ಸಚಿವ ನಾರಾಯಣ ಗೌಡ ಕಾಂಗ್ರೆಸ್ ಸೇರ್ಪಡೆಗೆ ವಿರೋಧ: ಸಿದ್ದರಾಮಯ್ಯ- ಡಿ.ಕೆ ಶಿವಕುಮಾರ್ ಗೆ ಬಿಸಿ ಮುಟ್ಟಿಸಿದ ಮಂಡ್ಯ ಟಿಕೆಟ್ ಆಕಾಂಕ್ಷಿಗಳು!
ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿಯು ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದಂತೆ ಸ್ಥಳೀಯ ನಾಯಕರು ಒತ್ತಡ ಹಾಕುತ್ತಿದ್ದಾರೆ.
Published: 07th March 2023 10:02 AM | Last Updated: 07th March 2023 02:10 PM | A+A A-

ಕೆ.ಸಿ ನಾರಾಯಣ ಗೌಡ
ಮೈಸೂರು: ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿಯು ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದಂತೆ ಸ್ಥಳೀಯ ನಾಯಕರು ಒತ್ತಡ ಹಾಕುತ್ತಿದ್ದಾರೆ.
2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಚುನಾಯಿತರಾದ ನಾರಾಯಣ ಗೌಡ ಸರ್ಕಾರ ರಚನೆ ಹಿನ್ನೆಸಲೆಯಲ್ಲಿ ಬಿಜೆಪಿಗೆ ಬದಲಾಗಿದ್ದರು. ಬಳಿಕ ಕೆ.ಆರ್.ಪೇಟೆಯಿಂದ ಉಪಚುನಾವಣೆಯಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದರು.
ಇತ್ತೀಚೆಗೆ, ಅವರು ಕೆಲ ಕಾರಣಗಳಿಗಾಗಿ ಹೆಡ್ ಲೈನ್ ನಲ್ಲಿದ್ದರು, ಕಾಂಗ್ರೆಸ್ ತನಗೆ ಆಹ್ವಾನವನ್ನು ನೀಡಿದೆ ಎಂದು ಸುಳಿವು ನೀಡಿದ್ದರು. ಇದೀಗ ಮಾ.13ರಂದು ನಡೆಯುವ ಪ್ರಜಾಧ್ವನಿ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ.
ಈ ಬೆಳವಣಿಗೆಯಿಂದ ಸಿಟ್ಟಿಗೆದ್ದಿರುವ ಮಂಡ್ಯ ಕಾಂಗ್ರೆಸ್ ಮುಖಂಡರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಟಿಕೆಟ್ ಆಕಾಂಕ್ಷಿಗಳಾದ ವಿಜಯರಾಮೇಗೌಡ, ನಾಗೇಂದ್ರ, ಬಿ.ಪ್ರಕಾಶ್, ಕೀಕೆರೆ ಪ್ರಕಾಶ್, ಮಾಜಿ ಶಾಸಕ ಚಂದ್ರಶೇಖರ್ ಸೇರಿದಂತೆ ಹಲವು ಮುಖಂಡರು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿದರು.
ಕೆ.ಆರ್.ಪೇಟೆಯಲ್ಲಿ ಆರು ಜನ ಆಕಾಂಕ್ಷಿಗಳ ಪೈಕಿ ಒಬ್ಬರನ್ನು ಕಣಕ್ಕಿಳಿಸಿದರೆ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ನಾರಾಯಣಗೌಡ ಜನವಿರೋಧಿಯಾಗಿದ್ದಾರೆ, ಸಹಾನುಭೂತಿ ಕಳೆದುಕೊಂಡಿದ್ದಾರೆ, ಹೀಗಾಗಿ ಕಾಂಗ್ರೆಸ್ ಗೆ ಅವರ ಸೇರ್ಪಡೆ ಯಾವುದೇ ಪ್ರಯೋಜನವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಸಂಬಂಧ ಪಕ್ಷ ಸಮೀಕ್ಷೆ ನಡೆಸಲಿದೆ ಎಂದು ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮೋದಿ ರೋಡ್ ಶೋ ತಂತ್ರಕ್ಕೆ ದೇವೇಗೌಡರಿಂದ ಪ್ರತಿತಂತ್ರ: ರಣರಂಗವಾಗಿ ಬದಲಾಗಲಿದೆ ಹಳೇ ಮೈಸೂರು ಭಾಗ!
ಕ್ಷೇತ್ರದಲ್ಲಿ ಪ್ರಬಲ ಶಕ್ತಿಯಾಗಿರುವ ಬಿಜೆಪಿ ಮತ್ತು ಜೆಡಿಎಸ್‌ಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಕೂಡ ಹಣಬಲದ ಅಭ್ಯರ್ಥಿಗಳತ್ತ ದೃಷ್ಟಿ ಹಾಯಿಸಿದೆ. ಈ ಪ್ರಕ್ರಿಯೆಯಿಂದ ಅತೃಪ್ತಿಗೊಂಡಿರುವ ಆಕಾಂಕ್ಷಿಗಳು ಮತ್ತು ಮುಖಂಡರು ಮಾಜಿ ಸಂಸದ ರೆಹಮಾನ್ ಖಾನ್ ಅವರನ್ನು ಭೇಟಿ ಮಾಡಿ ನಾರಾಯಣ ಗೌಡ ಅವರನ್ನು ಪಕ್ಷಕ್ಕೆ ಪ್ರವೇಶಿಸದಂತೆ ತಡೆಯುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ ಕೆಆರ್ ಪೇಟೆಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ನಾರಾಯಣಗೌಡರ ಸೇರ್ಪಡೆ ವಿರೋಧಿಸಿ ಬ್ಯಾನರ್, ಬಂಟಿಂಗ್ಸ್, ಪ್ರಚಾರ ಸಾಮಗ್ರಿಗಳಿಗೆ ಬೆಂಕಿ ಹಚ್ಚಿದರು. ಕಾಂಗ್ರೆಸ್‌ಗೆ ಗೌಡರ ಕೊಡುಗೆ ಎನು ಎಂದು ಪ್ರಶ್ನಿಸಿದ್ದಾರೆ. ಆಕಾಂಕ್ಷಿಗಳಿಗೆ ಟಿಕೆಟ್ ನಿರಾಕರಿಸಲು ಕಾರಣಗಳನ್ನು ಪ್ರಶ್ನಿಸಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಕ್ಷೇತ್ರದಿಂದ ಸೋತಿದ್ದರೂ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದ್ದೇವೆ, ಹೀಗಿರುವಾಗ, ಬಿಎಸ್‌ಪಿ, ಜೆಡಿಎಸ್, ಬಿಜೆಪಿ ಜತೆಗಿದ್ದ ನಾರಾಯಣಗೌಡರನ್ನು ಏಕೆ ಕರೆತರಬೇಕು ಎಂದು ಪ್ರಶ್ನಿಸಿದ್ದಾರೆ.
ನಾರಾಯಣ ಗೌಡ ಮತ್ತು ಅವರ ಬೆಂಬಲಿಗರು ಕ್ಷೇತ್ರದಲ್ಲಿ ತಮ್ಮನ್ನು ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ. ಮುಷ್ಕರ ನಿರತ ಪಕ್ಷದ ಕಾರ್ಯಕರ್ತರು ಗಂಗಾಧರ್ ಅವರನ್ನು 2 ಗಂಟೆಗೂ ಹೆಚ್ಚು ಕಾಲ ವಾದಿಸಿ, ಸಮೀಕ್ಷಾ ವರದಿಯ ಬಗ್ಗೆ ತಿಳಿಸಲು ಮತ್ತು ಕಾಂಗ್ರೆಸ್‌ನಲ್ಲಿ ಗೌಡರಿಗೆ ಇದು ಸುಗಮ ಪ್ರಯಾಣವಲ್ಲ ಎಂದು ವೀಡಿಯೊ ಸಂದೇಶವನ್ನು ಕಳುಹಿಸಲು ಒತ್ತಾಯಿಸಿದರು. ಗಂಗಾಧರ್ ಸಭೆಯನ್ನು ಮುಗಿಸಿ ಕಾಂಗ್ರೆಸ್ ಕಚೇರಿಯಿಂದ ನಿರ್ಗಮಿಸಿದರು.