ಸಿಎಂ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ, ನಾಳೆ ಸಾಂಕೇತಿಕ ಕರ್ನಾಟಕ ಬಂದ್

ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಸರ್ಕಾರದ ಅಧಿಕಾರಿ ಮಾಡಾಳ್ ಪ್ರಶಾಂತ್ ಪ್ರಕರಣ ವಿಪಕ್ಷ ಕಾಂಗ್ರೆಸ್ ಗೆ ಟಾನಿಕ್ ಸಿಕ್ಕಂತಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಸರ್ಕಾರದ ಅಧಿಕಾರಿ ಮಾಡಾಳ್ ಪ್ರಶಾಂತ್ ಪ್ರಕರಣ ವಿಪಕ್ಷ ಕಾಂಗ್ರೆಸ್ ಗೆ ಟಾನಿಕ್ ಸಿಕ್ಕಂತಾಗಿದೆ. 

"ಬಿಜೆಪಿ ಸರ್ಕಾರ ಭಾರೀ ಭ್ರಷ್ಟಾಚಾರ, ಅಕ್ರಮ ವ್ಯವಹಾರಗಳಲ್ಲಿ ತೊಡಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ನಾಳೆ ಅಂದರೆ ಮಾರ್ಚ್ 9 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾದ ಡಿಕೆ ಶಿವಕುಮಾರ್‌, ಬಿಜೆಪಿ ಸರ್ಕಾರದ ಸಾಧನೆಗಳೆಂದರೆ, ಪ್ರತಿಯೊಂದು ಗುತ್ತಿಗೆಯಲ್ಲೂ 40% ಕಮಿಷನ್, ಶಾಲಾ ಅನುದಾನದಲ್ಲಿ 40% ಕಮಿಷನ್, ಧಾರ್ಮಿಕ ಮಠಗಳ ಅನುದಾನದಲ್ಲಿ 30% ಕಮಿಷನ್, ಮೈಸೂರು ಸ್ಯಾಂಡಲ್ ಸೋಪ್ ಅಕ್ರಮದಲ್ಲಿ ಲಂಚ, ವರ್ಗಾವಣೆ ಮತ್ತು ಪೋಸ್ಟಿಂಗ್ ಗೆ ಲಂಚ ಹೀಗಿಯೇ ಸಾಗುತ್ತಿದೆ.

"ಪಿಎಸ್ಐ, ಸಹಾಯಕ ಪ್ರಾಧ್ಯಾಪಕ, ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಜಿಲ್ಲಾ ಸಹಕಾರಿ ಬ್ಯಾಂಕ್, ಪೌರಕಾರ್ಮಿಕ ಕೆಲಸ, ಕೆಎಂಎಫ್ ಹುದ್ದೆ, ಸಹಾಯಕ ರಿಜಿಸ್ಟ್ರಾರ್ ಹುದ್ದೆ ನೇಮಕಾತಿ ಅಕ್ರಮಗಳು ಬಿಜೆಪಿ ಸರಕಾರದ ಸಾಧನೆಗಳಾಗಿವೆ" ಬಿಜೆಪಿ ಹಾಗೂ ಬೊಮ್ಮಾಯಿ ಅವರ ಭ್ರಷ್ಟಾಚಾರಕ್ಕೆ ಇತ್ತೀಚಿನ ಕೆಎಸ್ಡಿ ಎಲ್ ಅಕ್ರಮ ಸಾಕ್ಷಿಯಾಗಿದೆ ಎಂದು ಆರೋಪಿಸಿದರು. 

ನಾಳೆ ಬೆಳಗ್ಗೆ 11 ಗಂಟೆಯವರೆಗೆ ಸಾಂಕೇತಿಕ ಬಂದ್: ಬಂದ್ ಎಂದು ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಲು ಬೆಳಗ್ಗೆ 9 ಗಂಟೆಯಿಂದ ಬೆಳಗ್ಗೆ 11 ಗಂಟೆವರೆಗೂ 2 ಗಂಟೆ ಸಾಂಕೇತಿಕ ಬಂದ್ ಮಾಡಲಾಗುವುದು. ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆ, ಸಾರಿಗೆ ಹಾಗೂ ಇತರ ಅಗತ್ಯ ಸೇವೆಗಳನ್ನು ಬಂದ್ ವ್ಯಾಪ್ತಿಯಿಂದ ಹೊರಗಿಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. 

ಕಾಂಗ್ರೆಸ್ ಬೇಡಿಕೆಯೇನು?: ಕಾಂಗ್ರೆಸ್ ಪಕ್ಷ ರಾಜ್ಯದ ಪ್ರತಿ ನಗರದಲ್ಲಿ ಬಿಜೆಪಿ ಹಾಗೂ ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಪ್ರತಿಭಟನೆ ನಡೆಸಲಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕನ್ನಡಿಗರು ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಪಣ ತೊಟ್ಟಿದ್ದಾರೆ. ನಮ್ಮ ಬೇಡಿಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು ಅಥವಾ ಅವರನ್ನು ವಜಾಗೊಳಿಸಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com