ಕರ್ನಾಟಕ ರಾಜಕೀಯ: ಐನಾಪುರ ಸೇರಿ ಹಲವರು ಕಾಂಗ್ರೆಸ್‌ಗೆ ಸೇರ್ಪಡೆ
ಬೆಂಗಳೂರು: ಬಿಜೆಪಿಯ ಮಾಜಿ ಶಾಸಕರಾದ ಕೊಳ್ಳೇಗಾಲದ ನಂಜುಂಡಸ್ವಾಮಿ, ಬಿಜಾಪುರದ ಮನೋಹರ್ ಐನಾಪುರ ಹಾಗೂ ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್ ಸೇರಿದಂತೆ ಹಲವು ನಾಯಕರು ಇಂದು ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇಬ್ಬರು ಮಾಜಿ ಶಾಸಕರು ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಬಿಜೆಪಿಯಲ್ಲಿದ್ದ ವಿಜಯಪುರದ ಮಾಜಿ ಶಾಸಕರಾದ ಮನೋಹರ ಐನಾಪುರ ಮತ್ತು ಕೊಳ್ಳೆಗಾಲದ ನಂಜುಂಡಸ್ವಾಮಿ ಅವರು ಇಂದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕರುಗಳಾದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಸಮ್ಮುಖದಲ್ಲಿ ಇವರುಗಳು ಕಾಂಗ್ರೆಸ್‌ಗೆ ಸೇರಿದ್ದು, ಇವರ ಜತೆ ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್ ಸಹ ಕಾಂಗ್ರೆಸ್‌ಗೆ ಸೇರಿದರು.
ದಲಿತರು ಬಿಜೆಪಿ ಕಡೆ ನೋಡಬೇಡಿ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ದಲಿತರು, ಬಿಜೆಪಿಯ ಕಡೆ ತಿರುಗಿ ನೋಡಬಾರದು, ಬಿಜೆಪಿ ಅವರು ಮನುವಾದಿಗಳು ಹಾಗೂ ಪುರೋಹಿತ ಶಾಹಿಗಳು ದೇಶಕ್ಕೆ ಶಾಪ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ದಲಿತರು, ತಳಸಮುದಾಯದವರು ಬಿಜೆಪಿ ಕಡೆ ನೋಡುವುದು ಬೇಡ, ಬಿಜೆಪಿ ಶ್ರೀಮಂತ ವರ್ಗದವರ ಪಕ್ಷ, ತಳ ಸಮುದಾಯಗಳ ಶ್ರೇಯೋಭಿವೃದ್ಧಿ ಬೇಕಿಲ್ಲ, ಸಂವಿಧಾನದ ಬಗ್ಗೆ ಗೌರವ ಇಲ್ಲ, ಹಿಂದುತ್ವದ ಮೇಲೆ ಅಧಿಕಾರಕ್ಕೆ ಬಂದು ಹಣ ಮಾಡಲು ಹೊರಟಿದ್ದಾರೆ ಎಂದು ದೂರಿದರು.
ಲೋಕಾಯುಕ್ತವನ್ನು ನಾನು ಮುಚ್ಚುವ ಕೆಲಸ ಮಾಡಿಲ್ಲ. ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಡೆದ ಕಾರಣ ಎಸಿಬಿ ರಚನೆ ಮಾಡಿದ್ದೆವು. ಭ್ರಷ್ಟಾಚಾರ ರಕ್ಷಣೆಗೆ ಎಸಿಬಿ ರಚನೆ ಎಂದು ಬಿಜೆಪಿಯವರು ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಕನಿಷ್ಠ ಕಾನೂನು ಜ್ಞಾನ ಇದ್ದವರು ಹೀಗೆ ಮಾತನಾಡಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. ಭ್ರಷ್ಟಾಚಾರಕ್ಕೆ ದಾಖಲೆ ಕೊಡಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಕೇಳುತ್ತಾರೆ. ಈಗ ಯಡಿಯೂರಪ್ಪ ಆಪ್ತ ವಿರೂಪಾಕ್ಷಪ್ಪ ಮಾಡಾಳ್ ಪುತ್ರ ಲಂಚದ ಜತೆ ಸಿಕ್ಕಿಬಿದ್ದಿರಲ್ಲ, ಇನ್ನೇನು ದಾಖಲೆ ಬೇಕು. ನೈತಿಕತೆ ಇದ್ದರೆ ಮುಖ್ಯಮಂತಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ