಯ ಪರಿಷ್ಕರಣ ಮಾಡಿದ್ದು, ಶಿಕ್ಷಣ ನೀತಿಗೆ ವಿರುದ್ಧವಾಗಿದೆ. ಅದನ್ನು ಬದಲಾವಣೆ ಮಾಡ್ತೀವಿ ಎಂದು ಹೇಳಿದ್ದೇವೆ. ಬದಲಾವಣೆ ಮಾಡುತ್ತೇವೆ ಇದರಲ್ಲಿ ಗೊಂದಲ ಇಲ್ಲ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com