ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರುವ ಬಗ್ಗೆ ನಾಳೆ ಘೋಷಣೆ?: ಪುಷ್ಠಿ ನೀಡಿದ ಜೆಡಿಎಸ್ ಶಾಸಕ ಪುಟ್ಟರಾಜು ಹೇಳಿಕೆ
ಮೈಸೂರು/ ಮಂಡ್ಯ: ಮಂಡ್ಯ ಕ್ಷೇತ್ರದ ಸ್ವತಂತ್ರ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹ ಹಲವು ಸಮಯಗಳಿಂದ ಕೇಳಿಬರುತ್ತಿದೆ. ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಕುತೂಹಲ ಇನ್ನೂ ಇರುವಾಗಲೇ ನಾಳೆ(ಮಾರ್ಚ್ 10) ಬಿಜೆಪಿ ಸೇರುತ್ತಾರೆ ಎಂದು ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು (CS Puttaraju) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಸ್.ಪುಟ್ಟರಾಜು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಾಳೆ ಬಿಜೆಪಿ ಸೇರ್ತಾರೆ. ಮೋದಿ ಕಾರ್ಯಕ್ರಮದಲ್ಲೇ ಪಕ್ಷ ಸೇರ್ಪಡೆಗೆ ಪ್ಲ್ಯಾನ್ ಮಾಡಿದ್ದರು. ಆದರೆ ಮೋದಿಯವರು ಬರುವ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮ ಆಗಿರುವುದರಿಂದ ಅವಕಾಶ ಸಿಗಲಿಲ್ಲ ಎಂದು ಹೇಳಿದರು. ಈ ಮೂಲಕ ಸುಮಲತಾ ಬಿಜೆಪಿ ಸೇರುವುದು ಖಚಿತ ಎಂಬಂತಾಗಿದೆ.
ನಾಳೆ ಮಧ್ಯಾಹ್ನ ಸುಮಲತಾರಿಂದ ಸುದ್ದಿಗೋಷ್ಠಿ: ಈ ಮಧ್ಯೆ ನಾಳೆ ಸುಮಲತಾ ಅಂಬರೀಶ್ ಸುದ್ದಿಗೋಷ್ಠಿ ಕರೆದಿದ್ದು, ಅಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಬಗ್ಗೆ ಘೋಷಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸುಮಲತಾ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಸುಮಲತಾ ಅಂಬರೀಶ್ ತಮ್ಮ ನಿರ್ಧಾರ ಪ್ರಕಟಿಸಲು ಸುದ್ದಿಗೋಷ್ಠಿ ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ಮಾರ್ಚ್ 12ರಂದು ಪ್ರಧಾನಿ ಮೋದಿ ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಕಾರ್ಯಕ್ರಮದ ಸಿದ್ಧತೆಗೆ ಸುಮಲತಾ ಉತ್ಸಾಹದಿಂದ ಓಡಾಡುತ್ತಿದ್ದಾರೆ. ಇತ್ತೀಚೆಗೆ ಹಿರಿಯ ರಾಜಕಾರಣಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ