ಜೆಡಿಎಸ್ ಪಂಚರತ್ನ ರಥ ಯಾತ್ರೆ ಪಟ್ಟಿಯಿಂದ ವಿವಾದಿತ ಹಾಸನ ಕ್ಷೇತ್ರ ಕೈಬಿಟ್ಟ ಎಚ್‌ಡಿಕೆ
ಹಾಸನ: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಂಚರತ್ನ ರಥ ಯಾತ್ರೆ ಪಟ್ಟಿಯಿಂದ ವಿವಾದಿತ ಹಾಸನ ಕ್ಷೇತ್ರವನ್ನು ಕೈಬಿಡಲಾಗಿದೆ.
ಹಾಸನ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನಗೊಂಡಿದ್ದ ಎಚ್ ಡಿ ಕುಮಾರಸ್ವಾಮಿ ಅವರು, ಹಾಸನ ಜಿಲ್ಲೆಯ ರಾಜಕಾರಣವನ್ನು ರೇವಣ್ಣ ಅವರಿಗೇ ಬಿಟ್ಟಿದ್ದೇನೆ ಎಂದು ಹೇಳಿದ್ದರು.
ಹಾಸನ ಹೊರತು ಪಡಿಸಿ ಉಳಿದೆಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ಸಾಗಿದ್ದು, ಗೌಡರ ಕುಟುಂಬ ಸದಸ್ಯರಿಗೆ ಟಿಕೆಟ್ ವಿಚಾರ ಈಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಸನ ಟಿಕೆಟ್ ವಿಚಾರ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ನಡುವಿನ ಅಂತರವನ್ನೂ ಮತ್ತಷ್ಟು ಹೆಚ್ಚಿಸಿದೆ.
ಮಾರ್ಚ್ 10ರಂದು ಬೇಲೂರಿನಿಂದ ಹಾಸನ ಜಿಲ್ಲೆಗೆ ರಥ ಯಾತ್ರೆ ಆಗಮಿಸಲಿದ್ದು, 17ರವರೆಗೆ ಜಿಲ್ಲೆಯಾದ್ಯಂತ ಸಂಚರಿಸಲಿದೆ. ಭವಾನಿ ರೇವಣ್ಣ ಹಾಗೂ ಪುತ್ರ ಎಚ್.ಪಿ.ಸ್ವರೂಪ್ ನಡುವಿನ ಹೋರಾಟದ ಹಿನ್ನೆಲೆಯಲ್ಲಿ ರಾಜ್ಯದ ಗಮನ ಸೆಳೆದಿರುವ ಹಾಸನ ಕ್ಷೇತ್ರದಲ್ಲಿ ಪ್ರತ್ಯೇಕ ಸಮಾವೇಶ ನಡೆಸಲು ಜೆಡಿಎಸ್ ಮುಖಂಡರು ನಿರ್ಧರಿಸಿದ್ದಾರೆ.
ಹಾಸನ ಟಿಕೆಟ್ ಗೊಂದಲ ಮುಂದುವರಿದಿದ್ದು, ಪಕ್ಷ ಹಾಗೂ ಕುಟುಂಬ ಸದಸ್ಯರಿಗೆ ಆಗುವ ಅವಮಾನ ತಪ್ಪಿಸಲು ಎಚ್‌ಡಿಕೆ ಹಾಸನವನ್ನು ತಮ್ಮ ಪಂಚರತ್ವ ರಥಯಾತ್ರೆ ಪಟ್ಟಿಯಿಂದ ಕೈಬಿಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ