ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 140 ಸ್ಥಾನಗಳಲ್ಲಿ ಗೆಲುವು; ಸಮೀಕ್ಷೆಯಲ್ಲಿ ಬಹಿರಂಗ: ಡಿಕೆ ಶಿವಕುಮಾರ್

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು 224 ಸ್ಥಾನಗಳ ಪೈಕಿ 140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಾಗಿ ಸರ್ವೇಯಲ್ಲಿ ಅಂದಾಜಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ.
ಬಿಜೆಪಿಯ ಮಾಜಿ ಶಾಸಕ ಜಿಎನ್ ನಂಜುಂಡಸ್ವಾಮಿ ಮತ್ತಿತರರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ಚಿತ್ರ
ಬಿಜೆಪಿಯ ಮಾಜಿ ಶಾಸಕ ಜಿಎನ್ ನಂಜುಂಡಸ್ವಾಮಿ ಮತ್ತಿತರರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ಚಿತ್ರ

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು 224 ಸ್ಥಾನಗಳ ಪೈಕಿ 140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಾಗಿ ಸರ್ವೇಯಲ್ಲಿ ಅಂದಾಜಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ.  ಮುಂಬರುವ ದಿನಗಳಲ್ಲಿ ಬಿಜೆಪಿಯ ಅನೇಕ ಹಾಲಿ ಶಾಸಕರು ಕೂಡಾ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿಯ ಮಾಜಿ ಶಾಸಕ ಜಿಎನ್ ನಂಜುಂಡಸ್ವಾಮಿ ಮತ್ತು ಮನೋಹರ್ ಹಾಗೂ ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್ ಇಂದು ಕಾಂಗ್ರೆಸ್ ಸೇರ್ಪಡೆ  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಈ ಹಿಂದೆ ಮಾಡಲಾದ ಸರ್ವೇಯಲ್ಲಿ 136  ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸುವುದಾಗಿ ಊಹಿಸಲಾಗಿತ್ತು. ಇದೀಗ 140 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದಾಗಿ ಸರ್ವೇಗಳು ಹೇಳಿವೆ.  ಬದಲಾವಣೆ ಈಗ ಆರಂಭವಾಗಿದೆ. ರಾಜ್ಯಾದ್ಯಂತ ಪ್ರವಾಸ ಮಾಡಲು ಎದುರು ನೋಡುತ್ತಿದ್ದೇವೆ ಎಂದರು.

ಮುಂದಿನ ದಿನಗಳಲ್ಲಿ ಅನೇಕ ಮಾಜಿ ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಪಕ್ಷ ಸೇರುವ ಶಾಸಕರ ಪಟ್ಟಿಯನ್ನು ಘೋಷಿಸುತ್ತೇವೆ. ಈ ಸಂಬಂಧ ಚರ್ಚೆ ನಡೆಯುತ್ತಿದ್ದು, ಈಗ  ಯಾರ ಹೆಸರನ್ನೂ ಬಹಿರಂಗಪಡಿಸುವುದಿಲ್ಲ, ಪಕ್ಷದ ಸಿದ್ದಾಂತ ಮತ್ತು ನಾಯಕತ್ವ ಒಪ್ಪಿ, ಯಾವುದೇ ಷರತ್ತು ಇಲ್ಲದೆ ಅನ್ಯ ಪಕ್ಷಗಳ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಅವರು ತಿಳಿಸಿದರು. 

ಚುನಾವಣೆಗೆ ಕೇವಲ 50 ದಿನಗಳು ಮಾತ್ರ ಉಳಿದಿವೆ ಎಂದು ಹೇಳಿದ ಶಿವಕುಮಾರ್, ಚುನಾವಣೆಗೆ ಬಿಜೆಪಿಯವರು ವಿಳಂಬ ಮಾಡುತ್ತಿದ್ದಾರೆ. ‘ಹೆಚ್ಚು ದಿನ ಸಿಕ್ಕರೆ ಅನುಕೂಲವಾಗುತ್ತದೆ ಎಂಬ ಭಾವನೆ ಬಿಜೆಪಿಗೆ ಇದೆ, ಹೀಗಾಗಿ ಅವರು ಇಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದರು.  ಪ್ರತಿದಿನ ಅಲ್ಪಾವಧಿ ಟೆಂಡರ್‌ಗಳು ನಡೆಯುತ್ತಿದ್ದು, ಮುಂಗಡ ಹಣ ಸಂಗ್ರಹಣೆ ಆಗುತ್ತಿದೆ, ಯಾವುದನ್ನೂ ನೋಡದೆ ತರಾತುರಿಯಲ್ಲಿ  ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದ ಅವರು, ಕಾಂಗ್ರೆಸ್ ಈ ಬಗ್ಗೆ ಚರ್ಚಿಸಿ, ನಿಲುವು ತೆಗೆದುಕೊಳ್ಳಲಾಗುವುದು ಎಂದರು. 

ತಕ್ಷಣವೇ ಚುನಾವಣೆ ನಡೆದರೂ ಚುನಾವಣೆಗೆ ಕಾಂಗ್ರೆಸ್ ಸನ್ನದ್ಧವಾಗಿದೆ ಎಂದಿರುವ ಶಿವಕುಮಾರ್, ಚುನಾವಣಾ ಆಯೋಗ ಇಷ್ಟೆಲ್ಲಾ ಆಗುವುದಕ್ಕೆ ಅವಕಾಶ ನೀಡದೆ ಕೂಡಲೇ ಚುನಾವಣಾ ದಿನಾಂಕ ಪ್ರಕಟಿಸಿ, ಈ ದೊಡ್ಡ ಪ್ರಮಾಣದ ಭ್ರಷ್ಟಾಚಾರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com