ಬಿಜೆಪಿ ಪಕ್ಷಕ್ಕೆ ಇನ್ಮುಂದೆ ನನ್ನ ಸಂಪೂರ್ಣ ಬೆಂಬಲ; ಪ್ರಾಣ ಬಿಡುತ್ತೇನೆ ಹೊರತು ಮಂಡ್ಯ ಬಿಡಲ್ಲ: ಸಂಸದೆ ಸುಮಲತಾ ಅಂಬರೀಷ್

ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಮಂಡ್ಯ ಕ್ಷೇತ್ರದ ಸಂಸದೆಯಾದ ಸುಮಲತಾ ಅಂಬರೀಷ್ ರಾಜಕೀಯವಾಗಿ ಇಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ ಅಂಬರೀಷ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ ಅಂಬರೀಷ್

ಮಂಡ್ಯ: ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಮಂಡ್ಯ ಕ್ಷೇತ್ರದ ಸಂಸದೆಯಾದ ಸುಮಲತಾ ಅಂಬರೀಷ್ ರಾಜಕೀಯವಾಗಿ ಇಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

ಮಂಡ್ಯದಲ್ಲಿ ಇಂದು ತಮ್ಮ ಸಂಸದರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವನ್ನು ಸುಸ್ಥಿರವಾಗಿ ಮುನ್ನಡೆಸಿಕೊಂಡು ಹೋಗುವ ನಾಯಕತ್ವ ನರೇಂದ್ರ ಮೋದಿಯವರದ್ದು. ನಾನು ನಾಲ್ಕು ವರ್ಷಗಳ ಹಿಂದೆ ಪಕ್ಷೇತರಳಾಗಿ ಸ್ಪರ್ಧಿಸಿದ್ದೆ. ಸ್ವಾಭಿಮಾನದ ಹೆಸರಿನಲ್ಲಿ ಮತ ಕೇಳಿದ್ದ ನಾನು ಇಂದಿಗೂ ಸ್ವಾಭಿಮಾನವಾಗಿಯೇ ಮುಂದುವರಿಯುತ್ತೇನೆ ಮತ್ತು ಕೊನೆ ಉಸಿರು ಇರುವವರೆಗೂ ಸ್ವಾಭಿಮಾನಳಾಗಿರುತ್ತೇನೆ ಎಂದು ಮಾತು ಕೊಡುತ್ತೇನೆ ಎಂದರು.

ಬಿಜೆಪಿ ಸೇರಲ್ಲ, ಬೆಂಬಲ: ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆಯಾಗುವುದಿಲ್ಲ. ಸದ್ಯ ಬಿಜೆಪಿ ಸೇರ್ಪಡೆಗೆ ಕೆಲವು ತಾಂತ್ರಿಕ ತೊಂದರೆಗಳಿವೆ. ಮೋದಿ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ಅಂಬರೀಶ್ ಹೆಸರಿಗೆ ಕಳಂಕ ತರುವ ಕೆಲಸ ನಾನು ಮಾಡುವುದಿಲ್ಲ. ಈ ಜನ್ಮದಲ್ಲಿ ನಾನೆಂದೂ ಕಳಂಕ ತರುವ ಕೆಲಸ ಮಾಡುವುದಿಲ್ಲ. ನಾನು ರಾಜಕಾರಣ ಬಿಡುತ್ತೇನೆ ಹೊರತು ಸ್ವಾಭಿಮಾನ ಬಿಡಲ್ಲ. ಪ್ರಾಣ ಬಿಟ್ಟರು ಕೂಡ ನಾನು ಮಂಡ್ಯ ಬಿಡುವುದಿಲ್ಲ ಎಂದು ಸಂಸದೆ ಘೋಷಿಸಿದರು.

ಮಂಡ್ಯದ ಕಲುಷಿತ ರಾಜಕೀಯವನ್ನು ಸ್ವಚ್ಛಗೊಳಿಸಲು ನಾನು ಮೋದಿ ಅವರಿಗೆ ಬೆಂಬಲ ನೀಡುತ್ತೇನೆ. ನನ್ನ ನಿರ್ಧಾರದಲ್ಲಿ ರಿಸ್ಕ್ ಇರಬಹುದು. ಆದರೆ ಜನರ ಅಭಿವೃದ್ಧಿ‌ ಮುಖ್ಯ. ಈ ಕಾರಣಕ್ಕೆ ನಾನು ರಿಸ್ಕ್‌ ತೆಗೆದುಕೊಂಡು ನಿರ್ಧಾರ ಮಾಡಿದ್ದೇನೆ. ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯಾಗುತ್ತಿದೆ. ನಾನು ಭಾರತೀಯ ಎಂದು ತಲೆ ಎತ್ತುವಂತೆ ಮೋದಿ ಮಾಡಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆದಾಗ ಕೆಆರ್‍ಎಸ್‍ನಲ್ಲಿ ಬಾಗಿನ ಅರ್ಪಿಸಿದ್ದರು. ಅದಕ್ಕೂ ಮೊದಲು ದೆಹಲಿಯಲ್ಲಿ ನನ್ನ ಭೇಟಿ ಮಾಡಿ ಮಂಡ್ಯಗೆ ಏನು ಮಾಡಬೇಕೆಂದು ನನ್ನ ಕೇಳಿದ್ದರು. ಆಗ ಮೈಶುಗರ್ ಕಾರ್ಖಾನೆ ಓಪನ್ ಮಾಡಿಸಿ ಎಂದೆ. ಆಗ ಪರ ವಿರೋಧ ಎಲ್ಲವೂ ಬಂದಿತ್ತು. ಆದರೂ ಯಡಿಯೂರಪ್ಪ ಅವರು ಸುಮಲತಾ ಹೇಳಿದ್ದಾರೆ ಎಂದು ಮೈಶುಗರ್ ಓಪನ್ ಮಾಡಿಸಿದರು. ಬೊಮ್ಮಾಯಿ ಅವರು 50 ಕೋಟಿಯನ್ನು ನೀಡಿದರು. ಈ ಅಭಿವೃದ್ಧಿ ಆಗಿದ್ದು ಬಿಜೆಪಿಯಿಂದ. ನನಗೆ ಬಿಜೆಪಿ ಬೆಂಬಲ ನೀಡಿದೆ. ಅಭಿವೃದ್ಧಿ ಆಗಬೇಕು ಅಂದರೆ ಬಿಜೆಪಿ ಬೇಕು. ಅದಕ್ಕೆ ನಾನು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇನೆ ಎಂದು ತಿಳಿಸಿದರು.

ಬಿಜೆಪಿಗೆ ಸೇರಲು ಕಾನೂನು ತೊಡಕು: ಈ ವೇಳೆ ಬಿಜೆಪಿ ಸೇರುತ್ತೀರಾ ಎಂಬ ಪ್ರಶ್ನೆಗೆ, ನಾನು ಪಕ್ಷೇತರ ಸದಸ್ಯೆ ಆಗಿದ್ದೇನೆ. ಪಕ್ಷೇತರ ಸದಸ್ಯರು ಜಯಗಳಿಸಿದ 6 ತಿಂಗಳ ಒಳಗಡೆ ಸೇರಿದರೆ ಮಾತ್ರ ಅದು ಮಾನ್ಯವಾಗುತ್ತದೆ. ಈ ಕಾನೂನು ಸಮಸ್ಯೆ ಇರುವ ಕಾರಣ ನಾನು ಈಗ ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com